Monday, 28th October 2024

Chikkaballapur News: ಸಮಾಜಕ್ಕೆ ಒಳಿತನ್ನು ಮಾಡಲು ಶ್ರಮಿಸುವವನೇ ನೈಜ ಇಂಜಿನಿಯರ್-ಐಐಎಂ ಮೆಂಟರ್ ಗೋಪಾಲ್‌ರಾವ್ ಅಡ್ಡಂಕಿ

ಚಿಕ್ಕಬಳ್ಳಾಪುರ : ಬಿಇ ಮಾಡಿದವರೆಲ್ಲಾ ಇಂಜನಿಯರ್‌ಗಳೇ ಆದರೂ ನೂತನ ಸಂಶೋಧನೆಯ ಮೂಲಕ ಸಮಾಜಕ್ಕೆ ಒಳಿತನ್ನು ಮಾಡಲು ಮುಂದಾಗುವವರೇ ನಿಜಾರ್ಥದಲ್ಲಿ ಉತ್ತಮ ಇಂಜನಿಯರ್ ಆಗಲಿದ್ದಾರೆ. ನಿಮ್ಮೆಲ್ಲರ ಚಿತ್ತ ಈದಿಕ್ಕಿನೆಡೆಗಿರಲಿ ಎಂದು ಐಐಎಂನ ಎನ್‌ಎಸ್‌ಆರ್‌ಸಿಇಎಲ್ ಮೆಂಟರ್ ಗೋಪಾಲ್‌ರಾವ್ ಅಡ್ಡಂಕಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರ ಹೊರವಲಯ ನಾಗಾರ್ಜುನ ತಾಂತ್ರಿಕ ಕಾಲೇಜಿನಲ್ಲಿ ಸೋಮವಾರ ಪ್ರಥಮವರ್ಷದ ಬಿಇ ವಿದ್ಯಾರ್ಥಿ ಗಳಿಗಾಗಿ ಏರ್ಪಡಿಸಿದ್ದ ಪ್ರಾರಂಭ-2024 ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂಜಿನಿಯರಿಂಗ್ ಶಿಕ್ಷಣ ಕೇವಲ ಕೊಠಡಿಗಳಿಗೆ ಸೀಮಿತವಲ್ಲ. ಬಹಳಷ್ಟು ಶ್ರಮ ವಹಿsi ಆಳವಾದ ಅಧ್ಯಯನ ಮಾಡಬೇಕು. ಇದರ ನಡುವೆ ನಿಮಗೆ ಆಳವಾದ ಆಲೋಚನೆಗಳು ಬರುತ್ತವೆ. ಇಂತಹ ಆಲೋಚನೆಗಳೇ ನಿಮ್ಮನ್ನು ಇನ್ನಷ್ಟು ಅಧ್ಯಯನ ಮಾಡಲು ಪ್ರೇರಣೆ ನೀಡುತ್ತವೆ. ನಿಮಗೆ ಬಹಳಷ್ಟು ಉಪಯೋಗವಾಗುವ ಲ್ಯಾಬ್ ಹಾಗೂ ಕಾರ್ಯಾಗಾರಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ. ಇದರಿಂದ ನೀವು ಕಲಿಯುವುದು ಬಹಳಷ್ಟಿದೆ ಎಂದ ಅವರು ಇಂಜಿನಿಯರಿಂಗ್ ಎಂದರೆ ಸೃಜನಶೀಲತೆ ಹಾಗೂ ಕಲ್ಪನೆಗಳನ್ನು ವಾಸ್ತವ ಮಾಡುವುದೇ ಆಗಿದೆ ಎಂದರು.

