Sunday, 15th December 2024

ಅಭಿವೃದ್ಧಿ ಪಥದಲ್ಲಿ ಹಾವೇರಿ: ಅಸ್ತಿತ್ವಕ್ಕೆ ಬಂದು ೨೫ ವರ್ಷ

ಹಾವೇರಿ ಜಿಲ್ಲೆ ಹಲವಾರು ರಂಗಗಳಲ್ಲಿ ಮುನ್ನಡೆ ಸಾಧಿಸಿದೆ. ನೂತನವಾಗಿ ಜಿಲ್ಲೆ ಅಸ್ತಿತ್ವಕ್ಕೆ ಬಂದಾಗ ನಿರೀಕ್ಷೆಗಳು ಬಹಳಷ್ಟಿ ದ್ದವು. ಉತ್ತರ ಹಾಗೂ ದಕ್ಷಿಣ ಕರ್ನಾಟಕಗಳ ನಡುವಣ ಸಮತೋಲನ ಕುರಿತಂತೆ ಉತ್ತರ ಕರ್ನಾಟಕದಲ್ಲಿ ಕಂಡುಬಂದ ಅಸಮಾಧಾನಕ್ಕೆ ಪ್ರತಿಯಾಗಿ ಸರ್ಕಾರವು ೨೦೦೦ನೇ ವರ್ಷದ ಅಕ್ಟೋಬರ್‌ನಲ್ಲಿ ಡಾ. ಡಿ.ಎಂ. ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನೆಗಳ ಸಮಿತಿ ರಚಿಸಿತು.

ಈ ಸಮಿತಿಯ ಅನುಸಾರ ಹಾವೇರಿ ಜಿಲ್ಲೆಯ ಅಭಿವೃದ್ಧಿಗಿರುವ ತೊಡಕುಗಳನ್ನು ಗುರುತಿಸಿ ಅವುಗಳ ನಿವಾರಣೆಗಾಗಿ ಹಾವೇರಿಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲೆಯ ಸರ್ವಜನತೆ ಪಣತೊಡಬೇಕಾಗಿದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮಿಜಿ ಅಭಿಪ್ರಾಯ ಪಟ್ಟರು.

ಗುರುವಾರ ಇಲ್ಲಿನ ಬಸವೇಶ್ವರ ಬಿಇಡಿ ಕಾಲೇಜಿನಲ್ಲಿ ಬಸವಕೇಂದ್ರ ಹೊಸಮಠದಿಂದ ಆಯೋಜಿಸಲಾಗಿದ್ದ “ಹಾವೇರಿಜಿಲ್ಲೆಗೆ ರಜತ ಸಂಭ್ರಮ ಭವಿಷ್ಯದಲ್ಲಿ ನಮ್ಮ ಕನಸಿನ ಹಾವೇರಿ” ವಿಚಾರ ಸಂಕಿರಣದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಪ್ರಕ್ರಿಯೆ ಎಂಬುದು ಉತ್ತಮ ಬದುಕಿಗೆ ಹಾಗೂ ಜನರ ಕಾರ್ಯನಿರ್ವಹಣೆಗೆ ಇರುವ ಭೌತಿಕ ಸೌಕರ್ಯಗಳನ್ನು ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಹೊಸ ಕೌಶಲ್ಯಗಳನ್ನು ಪಡೆಯುವುದು ಹಾಗೂ ಅಳವಡಿಸಿಕೊಳ್ಳುವುದಕ್ಕಾಗಿ ವರಮಾನದ ಹೆಚ್ಚಳವನ್ನು ಒಳಗೊಳ್ಳುತ್ತದೆ.

ಬೇರೆ ಬೇರೆ ಜಿಲ್ಲೆಗಳಲ್ಲಿ ಒದಗಿಸಲಾದ ವಿವಿಧ ಮೂಲಭೂತ ಕನಿಷ್ಟ ಅವಶ್ಯಕತೆಗಳು ಹಾಗೂ ಇತರ ಸೌಕರ್ಯಗಳನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳು ಇಚ್ಚಾಶಕ್ತಿ ಪದರ್ಶಿಸಬೇಕು. ಜಿಲ್ಲೆಯ ಅಭಿವೃದ್ಧಿಯಲ್ಲಿ ಜಿಲ್ಲೆಯ ಜನತೆಯ ಪಾತ್ರವು ಮಹತ್ವದ್ದಾಗಿದೆ ಎಂದು ಹೇಳಿದರು.

ಹಾವೇರಿ ಜಿಲ್ಲೆಯ ಇತಿಹಾಸದ ಬಗ್ಗೆ ಪ್ರಮೋದ ನಲವಾಗಲ ಉಪನ್ಯಾಸ ನೀಡಿ ಹಾವೇರಿಜಿಲ್ಲೆಗೆ ತನ್ನದೇ ಆದ ಐತಿಹಾಸಿಕ ಹಿನ್ನಲೆಯಿದೆ. ಶಿಲಾಶಾಸನಗಳು, ಪುರಾತನ ದೇವಾಲಯಗಳು ಜಿಲ್ಲೆಯ ಹಿರಿಮೆಯನ್ನು ಸಾರಿ, ಸಾರಿ ಹೇಳುತ್ತವೆ. ಇಂದಿನ ಯುವಜನಾಂಗ ಇತಿಹಾಸವನ್ನು ಅರಿತು ಮುನ್ನಡೆಯಬೇಕಿದೆ ಎಂದರು.

ಪತ್ರಕರ್ತ/ಸಾಹಿತಿ ಮಾಲತೇಶ ಅಂಗೂರ ಹಾವೇರಿಜಿಲ್ಲೆ ರಚನೆಗೆ ನಡೆದ ಹೋರಾಟ ಹಾಗೂ ಅಭಿವೃದ್ಧಿಯ ಬಗ್ಗೆ ಮಾತನಾಡಿ, ಹಾವೇರಿಜಿಲ್ಲೆಯನ್ನು ಅಂದಿನ ಸರ್ಕಾರ ಬೆಳ್ಳೆತಟ್ಟಿಯಲ್ಲಿ ಇಟ್ಟು ಕೊಟ್ಟಿದ್ದಲ್ಲ. ಹಾವೇರಿಜಿಲ್ಲೆಯ ರಚನೆಗೆ ಅನೇಕ ಹೋರಾಟ ಗಳು ನಡೆದವು, ಅನೇಕರು ಜೇಲುವಾಸವನ್ನು ಅನುಭವಿಸಿದರು.

ಜಿಲ್ಲೆಯ ರಚನೆಗೆ ೧೯೯೭ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲರ ಮಂತ್ರಿ ಮಂಡಳದಲ್ಲಿ ಸಚಿವರಾಗಿದ್ದ ದಿ.ಸಿ.ಎಂ.ಉದಾಸಿ, ಬಸವರಾಜ ಶಿವಣ್ಣನವರ ಹಾವೇರಿ ಜಿಲ್ಲೆಯನ್ನು ರಚಿಸಲೇಬೇಕೆನ್ನುವ ತೀವೃ ಒತ್ತಡ ಹಾಕಿದ ಬೆನ್ನಲ್ಲಿ, ಇತ್ತ ಜಿಲ್ಲೆಯ ರಚನೆಯ ಹೋರಾಟ ತೀವೃಸ್ವರೂಪ ಪಡೆದುಕೊಂಡ ಹಿನ್ನಲೆಯಲ್ಲಿ ಒಂದು ಹಂತದಲ್ಲಿ ಬಸವರಾಜ ಶಿವಣ್ಣನವರ ಹಾವೇರಿಜಿಲ್ಲೆ ರಚಿಸದಿದ್ದರೇ ಸಚಿವಸ್ಥಾನ ತ್ಯಾಗಕ್ಕೆ ಮುಂದಾಗಿದ್ದರಿಂದ ಹಾವೇರಿಜಿಲ್ಲೆಯನ್ನು ಘೋಷಿಸಲಾಯಿತು.

