ಬೆಂಗಳೂರು: ಬಿಸಿಲ ಝಳದಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ವರುಣದೇವ ತಂಪೆರೆದಿದ್ದಾನೆ. ರಾಜಧಾನಿ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.
ನಗರದ ಹಲವೆಡೆ ಗುಡುಗು, ಬಿರುಗಾಳಿಸಹಿತ ಮಳೆಯಾಗುತ್ತಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಮೆಜೆಸ್ಟಿಕ್, ಕೆ.ಆರ್.ಪುರಂ, ವೈಟ್ ಫೀಲ್ಡ್, ರೇಸ್ ಕೋರ್ಸ್ ರಸ್ತೆ, ರಾಜಾಜಿನಗರ, ವಿಜಯನಗರ, ಆರ್.ಆರ್.ನಗರ, ಶಾಂತಿನಗರ, ಮೈಸೂರು ರಸ್ತೆ, ಗಿರಿನಗರ, ಬೆಂಗಳೂರು ದಕ್ಷಿಣ ಸೇರಿದಂತೆ ಹಲವೆಡೆಗಳಲ್ಲಿ ಮಿಂಚು, ಗುಡುಗು, ಬಿರುಗಾಳಿ ಸಹಿತ ವರುಣಾರ್ಭಟ ಜೋರಾಗಿದ್ದು, ಹಲವೆಡೆ ತಗ್ಗುಪ್ರದೇಶಗಳಿಗೆ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ವಿವಿಧೆಡೆ ವಿದ್ಯುತ್ ವ್ಯತ್ಯಯವುಂಟಾಗಿದೆ. ಸಂಜೆ ಕೂಡ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಿತ್ತು.
ಇಂದು ಗುಡುಗು, ಸಿಡಿಲು ಜೊತೆ ಧಾರಾಕಾರ ಮಳೆಯಾಗುತ್ತಿದೆ. ಹಲವು ದಿನಗಳಿಂದ ರಣಬಿಸಿಲಿಗೆ ಕಾದ ಕಾವಲಿ ಯಂತಾಗಿದ್ದ ರಾಜಧಾನಿ ಬೆಂಗಳೂರು ಕೊಂಚ ತಣ್ಣಗಾದಂತಾಗಿದೆ.