ಮಂಗಳೂರು: ಅಖಿಲ ಭಾರತ ಕೊಂಕಣಿ ಪರಿಷತ್ ಆಶ್ರಯದಲ್ಲಿ ನಗರದ ಶಕ್ತಿನಗರದಲ್ಲಿ 25ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನ ಇದೇ 4 ಮತ್ತು 5ರಂದು ನಡೆಯಲಿದೆ.
ಅಧ್ಯಕ್ಷತೆಯನ್ನು ಕೊಂಕಣಿ ಕಾದಂಬರಿಗಾರ್ತಿ ಹೇಮಾ ನಾಯ್ಕ್ ವಹಿಸಲಿದ್ದಾರೆ.
ಮಾಹಿತಿ ನೀಡಿದ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಚ್.ಎಂ.ಪೆರ್ನಾಲ್, ‘ಹಿಂದಿ ಕವಿ, ವಿಮರ್ಶಕ, ವಿದ್ವಾಂಸ ಉದಯನ್ ವಾಜಪೇಯಿ ಇದೇ 4 ರಂದು ಬೆಳಿಗ್ಗೆ 10ಕ್ಕೆ ಸಮ್ಮೇಳನವನ್ನು ಉದ್ಘಾಟಿಸುವರು. ‘ಸಾಹಿತ್ಯ ಮತ್ತು ಬದುಕು’ ಈ ಕುರಿತು ಅವರು ಶಿಖರೋಪನ್ಯಾಸ ನೀಡುವರು’ ಎಂದರು.
‘ವಿವಿಧ ಗೋಷ್ಠಿಗಳು, ಸಾಹಿತ್ಯ ಪ್ರಸ್ತುತಿ, ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಕೊಂಕಣಿ ಭಾಷೆ ಮತ್ತು ಸಾಹಿತ್ಯ ಹಬ್ಬದಲ್ಲಿ ಇದೇ 4 ರಂದು ಸಂಜೆ 5.30ಕ್ಕೆ ಖ್ಯಾತ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ‘ಸಮಕಾಲೀನ ಬರಹಗಾರರ ಸವಾಲು’ ಕುರಿತು ಇಂಗ್ಲಿಷ್‌ನಲ್ಲಿ ಗೋಷ್ಠಿ ನಡೆಯಲಿದೆ. 5ರಂದು ಸಂಜೆ 3.30ಕ್ಕೆ ಸಮ್ಮೇಳನದ ಸಮಾರೋಪ ನಡೆಯಲಿದ್ದು, ಕನ್ನಡ ಸಾಹಿತಿ, ಪ್ರಾಧ್ಯಾಪಕಿ ಮಮತಾ ಜಿ. ಸಾಗರ ‘ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ’ ಕುರಿತು ಉಪನ್ಯಾಸ ನೀಡುವರು. ಪ್ರಮುಖ ಉಪನ್ಯಾಸಗಳು ಹಿಂದಿ, ಇಂಗ್ಲಿಷ್ ಭಾಷೆಯಲ್ಲೂ ಇರಲಿವೆ. ಕೊಂಕಣಿಯೇತರ ಸಾಹಿತ್ಯಾಸಕ್ತರೂ ಭಾಗವಹಿಸಬಹುದು’ ಎಂದು ಹೇಳಿದರು.
‘ಕೊಂಕಣಿ ಭಾಷೆ ಮತ್ತು ಸಾಹಿತ್ಯದ ವೈವಿಧ್ಯತೆ ಮತ್ತು ಸೊಗಡನ್ನು ಉಣಬಡಿಸುವ ಸಮ್ಮೇಳನದಲ್ಲಿ ಗೋವಾ, ಕೇರಳ, ಮಹಾ ರಾಷ್ಟ್ರ, ನವದೆಹಲಿ ಹಾಗೂ ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ 600ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲೇ ಬರವಣಿಗೆ ಮತ್ತು ಕೊಂಕಣಿ ಚಳುವಳಿಗೆ ಧುಮುಕಿದ ಹೇಮಾ ನಾಯ್ಕ್ ಕೊಂಕಣಿ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ. ಅರ್ಥಶಾಸ್ತ್ರ ಪದವೀಧರರಾಗಿರುವ ಹೇಮಾ ನಾಯ್ಕ್ ಅವರು ಕತೆ, ಕಾದಂಬರಿ, ರೇಡಿಯೊ ನಾಟಕ ಸೇರಿ ಒಟ್ಟು 8 ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. 10 ಕ್ಕೂ ಹೆಚ್ಚು ಕೃತಿಗಳನ್ನು ಅನುವಾದಿಸಿ ದ್ದಾರೆ. ಕೊಂಕಣಿ ಸಿನಿಮಾವನ್ನೂ ನಿರ್ಮಿಸಿದ್ದಾರೆ. ನವದೆಹಲಿಯ ಸಾಹಿತ್ಯ ಅಕಾಡೆಮಿ, ಗೋವಾ ಸರ್ಕಾರದ ಕಲಾ ಅಕಾಡೆಮಿ, ಭಾಷಾ ಮಂಡಳ, ಗೋವಾ, ಕಥಾ, ಮಣಿಪಾಲದ ಡಾ.ಟಿ. ಎಂ. ಪೈ ಪೌಂಡೇಷನ್‌ನ ಪ್ರಶಸ್ತಿಗಳೂ ಸೇರಿ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ’ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮೈಕಲ್ ಡಿಸೋಜ, ಉಪಾಧ್ಯಕ್ಷ ನಂದಗೋಪಾಲ ಶೆಣೈ, ಕಾರ್ಯದರ್ಶಿ ಟೈಟಸ್ ನೊರೊನ್ಹ, ಅಖಿಲ ಭಾರತೀಯ ಕೊಂಕಣಿ ಪರಿಷತ್ ಉಪಾಧ್ಯಕ್ಷ ಮೆಲ್ವಿನ್ ರಾಡ್ರಿಗಸ್, ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ ಇದ್ದರು.