Wednesday, 18th September 2024

ಒಳಮೀಸಲಾತಿಯನ್ನು ಜಾರಿಗೆ ತರುತ್ತೇವೆ : ಅಬಕಾರಿ ಸಚಿವ ತಿಮ್ಮಾಪುರ್ ಭರವಸೆ 

ತುಮಕೂರು: ಒಳಮೀಸಲಾತಿಯನ್ನು ಎಷ್ಟೇ ಕಷ್ಟವಾದರೂ  ಜಾರಿಗೆ ತರುತ್ತೇವೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಭರವಸೆ ನೀಡಿದರು.
ನಗರದ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ  ಜಿಲ್ಲಾ ಮಾದಿಗ ಬಳಗದವತಿಯಿಂದ ಆಯೋಜಿಸಿದ್ದ ಸಮುದಾಯದ ಸಚಿವರು, ಜಿಲ್ಲೆಯ ಸಚಿವರು ಹಾಗೂ ಶಾಸಕರುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನ್ಯಾ.ಎ.ಜೆ.ಸದಾಶಿವ ಆಯೋಗ ರಚಿಸಿದ್ದು, 2023ರ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಾಣಾಳಿಕೆಯ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಅವರು ಒಳಮೀಸಲಾತಿ ಜಾರಿ ವಿಚಾರವನ್ನು ಸೇರಿಸಿದ್ದಾರೆ. ಹಾಗಾಗಿ ಅದನ್ನು ಶೇ100ಕ್ಕೆ ನೂರರಷ್ಟು ಜಾರಿಗೆ ಸಿದ್ದ ಎಂದರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ,ಶೋಷಿತ ಸಮುದಾಯಗಳ ಸಂಘಟನೆ ಕೇವಲ ಜಿಲ್ಲಾ ಮಟ್ಟಕ್ಕೆ ಸೀಮಿತವಾಗ ಬಾರದು ತಾಲೂಕು ಮಟ್ಟಕ್ಕೂ ಮುಟ್ಟಬೇಕು. ಇಂದು ನಾವೆಲ್ಲರೂ ಮತದಾನದ ಹಕ್ಕು ಪಡೆಯುತಿದ್ದರೆ ಅದಕ್ಕೆ ಕಾರಣ ಡಾ.ಬಾಬಾ ಸಾಹೇಬ್ ಅಂಬೇಡ್ಕರ್,ದಲಿತರ ಸಮಸ್ಯೆಯನ್ನು ನಾನು ಬಾಲ್ಯದಿಂದಲೂ ನೋಡಿ ದ್ದೇನೆ. ಆದರೆ ಪರಿಸ್ಥಿತಿ ಕೊಂಚ ಬದಲಾವಣೆಯಿದೆ. ಒಗ್ಗಟ್ಟಿನ ಕೊರತೆಯಿಂದ ಸಮಸ್ಯೆ ಯಿಂದ ಹೊರಬರಲು ಸಾಧ್ಯವಾಗಿಲ್ಲ.ಒಳಮೀಸಲಾತಿಯ ಬಗ್ಗೆ ನಮ್ಮ ಪ್ರಾಣಾಳಿಕೆಯಲ್ಲಿ ಉಲ್ಲೇಖವಿದೆ.ಆ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.ಮೀಸಲಾತಿ ನಮ್ಮೆಲ್ಲರ ಹಕ್ಕು, ಧರ್ಮಕ್ಕೆ ನೀಡುವಂತಹದ್ದಲ್ಲ.ನ್ಯಾಯ ದೊರಕಿಸಿಕೊಡಲು ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಬಾಬಾ ಸಾಹೇಬರು ಹೇಳಿರುವಂತೆ ಹೋರಾಟ ನಿರಂತರ.ಆದರೆ ಅದು ಸನ್ಮಾರ್ಗದಲ್ಲಿ ಇರಬೇಕು.