ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದ ಜಾಡು ತಪ್ಪಿಸಲು ಆರೋಪಿಗಳಿಗೆ 85 ಲಕ್ಷ ರೂ. ನೀಡಿದ್ದ ದರ್ಶನ್‌ಗೆ (Actor Darshan) ಅಷ್ಟು ಹಣ ಎಲ್ಲಿಂದ ಬಂತು ಎಂಬುದರ ಜಾಡು ಹಿಡಿಯಲು ಆತನ ಬೆನ್ನು ಬಿದ್ದಿರುವ ಐಟಿ ಇಲಾಖೆ (IT department) ಅಧಿಕಾರಿಗಳು, ನಾಳೆ ಬಳ್ಳಾರಿ ಜೈಲಿಗೆ (Bellary jail) ಭೇಟಿ ನೀಡಿ ತನಿಖೆ ನಡೆಸಲಿದ್ದಾರೆ. ಇದಕ್ಕೂ ಮುನ್ನ, ಇಂದು ದರ್ಶನ್ ಪರ ಹಿರಿಯ ವಕೀಲ ರಾಮಸಿಂಗ್, ಜೈಲಿನಲ್ಲಿ ನಟನನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದರು.
ನಾಳೆ ಐಟಿ ಅಧಿಕಾರಿಗಳು ದರ್ಶನ್ ವಿಚಾರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ದರ್ಶನ್ ಜೊತೆಗೆ ಚರ್ಚೆ ಮಾಡಲು ಹಿರಿಯ ವಕೀಲರು ಆಗಮಿಸಿದರು. ರೇಣುಕಾ ಸ್ವಾಮಿ ಕೊಲೆ ಬಳಿಕ ಅರೋಪ ಮೈಮೇಲೆ ಹೊತ್ತುಕೊಳ್ಳಲು ಡೀಲ್ ನೀಡಿದ ಪ್ರಕರಣ ಇದಾಗಿದೆ. ಇಷ್ಟೊಂದು ಹಣ ನಗದು ರೂಪದಲ್ಲಿ ಯಾರಿಂದ, ಎಲ್ಲಿಂದ, ಹೇಗೆ ಬಂತು ಎಂಬುದು ಐಟಿ ಅಧಿಕಾರಿಗಳ ಪ್ರಶ್ನೆಯಾಗಿದೆ. ಐಟಿ ಅಧಿಕಾರಿಗಳ ಮುಂದೆ ಯಾವ ರೀತಿಯಲ್ಲಿ ಉತ್ತರ ನೀಡಬೇಕು ಎನ್ನುವ ಬಗ್ಗೆ ವಕೀಲರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಸಾಲು ಸಾಲು ಸಂಕಷ್ಟ ಎದುರಾಗುತ್ತಿದೆ. ದರ್ಶನ್ ಜಾಮೀನು ವಿಚಾರಣೆ ಮುಂದೂಡಿಕೆ ಆದ ಬೆನ್ನಲ್ಲೆ, ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಕೋರ್ಟ್‌ನಿಂದ ಈತನ ವಿಚಾರಣೆಗೆ ಅನುಮತಿ ಪಡೆದಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅನ್ನು ಐಟಿ ಅಧಿಕಾರಿಗಳು ಸೋಮವಾರ ಭೇಟಿ ಮಾಡಿದ್ದಾರೆ. ನಟ ದರ್ಶನ್ ಬಂಧನ ಬಳಿಕ ಆತನ ಮನೆಯಲ್ಲಿ ಮೊದಲು 30 ಲಕ್ಷ ಪತ್ತೆ ಆಗಿತ್ತು. ನಂತರ ಬೇರೆ ಬೇರೆ ಕಡೆಗಳಲ್ಲಿ ಲಕ್ಷ ಲಕ್ಷ ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಪ್ರಕರಣದ ಬಳಿಕ ಹಂತ ಹಂತವಾಗಿ ಸಿಕ್ಕ ಒಟ್ಟು 85 ಲಕ್ಷ ರೂ.ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆ ಹಣ ಮೂಲವನ್ನು ಪತ್ತೆ ಮಾಡಲಿದ್ದಾರೆ.
ನಟ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ತಂದು ಹತ್ಯೆಗೈದ ಬಳಿಕ ಅದರ ಸಾಕ್ಷಿ ನಾಶಕ್ಕೆ ಪ್ಲಾನ್ ಮಾಡಿ ದರ್ಶನ್ ಆಂಡ್ ಗ್ಯಾಂಗ್, ಮೂವರನ್ನು ಪೊಲೀಸರ ಮುಂದೆ ತಪ್ಪೊಪ್ಪಿಕೊಳ್ಳುವಂತೆ ಹುರಿದುಂಬಿಸಿ ಮೂರು ಜನರಿಗೆ ತಲಾ 05 ಲಕ್ಷ ರೂಪಾಯಿ ಹಣ ನೀಡಿದ್ದರು. ತರಾತುರಿಯಲ್ಲಿಯೇ ಬರೋಬ್ಬರಿ 30 ಲಕ್ಷ ರೂಪಾಯಿ ಹಣ ಹೊಂದಿಸಿದ್ದರು. ಅದನ್ನೆ ಸಾಕ್ಷ್ಯ ನಾಶಕ್ಕೆ, ಅಮಾಯಕರನ್ನು ಸರೆಂಡರ್ ಮಾಡಿಸಲು ಬಳಸಲಾಗಿತ್ತು.
ಒಟ್ಟು 85 ಲಕ್ಷ ರೂಪಾಯಿಯನ್ನು ಆರೋಪಿಗಳ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಪ್ರಕರಣವನ್ನು ಐಟಿ ಇಲಾಖೆಗೆ ಒಪ್ಪಿಸಿದ್ದರು. ಇದೀಗ ಐಟಿ ಇಲಾಖೆಗೆ ಪ್ರಕರಣ ಮುಂದುವರೆಸಲು ಕೋರ್ಟ್ ಒಪ್ಪಿಗೆ ಪಡೆದುಕೊಂಡಿದೆ.