Thursday, 12th December 2024

ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ಶಾಂತಿಯುತ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಮರು ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.

ಇಂಡಿಗನತ್ತ ಗ್ರಾಮದ ಮತಗಟ್ಟೆ ಸಂಖ್ಯೆ 146 ರಲ್ಲಿ ಮರು ಮತದಾನ ನಡೆಯುತ್ತಿದ್ದು, ಇಲ್ಲಿ ಒಟ್ಟು 528 ಮತದಾರರಿದ್ದಾರೆ.

ಇವರಲ್ಲಿ ಪುರುಷರು 279, ಮಹಿಳೆಯರು 249. 10.30ರ ವೇಳೆಗೆ 57 ಮಂದಿ ಮತ ಚಲಾಯಿಸಿದ್ದರು. ಇದುವರೆಗೆ ಮೇಂದರೆಯ 54 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಇಂಡಿಗನತ್ತದ ಮೂವರು ಮತ ಚಲಾಯಿಸಿದ್ದಾರೆ.

ಏ.26ರಂದು ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತದಾನದ ಸಂದರ್ಭದಲ್ಲಿ ಇಂಡಿಗನತ್ತ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು. ಈ ಸಂದರ್ಭದಲ್ಲಿ ಮೇಂದರೆ ಗ್ರಾಮದ ಕೆಲವರು ಮತದಾನ ಮಾಡಲು ಹೋದಾಗ, ಇಂಡಿಗನತ್ತ ಗ್ರಾಮಸ್ಥರು ಪ್ರತಿರೋಧ ತೋರಿದ್ದರು. ಈ ವೇಳೆ ಘರ್ಷಣೆ, ಕಲ್ಲು ತೂರಾಟ ನಡೆದು, ಮತಗಟ್ಟೆ ಸಿಬ್ಬಂದಿ ಸೇರಿ ಕೆಲವರಿಗೆ ಗಾಯಗಳಾಗಿತ್ತು. ಮತ ಯಂತ್ರಗಳನ್ನು ಒಡೆದು ಹಾಕಲಾಗಿತ್ತು. ‘

ಮತಗಟ್ಟೆಯನ್ನೂ ಧ್ವಂಸ ಮಾಡಲಾಗಿತ್ತು. ಈ ಸಂಬಂಧ 30 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರಣ, ಇಂದು ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು.

ಇಂದಿನ ಮತದಾನಕ್ಕೆ ಇಂಡಿಗನತ್ತ ಗ್ರಾಮಸ್ಥರು ವಿರಳ ಸಂಖ್ಯೆಯಲ್ಲಿ ಬರುತ್ತಿದ್ದಾರೆ.