ಮುಂದುವರೆದ ಸಮಾಜಗಳ ರೀತಿ ಬೆಳೆದು ಮುಖ್ಯವಾಹಿನಿಗೆ ಬರಲು ಎಲ್ಲಾ ರೀತಿಯ ಪ್ರಯತ್ನ ನಡೆಸಬೇಕಿದೆ.ಚಿತ್ರದುರ್ಗದ ಐಕ್ಯತಾ ಸಮಾವೇಶದಲ್ಲಿ ನೀಡಿದ ಭರವಸೆಯಂತೆ ನಾವುಗಳು ಒಳಮೀಸಲಾತಿ ಜಾರಿಗೆ ಬದ್ದರಾಗಿದ್ದೇವೆ.ಈಗಾಗಲೇ ಮುಖ್ಯಮಂತ್ರಿಗಳು,ಉಪಮುಖ್ಯಮಂತ್ರಿಗಳು, ಸಚಿವರುಗಳು ಮಾತನಾಡಿದ್ದು, ಯಾವ ವರ್ಗಕ್ಕೂ ಅನ್ಯಾಯವಾಗದ ರೀತಿ ನ್ಯಾಯ ಒದಗಿಸಲು ಮುಂದಿನ ದಿನಗಳಲ್ಲಿ ಸದನದಲ್ಲಿ ಮಂಡನೆಯಾಗಲಿದೆ ಇದರ ಬಗ್ಗೆ ಸಂಶಯ ಬೇಡ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಆಯೋಜಕ ಕೋಡಿಯಾಲ ಮಹದೇವ್,ಮಾದಿಗ ಸಮುದಾಯ ಕೇವಲ ಮತಬ್ಯಾಂಕ್ ಆಗಿ ಮಾತ್ರ ಕೆಲಸ ಮಾಡದೆ,ನಮಗೂ ರಾಜಕೀಯ ಅಧಿಕಾರ ದೊರೆಯಬೇಕು ಎಂಬ ನಿಟ್ಟಿನಲ್ಲಿ ಸಮುದಾಯದ ಸಚಿವರ ಜತೆಗೆ,ಜಿಲ್ಲೆಯ ಸಚಿವರು, ಶಾಸಕರಿಗೆ ಸನ್ಮಾನ ಏರ್ಪಡಿಸಿ, ಹೋರಾಟಗಾರರಿಗೆ ಅದ್ಯತೆ ನೀಡುವಂತೆ ಬೇಡಿಕೆಯನ್ನು ಮುಂದಿಟ್ಟಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ನಿಮ್ಮ ಪರ ಪ್ರಚಾರ ಮಾಡಿದ ನಮಗೂ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಬೇಕೆಂಬುದು ಜಿಲ್ಲಾ ಮಾದಿಗ ಬಳಗದ ಮನವಿಯಾಗಿದೆ ಎಂದರು.
ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ.ಜಯಚಂದ್ರ, ಕೆಪಿಸಿಸಿ ವಕ್ತಾರ ನಿಕೇತ್‌ರಾಜ್, ಶಾಸಕರಾದ ಡಾ.ಎಚ್.ಡಿ. ರಂಗನಾಥ್, ಕೆ.ಷಡಕ್ಷರಿ,ಜೋತಿಗಣೇಶ್,ಮಾಜಿ ಶಾಸಕ ಗಂಗಹನುಮಯ್ಯ ಅವರುಗಳು ಮಾತನಾಡಿದರು.
ವೇದಿಕೆಯಲ್ಲಿ ಉದ್ಯಮಿ ಡಿ.ಟಿ.ವೆಂಕಟೇಶ್, ಲಿಡ್ಕರ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ವಾಲೆಚಂದ್ರಯ್ಯ,ಎಂ.ವಿ.ರಾಘವೇಂದ್ರ ಸ್ವಾಮಿ, ಕೊಟ್ಟ ಶಂಕರ್,ಇಕ್ಬಾಲ್ ಅಹಮದ್, ತುಮಕೂರು ಜಿಲ್ಲಾ ಮಾದಿಗ ಬಳಗದ ಅಧ್ಯಕ್ಷ ಕೋಡಿಯಾಲ ಮಹದೇವ್, ಕಾರ್ಯಾಧ್ಯಕ್ಷ ಬಂಡೆಕುಮಾರ್, ಉಪಾಧ್ಯಕ್ಷ ಟಿ.ಸಿ.ರಾಮಯ್ಯ, ಡಾ.ಸಿದ್ದಾಪುರ ರಂಗಶಾಮಣ್ಣ, ಪಾವಗಡ ರಾಮಾಂಜಿ, ನಾಗರಾಜು ಗೂಳರಿವೆ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *