Friday, 22nd November 2024

Instagram Blackmail: ಇನ್‌ಸ್ಟಾಗ್ರಾಮ್ ಫ್ರೆಂಡ್‌ಗೆ ನಗ್ನ ವಿಡಿಯೊ ಕಳುಹಿಸಿ ಚಿನ್ನ, ನಗದು ಕಳೆದುಕೊಂಡ ವಿವಾಹಿತ ಮಹಿಳೆ!

ಬೆಂಗಳೂರು: ಇನ್‌ಸ್ಟಾಗ್ರಾಮ್ ಸ್ನೇಹಿತನ ನಂಬಿ ವಿವಾಹಿತ ಮಹಿಳೆಯೊಬ್ಬರು ಸಂಕಷ್ಟಕ್ಕೀಡಾಗಿರುವ ಘಟನೆ (Instagram Blackmail) ನಗರದಲ್ಲಿ ನಡೆದಿದೆ. ಮದುವೆಯಾಗಿ ಮಕ್ಕಳಿದ್ದ 37 ವರ್ಷದ ಮಹಿಳೆ, ಇನ್‌ಸ್ಟಾಗ್ರಾಮ್ ಸ್ನೇಹಿತನ ಸಹವಾಸಕ್ಕೆ ಬಿದ್ದು ಹಣ, ಚಿನ್ನಾಭರಣ ಕಳೆದುಕೊಂಡಿದ್ದಾರೆ. ಜತೆಗೆ ಆಕೆಯ ನಗ್ನ ಚಿತ್ರ, ವಿಡಿಯೊಗಳು ಸ್ನೇಹಿತನ ಮೂಲಕ ಕುಟುಂಬಸ್ಥರಿಗೆ ತಲುಪಿ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಈ ಬಗ್ಗೆ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಾಹಿತ ಮಹಿಳೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಷೇಕ್‌ ಎಂ ನಾಯಕ್‌ (24) ಎಂಬ ಯುವಕನ ಪರಿಚಯವಾಗಿತ್ತು. ಕೆಲ ದಿನಗಳಲ್ಲೇ ಇಬ್ಬರೂ ಫೋನ್ ನಂಬರ್‌ ಪರಸ್ಪರ ವಿನಿಮಯ ಮಾಡಿಕೊಂಡು ನಿರಂತರವಾಗಿ ಮೆಸೇಜ್‌, ಕಾಲ್‌ ಮಾಡಿ ಮಾತನಾಡಿಕೊಳ್ಳುತ್ತಿದ್ದರು. ಈ ನಡುವೆ ತಮ್ಮ ವೈವಾಹಿಕ ವಿಚಾರಗಳನ್ನು ಅಭಿಷೇಕ್ ಜತೆ ಮಹಿಳೆ ಹಂಚಿಕೊಂಡಿದ್ದರು.

ಮಹಿಳೆಯ ವೈವಾಹಿಕ ಜೀವನದ ವಿಷಯಗಳನ್ನು ತಿಳಿದುಕೊಂಡ ಅಭಿಷೇಕ್‌ ಮಹಿಳೆಯ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡಿದ್ದಾನೆ. ಸಹಾಯ ಮಾಡುವ ನೆಪದಲ್ಲಿ ಆಕೆ ಜತೆಗೆ ಪದೇಪದೆ ವಿಡಿಯೊ ಕಾಲ್‌, ವಾಯ್ಸ್‌ ಮೆಸೇಜ್ ಮಾಡುತ್ತಿದ್ದ. ಹೀಗಾಗಿ ಯುವಕನನ್ನು ನಂಬಿದ ಮಹಿಳೆ, ನಗ್ನವಾಗಿ ವಿಡಿಯೊ ಕಾಲ್‌ಗಳನ್ನು ಮಾಡಿದ್ದಾರೆ. ನಗ್ನ ಫೋಟೋಗಳನ್ನೂ ಕಳುಹಿಸಿದ್ದಾರೆ.

ಕೆಲ ವರ್ಷಗಳ ಬಳಿಕ ಇಬ್ಬರ ನಡುವೆ ಜಗಳ ಬಂದಿದೆ. ಹೀಗಾಗಿ ಆರಂಭದಿಂದಲೂ ಮಹಿಳೆಯ ಕಳುಹಿಸಿದ್ದ ನಗ್ನ ಫೋಟೊ ಹಾಗೂ ವಿಡಿಯೊ ಕಾಲ್‌ ರೆಕಾರ್ಡ್‌ ಇಟ್ಟುಕೊಂಡಿದ್ದ ಅಭಿಷೇಕ್‌ ಮಹಿಳೆಗೆ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದಾನೆ. ಈ ಮೂಲಕ ಆಕೆಯಿಂದ ಚಿನ್ನಾಭರಣ ಹಾಗೂ ಸಾಕಷ್ಟು ನಗದನ್ನು ವಸೂಲಿ ಮಾಡಿದ್ದಾನೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಮಹಿಳೆ ನಿರಾಕರಿಸಿದ್ದು, ಸಿಟ್ಟಿಗೆದ್ದ ಅಭಿಷೇಕ್ ಮಹಿಳೆಯ ಪತಿ ಹಾಗೂ ಕುಟುಂಬಸ್ಥರನ್ನು ಸಂಪರ್ಕ ಮಾಡಿ, ಆಕೆಯ ನಗ್ನ ಫೋಟೊಗಳನ್ನು ತೋರಿಸಿದ್ದಾನೆ. ಇದರಿಂದ ಮಹಿಳೆ ತೀವ್ರ ಸಂಕಷ್ಟ ಎದುರಾಗಿದೆ.

ಪತ್ನಿಯ ಅಕ್ರಮ ಸಂಬಂಧ ಕಂಡು ಪತಿ ಸಿಟ್ಟಾಗಿ, ಆಕೆ ಹಾಗೂ ಮಗುವನ್ನು ಮನೆಯಿಂದ ಹೊರ ಹಾಕಿದ್ದಾನೆ. ಹೀಗಾಗಿ ಆಕೆ ತಂಗಿ ಮನೆಗೆ ಹೋಗಿದ್ದಾರೆ. ಇಷ್ಟಾದರೂ ಯುವಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಮಹಿಳೆಯ ದೂರಿನ ಅನ್ವಯ ಯುವಕನನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದು | Viral News: ಮದುವೆಗೆ ರಜೆ ಕೊಡಲ್ಲ ಎಂದ ಬಾಸ್‌, ವಿಡಿಯೋ ಕಾಲ್‌ನಲ್ಲೇ ಖುಬೂಲ್ ಹೈ ಎಂದ ವ್ಯಕ್ತಿ!

ಮಹಿಳೆಗೆ 2012ರಲ್ಲಿ ವಿವಾಹವಾಗಿತ್ತು, ಇವರಿಗೆ 11 ವರ್ಷದ ಮಗಳಿದ್ದಾಳೆ. ಇವರ ಪತಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ದಂಪತಿಗಳು ಕಳೆದ ನಾಲ್ಕು ವರ್ಷಗಳಿಂದ ವೈಮನಸ್ಸು ಇದ್ದರೂ ಜತೆಗೆ ವಾಸ ಮಾಡುತ್ತಿದ್ದರು. 2021 ರ ಆರಂಭದಲ್ಲಿ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಅಭಿಷೇಕ್ ಸ್ನೇಹ ಪರಿಚಯವಾಗಿತ್ತು ಎಂದು ಯುವತಿಯ ದೂರಿನಲ್ಲಿ ಉಲ್ಲೇಖಿಸಲಾಗಿದೆ.