ಕಲಬುರಗಿ: ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿ ಬಿತ್ತನೆ ಕಾರ್ಯ ಮುನ್ಸೂಚನೆ ಇದ್ದು, ಹವಾಮಾನಿನ ಮುನ್ಸೂಚನೆ ಪ್ರಕಾರ ಶೇಕಡಾ 20ರಷ್ಟು ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ಸೂಕ್ತ ಸಮಯಕ್ಕೆ ರಸಗೊಬ್ಬರ ವಿಶೇಷವಾಗಿ ಡಿ.ಎ.ಪಿ. ಹಾಗೂ ಯುರಿಯಾ ಸಿಗುವಂತೆ ಹೆಚ್ಚಿನ ನಿಗಾವಹಿಸಬೇಕು ಎಂದು ಆಮ್ ಆದ್ಮಿ ಪಕ್ಷ ಹಾಗೂ ರೈತ ಮುಖಂಡ ಚಂದ್ರಶೇಖರ ಹಿರೇಮಠ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿತ್ತನೆಗೆ ಬೇಕಾಗುವ ರಸಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಆಗದೆ ಇರುವುದರಿಂದ ಬಿತ್ತನೆ ಪ್ರಾರಂಭಗೊಂಡಾಗ ತೀವ್ರ ಸ್ವರೂಪದ ಕೊರತೆ ಯುಂಟಾಗುವ ಆತಂಕವಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ತೀವ್ರ ನಿಗಾವಹಿಸಿ ರೈತರಿಗೆ ಬೇಕಾಗುವ ಹಾಗೂ ರೈತರು ಬಯಸುವ ಇಸ್ಕೊ ಕಂಪನಿಯ ಜೈಕಿಸಾನ ಮುಂತಾದ ಸರಕಾರಿ ಸಂಸ್ಥೆಯ ಡಿ.ಎ.ಪಿ, ಯೂರಿಯಾ ರಸಗೊಬ್ಬರ ಸೂಕ್ತ ಸಮಯಕ್ಕೆ ಸಿಗುವಂತೆ ನಿಗಾ ವಹಿಸಬೇಕೆಂದು ಹೇಳಿದರು.
ಇಸ್ಕೊ ಹಾಗೂ ಜೈಕಿಸಾನ ಕಂಪನಿಗಳ ಡಿ.ಎ.ಪಿ. ಯೂರಿಯಾ ತೀವ್ರ ಕೊರತೆ: ಈ ಭಾಗದ ರೈತರ ಅಚ್ಚು ಮೆಚ್ಚಾಗಿರುವ ಇಸ್ಕೊ ಡಿ.ಎ.ಪಿ. ಇದುವರೆಗೂ ಸರಬರಾಜು ಆಗಿರುವುದಿಲ್ಲ. ಈ ಬಗ್ಗೆ ಇಸ್ಕೊ ಕಂಪನಿ ರಸಗೊಬ್ಬರ ಸರಬರಾಜು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕೊರತೆಯನ್ನು ಒಪ್ಪಿಕೊಂಡು ಕಳೆದ ವರ್ಷ ದಂತೆ ಸರಬರಾಜು ಮಾಡುವುದು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಜಿಲ್ಲೆಯ ರೈತ ಸಹಕಾರಿ ಸಂಘಗಳಿಗೆ ವಿಚಾರಿಸಿದಾಗ ಇಸ್ಕೊ ಕಂಪನಿಯವರು ನಮ್ಮ ಮುಂಗಡ ಡಿಡಿ ಹಣ ಪಡೆಯಲು ಸಿದ್ಧರಿಲ್ಲ. ಜಿಲ್ಲೆಯ ಒಂದು ರೈತ ಸೇವಾ ಸಂಘ ಪ್ರತಿ ವರ್ಷ 300 ಟನ್ ಡಿ.ಎ.ಪಿ ಮಾರಾಟ ಮಾಡುವ ಖ್ಯಾತಿ ಇದ್ದರು, ಈ ವರ್ಷ ಇದು ವರೆಗೆ ನಮಗೆ ಗೊಬ್ಬರ ಸರಬರಾಜು ಆಗಿಲ್ಲವೆಂದು ದೂರಿದರು.
ಇದರ ಬಗ್ಗೆ ಜಿಲ್ಲಾ ಕೃಷಿ ಅಧಿಕಾರಿಗಳಿಗೆ ಸಂಪರ್ಕಿಸಿದಾಗ ಕಾಲ ಕಾಲಕ್ಕೆ ಬೇಡಿಕೆ ಪೂರೈಸುವ ಭರವಸೆ ನೀಡಿದರು. ಆದರೆ ವಾಸ್ತವ ಪರಿಸ್ಥಿತಿ ತದ್ವಿರುದ್ಧವಾಗಿದೆ ಎಂದು ಹಿರೇಮಠ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸದ್ಯ ಸೋಯಾಬೀನ್ ಮಾತ್ರ ದಾಸ್ತಾನು ಇದ್ದು, ಉದ್ದು, ಹೆಸರು, ಸೂರ್ಯಕಾಂತಿ ಬಗ್ಗೆ ನಿಗಾವಹಿಸಬೇಕಾಗಿದೆ. ಕಲಬುರಗಿ ಜಿಲ್ಲೆಯ ಆಳಂದ, ಮಾದನ ಹಿಪ್ಪರಗಾ, ಪಟ್ಟಣ ಸೇರಿದಂತೆ ಬಹುತೇಕ ಕಡೆಗಳಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಗಳ ಕೊರತೆಯಿದ್ದು,ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ರೆಷ್ಮಿ, ಎಲ್.ಎಸ್.ರಾಠೋಡ, ಶರಣ ಐ.ಟಿ, ಮಹಾಂತಗೌಡ ಪಾಟೀಲ್, ಎಚ್.ಡಿ.ಘೋಫ೯ಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.