Sunday, 8th September 2024

ಸ್ವಾತಂತ್ರ್ಯದ ಅಮೃತ ಮಹೋತ್ಸವ; 2000 ಶಾಲಾ ಮಕ್ಕಳಿಂದ ಸ್ವಾತಂತ್ರ್ಯದ ನಡಿಗೆ

ಕಲಬುರಗಿ: ಸ್ವಾತಂತ್ರ್ಯದ ಅಮೃತ‌ ಮಹೋತ್ಸವ ಅಂಗವಾಗಿ ಗುರುವಾರ ಕಲಬುರಗಿ‌ ನಗರದ ವಲ್ಲಭಭಾಯಿ ಪಟೇಲ್ ವೃತ್ತ ದಿಂದ ಜಗತ್ ವೃತ್ತದ ವರೆಗೆ ನಡೆದ “ಸ್ವಾತಂತ್ರ್ಯದ ನಡಿಗೆ, ಅಮೃತ‌ ಮಹೋತ್ಸವದೆಡೆಗೆ” ನಡಿಗೆಯಲ್ಲಿ‌ ಸುಮಾರು 2000 ಶಾಲಾ ಮಕ್ಕಳು ಸಂಭ್ರಮದಿಂದ ಭಾಗವಹಿಸಿ ಉತ್ಸಾಹದ ನಡಿಗೆಯಲ್ಲಿ ಭಾಗಿಯಾದರು.

ಕಲಬುರಗಿ ಜಿಲ್ಲಾಡಳಿತ,‌ ಜಿಲ್ಲಾ‌ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ‌ ಈ ಕಾರ್ಯಕ್ರಮಕ್ಕೆ‌ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಡಿ.ಸಿ. ಯಶವಂತ ವಿ. ಗುರುಕರ್ ಅವರು ತ್ರಿವರ್ಣ ಧ್ವಜ ಬಣ್ಣದ ಬಲೂನ್ ಗಳನ್ನು ಆಕಾಶದಲ್ಲಿ ತೇಲಿ ಬಿಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಿ.ಸಿ. ಯಶವಂತ‌ ವಿ. ಗುರುಕರ್ ಮಾತನಾಡಿ, ನಮ್ಮ‌ ಅನೇಕ ಪೂರ್ವ ಜರ ತ್ಯಾಗ ಬಲಿದಾನದ ಫಲವಾಗಿ ದೊರೆತ ಸ್ವಾತಂತ್ರ್ಯಕ್ಕೆ ಇದೀಗ‌ ಅಮೃತ ಮಹೋತ್ಸವದ‌ ಸಂಭ್ರಮ. ಸ್ವಾತಂತ್ರ್ಯಕ್ಕೆ ಪ್ರಾಣವನ್ನೇ ಲೆಕ್ಕಿಸದೇ ಹೋರಾಡಿದ ಮಹನೀಯರನ್ನು ಸ್ಮರಿಸುವ ಮತ್ತು ರಾಷ್ಟ್ರ ಪ್ರೀತಿ ಹೆಚ್ಚಿಸಲು ನಡಿಗೆ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಮಾತನಾಡಿ, ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆ.13 ರಿಂದ‌ 15ರ ವರೆಗೆ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ ಮಾತನಾಡಿ, ಸಶಕ್ತ ಭಾರತ ನಿರ್ಮಾಣಕ್ಕೆ ಎಲ್ಲರು ಶ್ರಮಿಸಬೇಕು. ಸ್ವಾತಂತ್ರ್ಯದ ನಡಿಗೆಯಲ್ಲಿ ಭಾಗವಹಿಸಲು ಮಕ್ಕಳು ರಾಷ್ಟ್ರನಾಯಕರ ವೇಷಭೂಷಣ ಧರಿಸಿ ಬಂದಿರುವುದು ಸಂತಸ ತಂದಿದೆ ಎಂದರು.

ನಡಿಗೆ ಜಾಥಾ ಉದ್ದಕ್ಕೂ ರಾಷ್ಟ್ರನಾಯಕರ ವೇಷಭೂಷಣ ಧರಿಸಿದ ಮಕ್ಕಳು, ಕೈಯಲ್ಲಿ ಧ್ವಜ, ಧ್ವಜ ಬಣ್ಣದ‌ ಬಲೂನ್ ಗಳನ್ನು ಹಿಡಿದು ರಾಷ್ಟ್ರಭಕ್ತಿ, ರಾಷ್ಟ್ರೀಯತೆ ಮೆರೆದರು. ಲಂಬಾಣಿ ಮಕ್ಕಳ ನೃತ್ಯ , ಡೊಳ್ಳು ಕುಣಿತ ನೃತ್ಯ ಗಮನ ಸೆಳೆಯಿತು.

ಜಾಥಾದಲ್ಲಿ ಅಪರ ಶಿಕ್ಷಣ ಆಯುಕ್ತಾಲಯದ ಸಹ ನಿರ್ದೇಶಕ ವಿಜಯಕುಮಾರ, ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಮ್ಮ‌ ಡವಳಗಿ, ವೀರಣ್ಣಾ ಬೊಮ್ಮನಳ್ಳಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ವರ್ಗ ಇದ್ದರು.

error: Content is protected !!