Saturday, 26th October 2024

ಕೃತಕ ರಕ್ತ ಉತ್ಪತ್ತಿ ಈವರೆಗೆ ಸಾಧ್ಯವಾಗಿಲ್ಲ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ : ಆಧುನಿಕ ಈ ತಂತ್ರಜ್ಞಾನದ ಯುಗದಲ್ಲಿ ಎಷ್ಟೆಲ್ಲಾ ಆವಿಷ್ಕಾರಗಳು ಆಗಿದ್ದರೂ ಕೂಡ  ಕೃತಕವಾಗಿ ಮಾನವನ  ರಕ್ತವನ್ನು ಉತ್ಪತ್ತಿ  ಮಾಡಲು ಈವರೆಗೆ ಸಾಧ್ಯವಾಗಿಲ್ಲ. ಅಂತಹ ಅಮೂಲ್ಯವಾದ ರಕ್ತವನ್ನು ದಾನಿಗಳಿಂದ  ಸಂಗ್ರಹಿಸಿ  ರೋಗಿಗಳಿಗೆ ತಲುಪಿಸುವ ರೆಡ್ ಕ್ರಾಸ್ ಸಂಸ್ಥೆಯ ಪಾತ್ರ ಬಹುದೊಡ್ಡದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬಣ್ಣಿಸಿದರು.

ಅವರು ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯ ಚಿಕ್ಕಬಳ್ಳಾಪುರ ಘಟಕದ ೨೦೨೦-೨೧ ಮತ್ತು ೨೦೨೧-೨೨ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದರು.

ರಕ್ತದಾನ “ರಕ್ತಸಂಬAಧ”ಕ್ಕಿAತ ದೊಡ್ಡದು. ರಕ್ತದಾನಿಗಳಿಂದ ರಕ್ತ ಸಂಗ್ರಹಿಸಿ ವಿಪತ್ತು ಸಂದರ್ಭಗಳಲ್ಲಿ  ಅಗತ್ಯ ಇರುವವರಿಗೆ ನೀಡುವ  ಮಹತ್ವದ ಸಂಸ್ಥೆ ಎಂದರೆ ರೆಡ್ ಕ್ರಾಸ್ ಸಂಸ್ಥೆ. ಇಂತಹ ಮಹಾನ್  ಆರೋಗ್ಯ  ಸೇವಾ ಕಾರ್ಯಗಳನ್ನು ಮಾಡುವಲ್ಲಿ ಚಿಕ್ಕಬಳ್ಳಾಪುರ ರೆಡ್  ಕ್ರಾಸ್   ಸಂಸ್ಥೆ  ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಿ ಹೊರಹೊಮ್ಮಿದೆ. ೨೦೧೨-೧೩ ಮತ್ತು ೨೦೧೪- ೧೫ನೇ ಸಾಲಿನಲ್ಲಿ ತನ್ನ ಗುಣಾತ್ಮಕ ಚಟುವಟಿಕೆಗಳಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಅಂದಿನ ಮಾನ್ಯ ರಾಜ್ಯಪಾಲ ರಾದ ಹಂಸರಾಜ್ ಭರದ್ವಾಜ್ ಅವರಿಂದ ಗೌರವ ಪಡೆದಿದೆ.

ಬೆಂಗಳೂರು  ನಗರ  ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕೇವಲ ೩ಜಿಲ್ಲೆಗಳಲ್ಲಿ ಮಾತ್ರ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿಬ್ಯಾಂಕ್ ಇದೆ. ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಒಂದಾಗಿದೆ. ಜಿಲ್ಲಾ ಘಟಕದ ರೆಡ್ ಕ್ರಾಸ್ ಸಂಸ್ಥೆಯ ಭವನವನ್ನು ೪  ಕೋಟಿ  ವೆಚ್ಚದಲ್ಲಿ ನಿರ್ಮಾಣ ಮಾಡಲು  ಸಂಸ್ಥೆ  ಮುಂದಾಗಿದೆ ನಿವೇಶನವನ್ನು ಸಹ   ಖರೀದಿಸಿದೆ. ಇದಕ್ಕೆ  ಸರ್ಕಾರದಿಂದಲೂ  ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ರಾಜ್ಯ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗ ರಚಿಸಿ, ವೇತನ ಪರಿಷ್ಕರಣೆಗೆ ಮಾನ್ಯ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಸರ್ಕಾರಿ ನೌಕರರ ಪತಿ-ಪತ್ನಿ ಪ್ರಕರಣದಡಿ ವರ್ಗಾವಣೆಗೆ ಕೂಡ ನಮ್ಮ   ಸರ್ಕಾರ  ಮತ್ತಷ್ಟು ಅನುಕೂಲ ಮಾಡಿದೆ ಎಂದು ಈ ವೇಳೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಮಾತನಾಡಿ, ೧೮೬೩ ರಲ್ಲಿ ಹೆನ್ರಿ  ಡುನಾಂಟ್ ರವರು ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಿದರು.

