Saturday, 14th December 2024

ನಾಲ್ಕು ವರ್ಷಗಳ ನಂತರ ಯುವಕರ ಭವಿಷ್ಯ ಏನು?: ಎಚ್ಕೆ

ಅಗ್ನಿಪಥ ವಿರೋಧಿಸಿ ಕೈ ನಾಯಕರು ಪ್ರತಿಭಟನೆ
-ಅಗ್ನಿಪಥ್ ಯೋಜನೆ ಅವೈಜ್ಞಾನಿಕ
-ವೈಯಕ್ತಿಕ ಪ್ರತಿಷ್ಠೆಗಾಗಿ ನಮೋ ಟ್ರಂಪ್ ಹೆಸರಿನಲ್ಲಿ ನೂರಾರು ಕೋಟಿ ಖರ್ಚು
ಗದಗ: ಅಗ್ನಿಪಥ್ ಯೋಜನೆ ಮೂಲಕ ನಾಲ್ಕು ವರ್ಷಕ್ಕೆ ಮಾತ್ರ ಸೇನೆಗೆ ನೇಮಕಾತಿ ಮಾಡಲಾಗುತ್ತಿದೆ. ನಾಲ್ಕು ವರ್ಷ ಸೇನೆ ಯಿಂದ ಹೊರಬಂದ ಬಳಿಕ ಅವರಿಗೆ ಪಿಂಚಣಿ ಇಲ್ಲ. ಹಾಗಾದರೆ ನಾಲ್ಕು ವರ್ಷದ ಬಳಿಕ ನಮ್ಮ ಭವಿಷ್ಯ ಏನು ಎಂದು ಶಾಸಕ ಎಚ್.ಕೆ.ಪಾಟೀಲ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಅಗ್ನಿಪಥ ಯೋಜನೆ ಅವೈಜ್ಞಾನಿಕವಾಗಿದೆ. ಅಗ್ನಿಪಥ್ ಯೋಜನೆಗೆ ವಿರೋಧ ಮಾಡು ವವರ ಬೇಡಿಕೆ ನ್ಯಾಯಯುತವಾಗಿದೆ. ಈ ನಿಟ್ಟಿನಲ್ಲಿ ಯೋಜನೆ ಕೈ ಬಿಡಬೇಕು ಎಂದು ಪಾಟೀಲ ಆಗ್ರಹಿಸಿದರು.
ಲಿಖಿತ ಪರೀಕ್ಷೆ ಮುಗಿಸಿ ನೇಮಕಾತಿ ಪ್ರಕ್ರಿಯೆಗಾಗಿ ಕಾಯುತ್ತಿರುವವರಿಗೆ ಇದು ನಿರಾಶೆ ತಂದಿದೆ. ದೇಶದಲ್ಲಿ ಕೋವಿಡ್ –೧೯, ನಿರುದ್ಯೋಗ, ಆರ್ಥಿಕ ಹಿಂಜರಿತದ ನಡುವೆಯೂ ತನ್ನ ವೈಯಕ್ತಿಕ ಪ್ರತಿಷ್ಠೆಗಾಗಿ ‘ನಮೋ ಟ್ರಂಪ್’ ಹೆಸರಲ್ಲಿ ಸರ್ಕಾರ ನೂರಾರು ಕೋಟಿ ಖರ್ಚು ಮಾಡಿತ್ತು. ಕಳೆದ ೨ ವರ್ಷಗಳಿಂದ ಅದೇ ಕಾರಣ ಮುಂದಿಟ್ಟು ಸೇನಾ ಪಡೆಗೆ ನೇಮಕಾತಿ ಮಾಡದೇ ಇರುವ ಔಚಿತ್ಯ ಸರಿಯಲ್ಲ. ಮೋದಿ ಸರ್ಕಾರ ತನ್ನ ಆಡಳಿತ ವೈಫಲ್ಯದ ಕಾರಣವಾಗಿ ದೇಶವನ್ನು ಅಗ್ನಿಪಥಕ್ಕೆ ತಳ್ಳಿ ಅಭಿವೃದ್ಧಿಗೆ ಕೊಳ್ಳಿ ಇಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಅವೈಜ್ಞಾನಿಕ ಯೋಜನೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ದೇಶದಾದ್ಯಂತ ಯುವಕರು ಉಗ್ರ ಪ್ರತಿಭಟನೆ ಮಾಡುತ್ತಿರುವುದರ ಹೊರತಾಗಿಯೂ, ಸರ್ಕಾರ ಸೇನಾ ಪಡೆಯ ಮುಖ್ಯಸ್ಥರ ಮೂಲಕ ಯೋಜನೆಯನ್ನು ಹಿಂಪಡೆಯುವುದಿಲ್ಲ ಎಂಬ ಹೇಳಿಕೆ ಕೊಡಿಸುವ, ಬೆದರಿಸುವ ತಂತ್ರಗಾರಿಕೆಗೆ ಶರಣಾಗಿರುವುದು ಸಾಂವಿಧಾನಿಕ ಉಲ್ಲಂಘನೆ ಎಂದರು.
ಅಗ್ನಿಪಥ್ ಯೋಜನೆ ವಿರೋಧಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ರೋಣ, ಗಜೇಂದ್ರಗಡ ಕೆಲವರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಶಾಂತಿಯುತ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಜಿ. ಪಂ. ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಹೇಳಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ವ್ಹಿ.ಬಳಗಾನೂರ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ್ ಫಾರೂಕ್ ಹುಬ್ಬಳ್ಳಿ, ತಾ. ಪಂ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಸೇರಿದಂತೆ ಇತರರು ಇದ್ದರು.