ವಿದ್ಯಾರ್ಥಿ ದೆಸೆಯಲ್ಲಿ ತಪ್ಪುಗಳಾಗುವುದು ಸಹಜ.ಅದನ್ನು ತಿದ್ದಿಕೊಂಡು ಗುರುಗಳ ಮಾರ್ಗದರ್ಶನ ತಂದೆ ತಾಯಿಗಳ ಆಶೀರ್ವಾದ ಬಲದಲ್ಲಿ ಓದಿನಲ್ಲಿ ಆಸಕ್ತರಾದರೆ ನಿಶ್ಚಿತವಾಗಿ ಗುರಿಮುಟ್ಟಿ ಸಾಧಕರ ಸಾಲಿನಲ್ಲಿ ನಿಲ್ಲಬಹುದು ಎಂದರು.

ಬಿಇ ಓದುವಾಗ ಉತ್ತಮ ಗೆಳೆಯರ ಸಹವಾಸ ಮಾಡಿ.ನಿಶ್ಚಿತ ಗುರಿ, ಕಠಿಣ ಪರಿಶ್ರಮ, ಸಾಧಿಸುವ ಛಲ ಇದ್ದರೆ ಮಾದರಿಯಾದ ಇಂಜನಿಯರ್ ಆಗುವುದರಲ್ಲಿ ಅನುಮಾನವೇ ಇಲ್ಲ. ಹಣದ ಹಿಂದೆ ನಾವು ಹೋಗುವ ಬದಲು ,ಅದು ನಮ್ಮನ್ನು ಹುಡುಕಿಕೊಂಡು ಬರುವಂತಹ ರೀತಿಯಲ್ಲಿ ನಮ್ಮ ಪ್ರದರ್ಶನ ಇರಬೇಕು ಎಂದು ಹೇಳಿದರು.

ತಾಂತ್ರಿಕ ಶಿಕ್ಷಣವು ದೇಶದ ಪ್ರಗತಿಯಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿದೆ ಎಂಬ ಅರಿವು ನಿಮಗಿರಬೇಕು. ಆಗ ಮಾತ್ರವೇ ನನ್ನ ಕಾಣಿಕೆ ಏನಾಗಿರಬೇಕು ಎಂಬ ಬಗ್ಗೆ ಸ್ಪಷ್ಟತೆ ಮೂಡುತ್ತದೆ.ದೇಶವು ಎದುರಿಸುತ್ತಿರುವ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಲಿದೆ.ಮೌಲ್ಯಯುತ ಶಿಕ್ಷಣ, ನೂತನ ಅವಿಷ್ಕಾರಗಳಿಗೆ ಜಗತ್ತು ಸದಾ ಬೆಂಬಲಿಸಿದೆ.ಕೌಶಲ್ಯಕ್ಕನುಗುಣವಾದ ಸಂಪಾಧನೆಯನ್ನೂ ಕೊಟ್ಟಿದೆ ಎಂಬುದು ಸತ್ಯ ಎಂದರು.

ಕಾರ್ಗಿಲ್ ಯುದ್ಧದಲ್ಲಿ 4875 ಹೆಸರಿನ 13ನೇ ರೆಜಿಮೆಂಟ್ (ದುರ್ಗಿ) ತಂಡದ ಕ್ಯಾಪ್ಟನ್ ಆಗಿದ್ದ ನವೀನ್ ನಾಗಪ್ಪ ಮಾತನಾಡಿ ಇಂಜನಿಯರಿಂಗ್ ವಿದ್ಯಾರ್ಥಿಗಳಲ್ಲಿ ದೇಶಸೇವೆ ಮಾಡಬೇಕು ಎನ್ನುವ ಆಸೆಯಿದ್ದರೆ, ಜನ್ಮಭೂಮಿಯ ಋಣ ತೀರಿಸಬೇಕು ಎಂಬ ತುಡಿತದ್ದರೆ ಖಂಡಿತವಾಗಿ ತಡಮಾಡದೆ ರಕ್ಷಣಾ ಪಡೆಗೆ ಸೇರಿಕೊಳ್ಳಿ. ಹೆಜ್ಜೆಯಿಟ್ಟ ಮರುಗಳಿಗೆ ಸ್ವಾರ್ಥ ದೂರವಾಗಿ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಸದ್ಭಾವ ಮೂಡುತ್ತದೆ ಎಂದರು.