೧೯ನೇ ಶತಮಾನದಲ್ಲಿ ಯುರೋಪ್ ಖಂಡವು ಯುದ್ದ ಪೀಡಿತವಾಗಿತ್ತು. ಆ ಸಂದರ್ಭದಲ್ಲಿ ಆದ ರಕ್ತ ಪಾತಗಳ ಯಾತನೆಗಳನ್ನು  ಮನಗಂಡು ಈ ಸಂಸ್ಥೆಯು ಉದಯವಾಗಿ ಯುದ್ದದ ಗಾಯಾಳುಗಳ  ಅರೋಗ್ಯ ಸೇವೆ ಮಾಡಿ ಮಾನವೀಯತೆ ಮೆರೆದಿದೆ. ಇಂತಹ ಸಂಸ್ಥೆಯ ಸೇವಾ ಕಾರ್ಯಗಳಲ್ಲಿ ನಾವೆಲ್ಲರೂ ಸಹಕಾರ ನೀಡಿ  ತುರ್ತು  ಸಂದರ್ಭಗಳಲ್ಲಿ ರೋಗಿಗಳ ಆರೋಗ್ಯ ಸೇವೆಗೆ ಎಲ್ಲರೂ ಕೈ ಜೋಡಿಸೋಣ ಎಂದು ಕರೆ ನೀಡಿದರು.

ಈ ವೇಳೆ ಚಿಕ್ಕಬಳ್ಳಾಪುರ ರೆಡ್ ಕ್ರಾಸ್ ಸಂಸ್ಥೆಯ ೨೦೨೦-೨೧ ಮತ್ತು ೨೦೨೧-೨೨ನೇ ಸಾಲಿನ ವಾರ್ಷಿಕ ವರದಿಯನ್ನು  ಜಿಲ್ಲಾಧಿ ಕಾರಿಗಳು ಬಿಡುಗಡೆ  ಮಾಡಿದರು.

ಆರೋಗ್ಯ ಸಚಿವರು ರಾಜ್ಯ ರೆಡ್ ಕ್ರಾಸ್ ಸಂಸ್ಥೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಸೇವೆಗೆ ನೀಡಿರುವ ಸುಮಾರು ೪೦ ಲಕ್ಷ ರೂಗಳ ಸಂಚಾರಿ ಪ್ರಯೋಗಾಲಯ ವಾಹನಕ್ಕೆ ಕಾರ್ಯಕ್ರಮದ  ನಂತರ ಅಂಬೇಡ್ಕರ್  ಭವನದ  ಮುಂಭಾಗದಲ್ಲಿ  ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್,ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಕಾರ್ಯಕಾರಿ ಸಮಿತಿಯ ಗೌರವ ಸದಸ್ಯರಾದ ಶಶಿಧರ್, ಜಿಲ್ಲಾ ಘಟಕದ ಗೌರವ ಸಭಾಪತಿ ಡಾ.ಬಾಬು ರೆಡ್ಡಿ.ಕೆ, ಗೌರವ ಉಪಾಧ್ಯಕ್ಷ ಪ್ರೋ.ಕೋಡಿರಂಗಪ್ಪ, ಖಜಾಂಚಿ ಜಯರಾಮ್, ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಮೂರ್ತಿ ಕೆ.ಪಿ, ಸದಸ್ಯರಾದ ಉತ್ತಮ ಚಂದ್ ಜೈನ್, ಭದ್ರಾಚಲಂ, ಸೂರ್ಯನಾರಾಯಣ ಶೆಟ್ಟಿ, ಕಾರ್ಯದರ್ಶಿ ಬಿ.ಎನ್.ರವಿಕುಮಾರ್, ಗುಡಿಬಂಡೆ ಘಟಕದ ಕಾರ್ಯದರ್ಶಿ ವಿಶ್ವನಾಥ್ ಸೇರಿದಂತೆ ರಕ್ತದಾನಿಗಳು, ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ವರ್ಗದವರು ಹಾಗೂ ಮುಂತಾದವರು ಉಪಸ್ಥಿತರಿದ್ದರು.