ರಾಮನಗರ: ‘ನಮ್ಗೆ ಬಸ್ ಬೇಕು ಸರ್… ಬಸ್ ಇಲ್ದೆ ಕಾಲೇಜಿಗೆ ಹೇಗೆ ಹೋಗೋದು’ ಎಂದು ರಾಮನಗರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಗೆ ಹೋಗಲು ನಿತ್ಯ ಎರಡು ಗಂಟೆಗೂ ಹೆಚ್ಚು ಸಮಯ ವಿದ್ಯಾರ್ಥಿಗಳು ಕಾಯಬೇಕು.
ಗುರುವಾರ ಕಾಲೇಜಿಗೆ ಹೋಗಬೇಕಾಗಿದ್ದ ವಿದ್ಯಾರ್ಥಿಗಳು ಬಸ್ ಇಲ್ಲದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ವಿದ್ಯಾರ್ಥಿ ಗಳು ಆಕ್ರೋಶಗೊಂಡು ಬಸ್ ವ್ಯವಸ್ಥೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ. ಕಾಲೇಜಿಗೆ ತೆರಳಲು ಸಮರ್ಪಕವಾಗಿ ಬಸ್ ಇಲ್ಲದೆ ನಿತ್ಯ ವಿದ್ಯಾರ್ಥಿಗಳು ಅವರಿವರ ಬಳಿ ಡ್ರಾಪ್ ಕೇಳುವಂತ ಪರಿಸ್ಥಿತಿ ಇದೆ. ಹೀಗಾಗಿ, ವಿದ್ಯಾರ್ಥಿಗಳು ರಾಮನಗರ ಬಸ್ ನಿಲ್ದಾಣದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು.
ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮಸ್ಯೆ ಬಗೆಹರಿಸುವ ಮಾತು ನೀಡಿ ತಿಂಗಳು ಕಳೆದರೂ ಪರಿಹಾರ ನೀಡಿಲ್ಲ. ಬಸ್ ಸಮಸ್ಯೆ ಇಂದಿಗೂ ಇದೆ ಎಂದು ವಿದ್ಯಾರ್ಥಿಗಳು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಈ ವೇಳೆ ರಸ್ತೆ ತಡೆ ಮಾಡಿದ್ದಕ್ಕೆ ರಾಮನಗರ ಸಂಚಾರಿ ಠಾಣೆ ಪಿಎಸ್‌ಐ ಗರಂ ಆದರು.