ಅನೇಕ ರಂಗಗಳಲ್ಲಿ ಜಿಲ್ಲೆ ಅಭಿವೃದ್ಧಿ ಕಂಡಿದೆಯಾದರೂ ಉದ್ಯೋಗ ಸೃಜನೆ ಹಾಗೂ ಮೂಲ ಸೌಕರ್ಯಗಳಲ್ಲಿ ಹಾವೇರಿಜಿಲ್ಲೆ ಹಿಂದೆ ಬಿದ್ದಿದೆ. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ೨೫ವರ್ಷಗಳಿಂದ ನಗರಸಾರಿಗೆ ಆರಂಭಗೊಂಡಿಲ್ಲ. ನಗರದ ಅನೇಕ ಕಡೆಗಳಲ್ಲಿ ಬಸ್ ತಂಗುದಾಣಗಳಿವೆ, ಆದರೆ ಬಸ್‌ಗಳು ಸಂಚರಿಸುವುದಿಲ್ಲ, ಇದು ನಮ್ಮ ಹಾವೇರಿ ಎಂದರು.

ಸಾಹಿತ್ಯಿಕವಾಗಿ, ಸಾಂಸ್ಕ್ರತಿಕವಾಗಿ ಹಾವೇರಿಜಿಲ್ಲೆಯ ಬೆಳವಣಿಗೆಯ ಕುರಿತು ಮಾತನಾಡಿದ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ನೂತನವಾಗಿ ಅಸ್ತಿತಕ್ಕೆ ಬಂದ ಜಿಲ್ಲೆಗಳಲ್ಲಿ ಹಾವೇರಿಜಿಲ್ಲೆ ಅತ್ಯಂತ ಸಮರ್ಪಕ ಜಿಲ್ಲೆಯಾಗಿದೆ. ಸಾಹಿತ್ಯಿಕವಾಗಿ ಹಾವೇರಿಜಿಲ್ಲೆ ಶ್ರೀಮಂತ ಜಿಲ್ಲೆಯಾಗಿದೆ. ವರಕವಿ ಸರ್ವಜ್ಞ, ದಾಸಶ್ರೇಷ್ಠರಾದ ಕನಕದಾಸರು, ನಾಡಿಗೆ ಭಾವೈಕ್ಷತೆ ಸಾರಿಗ ಶರೀಫರು, ಗುರು ಗೋವಿಂದ ಭಟ್ಟರು, ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ವಿ.ಕೃ.ಗೋಕಾಕ ಅವರಂತ ಅನೇಕ ಮಹನೀಯರನ್ನು ನಾಡಿಗೆ ನೀಡಿದ ಹೆಮ್ಮೆ ಹಾವೇರಿಜಿಲ್ಲೆಗೆ ಇದೆ.

ಸರ್ಕಾರ ಅನೇಕ ಟ್ರಸ್ಟ್‌ಗಳನ್ನು, ಪ್ರಾಧಿಕಾರಗಳನ್ನು ಹಾವೇರಿಜಿಲ್ಲೆಯಲ್ಲಿ ರಚಿಸಿದೆ. ಹಾವೇರಿಜಿಲ್ಲೆ ಅಭಿವೃದ್ಧಿಯತ್ತ ಮುನ್ನಡೆ ಯುತ್ತಿದೆ. ಆದರೆ ಸಾಂಸ್ಕ್ರತಿಕ ರಾಜಕಾರಣದ ಕೊರತೆಯಿಂದಾಗಿ ಅನೇಕ ಅವಘಡಗಳಾಗುತ್ತಿವೆ. ಜಿಲ್ಲೆಯ ಮಹನೀಯರ ಹೆಸರಿನಲ್ಲಿರುವ ಟ್ರಸ್ಟ್‌ಗಳಿಗೆ ಸರ್ಕಾರ ಜಿಲ್ಲೆಯವರನ್ನು ನೇಮಿಸದೇ ಬೇರೆ ಜಿಲ್ಲೆಯವರನ್ನು ನೇಮಕ ಮಾಡಿದೆ. ಅಂತವರಿಂದ ಹೇಗೆ ಕೆಲಸ ನಿರ್ವಹಿಸಲು ಸಾಧ್ಯ? ಎನ್ನುವ ಸಾಮಾನ್ಯ ತಿಳುವಳಿಕೆ ಅಧಿಕಾರದಲ್ಲಿರುವವರಿಗೆ ಇರಬೇಕಾಗುತ್ತದೆ ಎಂದರು.

ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಸಂಬಂಧಿದಂತೆ ಉಪನ್ಯಾಸಕ ಶ್ರೀಧರ ಅಗಸಿಬಾಗಿಲ ಮಾತನಾಡಿ ಹಾವೇರಿಜಿಲ್ಲೆಯಲ್ಲಿ ಪ್ರಾವಾಸೋಧ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳ ಬಗ್ಗೆ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕಿದೆ ಎಂದರು.

ಜಿಲ್ಲೆಯ ಆರ್ಥಿಕಾಭಿವೃದ್ಧಿಯ ಕುರಿತು ಎಚ್.ಎಸ್.ಕಬ್ಬಿಣಕಂತಿಮಠ ಮಾತನಾಡಿ, ಜಿಲ್ಲೆ ಆರ್ಥಿಕವಾಗಿ ಅಭಿವೃದ್ಧಿಯಾಗ ಬೇಕಾದರೆ ಜಿಲ್ಲೆಯ ಜನರ ತಲಾ ಆದಾಯ ಹೆಚ್ಚಳವಾಗಬೇಕು, ಹಾವೇರಿಜಿಲ್ಲೆ ಕೃಷಿ ಆಧಾರಿತ ಜಿಲ್ಲೆಯಾಗಿದೆ. ವ್ಯಜ್ಞಾನಿಕವಾಗಿ ಕೃಷಿ ಉತ್ಪನ್ನಗಳನ್ನು ಬೆಳೆಯುವ ನಿಟ್ಟಿನಲ್ಲಿ ನೂತನ ಕೃಷಿ ಪದ್ದತಿಯನ್ನು ರೂಪಿಸಬೇಕಿದೆ. ಕೃಷಿ ಉತ್ಪನ್ನಗಳಿಗೆ ಪೂರಕವಾಗಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಅಂದಾಗ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಗಳು ಲಭ್ಯವಾಗುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ ಹೋರಾಟದಿಂದ ಅಸ್ತಿತ್ವಕ್ಕೆ ಬಂದಿರುವ ಹಾವೇರಿಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಚಿಂತನೆಗಳು ನಡೆಯಬೇಕು. ಜಿಲ್ಲೆಗೆ ಇಂಜನಿಯರಿಂಗ್ ಕಾಲೇಜು ಮುಂಜುರಾಗಿ ನಡೆಯುತ್ತಿದೆ, ಮೆಡಿಕಲ್ ಕಾಲೇಜು ಆರಂಭಿಕ ಹಂತದಲ್ಲಿದೆ. ಯುವಜನತೆಗೆ ಶಿಕ್ಷಣ ನೀಡಿದರೇ ಸಾಲದು, ಉದ್ಯೋಗವನ್ನು ಸಹ ನೀಡುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಹಾವೇರಿ-ರಾಣೇಬೆನ್ನೂರುಗಳಲ್ಲಿ ಮೇಜ್ ಪಾರ್ಕ ಸ್ಥಾಪನೆಯಾಗಬೇಕಿದೆ. ಕೃಷಿ ಹಾಗೂ ಕೈಗಾರಿಕೆಗಳಿಗೆ ಹೆಚ್ಚಿನ ಆಧ್ಯತೆ ಸಿಗಬೇಕಿದೆ ಎಂದರು.

ವೇದಿಕೆಯಲ್ಲಿ ಗಣ್ಯರಾದ ನಿವೃತ್ತ ಎಸ್‌ಪಿ ಶಿವಕುಮಾರ ತಾವರಗಿ, ಬಸವರಾಜ ಹೆಡಿಗ್ಗೊಂಡ, ಎನ್.ಎನ್. ಗಾಳೆಮ್ಮನವರ, ಮುರುಗೆಪ್ಪ ಕಡೆಕೊಪ್ಪ, ಪರಮೇಶ್ವರಪ್ಪ ಮೇಗಳಮನಿ ಮತ್ತಿತರರು ಇದ್ದರು.

ಬಿಇಡಿ ಕಾಲೇಜಿನ ಪ್ರಾ. ಮಂಜುನಾಥ ಒಡ್ಡರ ಸ್ವಾಗತಿಸಿದರು, ಬಿಇಡಿ ವಿದ್ಯಾರ್ಥಿನಿ ಪ್ರೀಯಾ ರೊಡ್ಡಣ್ಣನವರ ನಿರೂಪಿಸಿ, ವಂದಿಸಿದರು.