ಯುದ್ಧದಲ್ಲಿ ವೀರಮರಣವನ್ನು ಅಪ್ಪುವ ಸಂದರ್ಭ ಎದುರಾದರೂ ಅಧೀರನಾಗದೆ ಹೋರಾಡಿದ ಪರಿಣಾಮ ಅಂಗವಿಕಲನಾಗಿ ಸೇವೆಯಿಂದ ನಿವೃತ್ತನಾಗುವ ಸಂದರ್ಭ ಎದುರಾಗಿದೆ.ಆದರೂ ದೇಶಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಹೆಮ್ಮೆಯಿದೆ.ದೇಶಸೇವೆ ಮಾಡಲು ಪ್ರಾಣಾರ್ಪಣೆ ಆದರೂ ಚಿಂತೆಯಿಲ್ಲ ಎಂಬ ಪ್ರಮಾಣವಚನ ಸ್ವೀಕರಿಸಿ ಸೇನೆಗೆ ಸೇರುವ ಯುವಕರು ತಮ್ಮ ಮುಂದಿನ ಗುರಿಯತ್ತ ಮುನ್ನುಗ್ಗಬೇಕು.೫೨೭ ವೀರಯೋಧರ ಮರಣದ ಫಲವಾಗಿ ಕಾರ್ಗಿಲ್ ಕದನದಲ್ಲಿ ಭಾರತ ಗೆದ್ದಿದೆ ಎಂಬುದನ್ನು ಬಿ.ಇ ವಿದ್ಯಾರ್ಥಿಗಳು ಅರಿಯಬೇಕು.ಭಾರತೀಯ ಸೇನೆಯಲ್ಲಿ ಯಾವುದೇ ವಿಜಯವಿರಲಿ ಸುಖಾಸುಮ್ಮನೆ ಬರುವುದಿಲ್ಲ. ತ್ಯಾಗ ಸೇವಾಗುಣವಿದ್ದರೆ ಮಾತ್ರ ಇಂತಹ ಸತ್ಕಾರ್ಯಗಳಿಗೆ ಬನ್ನಿ, ನಿಮಗೆ ಬೇಕಾದ ಮಾರ್ಗದರ್ಶನ ನೀಡಲು ಸದಾಸಿದ್ದ ಎಂದು ವಿದ್ಯಾರ್ಥಿಗಳಲ್ಲಿ ಭರವಸೆ ತುಂಬಿದರು.

ನಾಗಾರ್ಜುನ ತಾಂತ್ರಿಕ ಕಾಲೇಜಿನ ನಿರ್ದೇಶಕ ಡಾ. ಗೋಪಾಲಕೃಷ್ಣ ಮಾತನಾಡಿ ಸೇನೆಯಲ್ಲಿ ಬಡ್ಡಿ ಸಿಸ್ಟಂಯಿ ರುವ ಹಾಗೆ ಕಾಲೇಜಿನಲ್ಲಿ ಕೂಡ ಇರುತ್ತದೆ. ಇಲ್ಲಿ ಆಯ್ಕೆ ನಿಮ್ಮಕೈಯಲ್ಲಿಯೇ ಇರಲಿದೆ.ಉತ್ತಮ ಸ್ನೇಹಬಳಗ ಸಾಧನೆಗೆ ನೀರೆರೆದರೆ, ಕೆಟ್ಟವರ ಸಂಘ ಬಂಗಾರದಂತಹ ಭವಿಷ್ಯಕ್ಕೆ ಕೊಳ್ಳಿಯಿಡಲಿದೆ.ಯಾವುದೇ ಕಾರಣಕ್ಕೂ ಋಣಾತ್ಮಕ ಚಿಂತನೆಯುಳ್ಳವರ ಸಹವಾಸ ಮಾಡಲೇಬೇಡಿ ಎಂದು ಎಚ್ಚರಿಸಿದರು.

ಮೊಬೈಲ್ ಬಳಕೆ ಮಿತವಾಗಿದ್ದಷ್ಟು ನಿಮ್ಮ ಕನಸುಗಳಿಗೆ ಬೆಳಕಾಗಲಿದೆ. ಅತಿಯಾದ ಬಳಕೆ ಅಪಾಯಕ್ಕೆ ಆಹ್ವಾನ ನೀಡಲಿದೆ. ಪೋಷಕರು ನಿಮ್ಮ ಮಕ್ಕಳಿಗೆ ಕೇಳಿದಷ್ಟು ಹಣಕೊಡುವ ಬದಲು ಕಾಲೇಜಿಗೆ ಬಂದು ಮಾಹಿತಿ ಪಡೆದು ನೀಡುವುದು ಒಳಿತು.ಅಂಗವೈಕಲ್ಯತೆ ಸಾಧನೆಗೆ ಅಡ್ಡಿಯಾಗಬಾರದು ಎಂಬುದನ್ನು ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನು ನೋಡಿ ಕಲಿಯಬೇಕು ಎಂದು ಹೇಳಿದರು.

ಪ್ರಾಂಶುಪಾಲ ಡಾ.ಬಿ.ವಿ ರವಿಶಂಕರ್ ಮಾತನಾಡಿ ಪ್ರತಿಯೊಂದು ಯಶಸ್ಸಿನ ಹಿಂದೆ ಅಪಾರವಾದ ತ್ಯಾಗವಿದೆ. ತ್ಯಾಗವಿಲ್ಲದೆ ಯಾವ ಯಶಸ್ಸೂ ಬರುವುದಿಲ್ಲ. ನಾವು ಪಡೆದ ವಿದ್ಯೆ ಜ್ಞಾನದ ಜತೆಗೆ ಸಂಸ್ಕಾರವನ್ನು ಕಲಿಸಬೇಕು. ಸರಳತೆಗೆ ಮನಸ್ಸು ತೆರೆದುಕೊಳ್ಳಬೇಕು ಎಂದ ಅವರು ಕಲಿಕೆಯೆನ್ನುವುದು ನಿರಂತರ ಕ್ರಿಯೆ. ಮೊಬೈಲ್ ಡ್ರಗ್ಸ್ನಂ ತಾಗಿದ್ದು ಶಿಕ್ಷಕ, ಪೋಷಕ, ವಿದ್ಯಾರ್ಥಿ ಎಲ್ಲರೂ ಇದಕ್ಕೆ ಬಲಿಯಾಗಿದ್ದಾರೆ. ಸಾಧಕರಾಗಬೇಕು ಎಂದು ಕನಸು ಕಾಣುವವರು ಖಂಡಿತವಾಗಿ ಮೊಬೈಲ್ ಬಳಕೆ ಕಡಿಮೆ ಮಾಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಡೀನ್ ಡಾ.ಜಯಂತಿ, ಉಪಪ್ರಾಂಶುಪಾಲ ನಾಗೇಶ್, ಪಿಯುಸಿ ಪ್ರಾಂಶುಪಾಲ ದುಪಾಟಿ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಕುಮಾರಿ ವರ್ಷಾ ಪಟ್ಟಣಶೆಟ್ಟಿ, ನಮ್ರತಾ,ಚಿನ್ಮಯಿ,ಎಲ್., ಅನನ್ಯ.ಎ,.ಆರ್. ಪ್ರಿಯಾಂಕ ಚೌರಾಸಿಯಾ, ಯಶಸ್ವಿನಿ.ಕೆ.ಸಿ. ಅವರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಇದನ್ನೂ ಓದಿ: Chickballapur News: ಜನಪ್ರತಿನಿಧಿ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆ ಅರಿವು ಮೂಡಿಸುವುದೇ ಶಾಲಾ ಸಂಸತ್-ಬಿಇಒ ವೆಂಕಟೇಶ್