ಚಿಕ್ಕನಾಯಕನಹಳ್ಳಿ : ಜುಲೈ ೨೧ ರಂದು ನವಲಗುಂದದಲ್ಲಿ ೪೪ ನೇ ರೈತ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ ಎಂದು ಮೂಲ ಸಿದ್ದಾಂತಗಳ ಯಜಮಾನಿಕೆಯ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯದುಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ರೈತರ ಸಭೆ ನಡೆಸಿ ಮಾತನಾಡಿದ ಅವರು ರೈತ ಹೋರಾಟದಲ್ಲಿ ಹುತಾತ್ಮರಾದ ರೈತರ ಸ್ಮರಣಾರ್ಥ ನವಲಗುಂದದಲ್ಲಿ ರೈತ ಸಂಘಟನೆಗಳ ಸದಸ್ಯರು ಒಂದೇ ವೇದಿಕೆಯಲ್ಲಿ ಸೇರಿ ರೈತರ ಸಮಾವೇಶ ನಡೆಸಲಾಗುವುದು. ರೈತರ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರಕಾರಕ್ಕೆ ಒತ್ತಡ ಹೆಚ್ಚಿಸ ಲಾಗುತ್ತದೆ. ವಿವಿಧ ಸಂಘಟನೆಗಳ ಪ್ರಮುಖರು, ಕೃಷಿಕ ಸಮಾಜ, ಕನ್ನಡ ಪರ ಸಂಘಟನೆಗಳು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸು ವಂತೆ ಮುಖಂಡರು ಮನವಿ ಮಾಡಿದರು.
ರೈತ ಸಂಘದ ಗೌರವಾಧ್ಯಕ್ಷ ರಾಮನಹಳ್ಳಿ ಕುಮಾರಯ್ಯ ಮಾತನಾಡಿ ೧೯೭೪ ರಿಂದ ೧೯೮೦ ರವರೆಗೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಬರಗಾಲ ವಿದ್ದರೂ ಸರಕಾರ ರೈತರಿಂದ ಬೆಟರ್‌ಮೆಂಟ್ ಲೇವಿ ವಸೂಲಿಯ ಕಠಿಣ ಕ್ರಮ ಕೈಬಿಟ್ಟಿರಲಿಲ್ಲ. ಇದಕ್ಕೆ ಒಪ್ಪದ ರೈತರ ಮನೆಗಳಿಗೆ ನುಗ್ಗಿದ್ದ ಅಧಿಕಾರಿಗಳು ಕೃಷಿ ಸಾಮಾಗ್ರಿಗಳನ್ನು ಬಿಡದೆ ಜಪ್ತಿ ಮಾಡಿದ್ದರು. ಇದನ್ನು ಖಂಡಿಸಿ ೧೯೮೦ ಜುಲೈ ೨೧ ರಂದು ನರಗುಂದದ ತಹಸೀಲ್ದಾರ್ ಕಚೇರಿ ಎದುರು ರೈತರು ಧರಣಿ ಆರಂಭಿಸಿದರು. ಧರಣಿ ಸಂದರ್ಭದಲ್ಲಿ ರೈತರು ಅಧಿಕಾರಿಗಳ ಪ್ರವೇಶವನ್ನು ನಿರಾಕರಿಸಿ ಅಡ್ಡಲಾಗಿ ಮಲಗಿದರು.
ಅಂದಿನ ತಹಸೀಲ್ದಾರ್ ವರೂರು ರೈತರನ್ನು ತುಳಿದುಕೊಂಡೆ ಕಚೇರಿ ಪ್ರವೇಶಿಸಿದರು. ತಡೆಯಲು ಬಂದ ರೈತರ ಮೇಲೆ ಪೋಲೀಸರು ಗುಂಡು ಹಾರಿಸಿ ದರು. ರೊಚ್ಚಿಗೆದ್ದ ಜನ ಸರಕಾರಿ ಕಚೇರಿ ಧ್ವಂಸ ಮಾಡಿ ಪೋಲೀಸರ ಮೇಲೆ ಪ್ರತಿದಾಳಿ ಸಂಘಟಿಸಿದರು. ಈ ಘಟನೆಯಲ್ಲಿ ರೈತ ವೀರಪ್ಪ ಕಡ್ಲಿಕೊಪ್ಪ ಆಹುತಿಯಾದರು ಎಂದು ಮಾಹಿತಿ ನೀಡಿದರು.
ರೈತ ಸಂಘದ ಅಧ್ಯಕ್ಷ ಸೀಬಿ ಲಿಂಗಯ್ಯ, ಉಪಾಧ್ಯಕ್ಷ ರೇವಣ್ಣ, ಖಜಾಂಚಿ ನಟರಾಜ್, ಮುಖಂಡರಾದ ಬಗ್ಗನಹಳ್ಳಿ ಬಸವರಾಜ್, ಸೈಯದ್ ಖಲಂದರ, ಬಸವರಾಜ್, ವೀರುಪಾಕ್ಷಯ್ಯ ಹಾಜರಿದ್ದರು.