ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿನ ತುರವೇಕೆರೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಪ್ರಚಾರ ಭಾಷಣ ಮಾಡುವ ವೇಳೆ ಆಡಿದ ಮಾತಿನ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿ ದ್ದಾರೆ.
ಇದರಿಂದ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಮಾನವ ಕುಲಕ್ಕೇ ದೊಡ್ಡ ಅವಮಾನವಾಗಿದೆ. ಇಂತಹ ವ್ಯಕ್ತಿಯನ್ನು ಎನ್‌ಡಿಎ ಮೈತ್ರಿಕೂಟದಲ್ಲಿ ಹೇಗೆ ಇಟ್ಟುಕೊಳ್ಳುತ್ತೀರಿ? ಈ ದಿನ ನನಗೆ ಅತ್ಯಂತ ದುಃಖ ತಂದ ದಿನ ಎಂದು ಹೇಳಿದ್ದಾರೆ.
ಮೈಸೂರು ಕೊಡಗು ಲೋಕಸಭೆ ಅಭ್ಯರ್ಥಿ ಲಕ್ಷ್ಮಣ್ ಪರ ಕೊಡಗಿನಲ್ಲಿ ಭಾನುವಾರ ನಡೆದ ಚುನಾವಣೆ ಪ್ರಚಾರದ ಪ್ರಜಾಧ್ವನಿ-2 ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಹೆಣ್ಣನ್ನು ಪೂಜಿಸುವುದು ಮತ್ತು ಗೌರವಿಸುವುದು ದೇಶದ ಸಂಸ್ಕೃತಿ ಯಾಗಿದೆ. 5 ಗ್ಯಾರಂಟಿಯಿಂದ ಹೆಣ್ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದಿರುವುದು ಎಷ್ಟು ಸರಿ? ಮಾಜಿ ಪ್ರಧಾನಿಯೊಬ್ಬರ ಸುಪುತ್ರರು, ಎನ್‌ಡಿಎ ಪಾರ್ಟ್ನರ್ ಆಗಿರುವ ಇವರು ಹೀಗೆ ಹೇಳುತ್ತಾರೆ. ಇದು ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ ಮಾತ್ರ ವಲ್ಲ, ಇಡೀ ಮಾನವ ಕುಲಕ್ಕೇ ಮಾಡಿದ ದೊಡ್ಡ ಅವಮಾನವಾಗಿದೆ ಎಂದು ಹೇಳಿದರು.
ತೀರ್ಥಯಾತ್ರೆಗೆ ಹೋಗುವ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರಾ..? ತವರಿಗೆ ಹೋಗುವ ಹೆಣ್ಮಕ್ಕಳು ದಾರಿ ತಪ್ಪುತ್ತಿದ್ದಾರಾ? ನಾನು ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವುದಿಲ್ಲ. ಹೆಣ್ಣು ಮಕ್ಕಳು ತಾಳ್ಮೆ ಕಳೆದುಕೊಳ್ಳಬೇಡಿ, ಹೋರಾಟ ಮಾಡಿ ಎಂದು ಕರೆ ನೀಡಿದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದಾಗಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಸರಿಯಲ್ಲ. ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ತಾಯಂದಿರು ದಾರಿ ತಪ್ಪಿದ್ದಾರೆ ಎಂದರೇನು? ಅವರ ಹೇಳಿಕೆಯಿಂದ ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಭಾವನೆ ಏನು ಎಂದು ಅರ್ಥವಾಗುತ್ತದೆ. 2 ಬಾರಿ ಮುಖ್ಯಮಂತ್ರಿಯಾಗಿದ್ದರೂ ಈ ರೀತಿ ಮಾತನಾಡಿದರೆ ಜನ ಸಹಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿ ದರು.
ಯಾರು ಬಡತನ ರೇಖೆಗಿಂತ ಕಡಿಮೆ ಇದ್ದಾರೋ ಅಂಥವರಿಗೆ ಸಹಾಯವಾಗಲಿ ಎಂದು ಈ ಯೋಜನೆಗಳನ್ನು ಮಾಡಿದ್ದೇವೆ. ಅದನ್ನು ಸಹಿಸೋಕೆ ಆಗಿಲ್ಲವೆಂದಾದರೆ ಬೇರೆ ವಿಚಾರ. ಆದರೆ, ಹೀಗೆ ಹೇಳಬಾರದು ಎಂದು ಪರಮೇಶ್ವರ್ ಹೇಳಿದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಗ್ಯಾರಂಟಿ ಹೆಸರಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದೇನೆ. ನಾನು ಮಹಿಳೆಯರನ್ನು ಅವಮಾನ ಮಾಡಿದ್ದೇನಾ? ಮಹಿಳೆಯರ ಮುಗ್ದ ಮನಸ್ಸನ್ನು ಬಳಸಿಕೊಂಡು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ. ನೀವು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆ ತಂದಿದ್ದೇನೆ. ಮಹಿಳೆಯರ ಕೂಗಿಗೆ ಸ್ಪಂದಿಸಿ ಸಾರಾಯಿ ನಿಷೇಧಿಸಿದ್ದೇನೆ. ನಾನು ಮಹಿಳೆಯರಿಗೆ ವಿಶೇಷ ಗೌರವ ನೀಡಿದ್ದೇನೆ. ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ. ಕಾಂಗ್ರೆಸ್ ನಾಯಕರು ನನ್ನ ಮೇಲೆ ತಪ್ಪು ಹೊರಿಸುವ ರೀತಿ ಮಾಡುತ್ತಿದ್ದಾರೆ ಎಂದು ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆನ್ನಲಾದ ಹೇಳಿಕೆ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ಕುಮಾರಸ್ವಾಮಿ ಅವರು ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದಾರೆ ಎಂದು ಜೆಡಿಎಸ್ ಹೇಳಿದೆ.