ಚಿಕ್ಕಬಳ್ಳಾಪುರ: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಅಭಿಯಾನದ ಪ್ರಯುಕ್ತ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ಜರಬಂಡಹಳ್ಳಿ ಗ್ರಾಮದಲ್ಲಿ ಇದೇ ನವೆಂಬರ್ ೨೬ ರಂದು ಜಿಲ್ಲಾಡಳಿತ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್ ಅವರು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ಜಿಲ್ಲಾಧಿಕಾರಿ ಗಳ ನಡೆ ಹಳ್ಳಿ ಕಡೆ”ಕಾರ್ಯಕ್ರಮದ ಪೂರ್ವ ಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವರು ಸ್ಥಳೀಯರ ಅಹವಾಲು ಹಾಗೂ ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸುವರು. ಈ ನಿಟ್ಟಿನಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ಕಾರ್ಯಕ್ರಮ ವನ್ನು ಯಶಸ್ವಿಯಾಗೊಳಿಸಲು ಸಂಬ0ಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾರ್ಯಹಂಚಿಕೆ ಮಾಡಿ ನಿಯೋಜನೆಗೊಳಿಸಿದರು.
ಅಂದು ಗ್ರಾಮದಲ್ಲಿ ಮೊದಲಿಗೆ ಸಚಿವರಿಗೆ ಗ್ರಾಮದ ಮಹಿಳೆಯರಿಂದ ಭವ್ಯ ಸ್ವಾಗತ ನೀಡಿ ಎತ್ತಿನಗಾಡಿಯಲ್ಲಿ ಮೆರವಣಿಗೆಯ ಮೂಲಕ ಕರೆತರಲಾಗುವುದು, ಸ್ಥಳೀಯ ಕಲಾ ತಂಡಗಳೊAದಿಗೆ ಸ್ವಾಗತಿಸಲಾಗುವುದು. ನಂತರ ಗ್ರಾಮದ ಅರಳಿಕಟ್ಟೆಯಲ್ಲಿ ಗ್ರಾಮಸ್ಥ ರೊಂದಿಗೆ ಸಂವಾದ ನಡೆಸುವರು. ಈ ಎಲ್ಲವುಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸಂಬ0ಧಪಟ್ಟ ಇಲಾಖೆಯ ಅಧಿಕಾರಿ ಗಳಿಗೆ ಸೂಚಿಸಿದರು.
ವೇದಿಕೆಯ ಸಿದ್ಧತೆ: ಗಣ್ಯರು ಆಗಮಿಸುವ ಮುಖ್ಯ ವೇದಿಕೆಗೆ ಹಾಗೂ ಸ್ಟಾಲ್ ಗಳಿಗೆ ಶಾಮಿಯಾನ, ವೇದಿಕೆ ಅಲಂಕಾರ, ಫಲಾನುಭವಿಗಳನ್ನು ಕರೆ ತರುವ ಮಾರ್ಗ, ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ಎಲ್ಲರಿಗೂ ಅನುಕೂಲವಾಗುವ ರೀತಿ ಆಸನ ವ್ಯವಸ್ಥೆಯನ್ನು ಯಾವುದೇ ಲೋಪವಿಲ್ಲದೆ ವ್ಯವಸ್ಥಿತಗೊಳಿಸಬೇಕು. ವಿವಿಧ ಯೋಜನೆಗಳ ಸುಮಾರು ೨೦ ಸಾವಿರ ಫಲಾನುಭವಿ ಗಳು ಭಾಗವಹಿಸುವ ನಿರೀಕ್ಷೆ ಇದೆ ಆದ್ದರಿಂದ ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಸಂಬ0ಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದರು
ಮೂಲ ಸೌಕರ್ಯ: ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಮೂಲ ಸೌಕರ್ಯ ಒದಗಿಸಲು ಮುಖ್ಯವಾಗಿ ಕುಡಿಯುವ ನೀರು, ಊಟ, ಶೌಚಾಲಯ, ಸ್ವಚ್ಛತೆ,ವೇದಿಕೆ ಪ್ರಾಮಾಣಿಕರಣ, ವಿದ್ಯುತ್ ಸಂಪರ್ಕ ಒದಗಿಸಬೇಕು. ಆರೋಗ್ಯ ಇಲಾಖೆಯಿಂದ ಅಂಬುಲೇನ್ಸ್ ವ್ಯವಸ್ಥೆ, ವೈದ್ಯರು ಹಾಗೂ ಆರೋಗ್ಯ, ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಬೇಕು ಎಂದು ತಿಳಿಸಿದರು.
ಭದ್ರತೆ: ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಿಂದ ಪೊಲೀಸ್ ಅಧಿಕಾರಿಗಳನ್ನು ಹೆಚ್ಚು ನೇಮಿಸಬೇಕು, ಜೊತೆಗೆ ಶಿಕ್ಷಣ ಇಲಾಖೆಯ ಎನ್.ಸಿ.ಸಿ ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಸ್ವಯಂ ಸೇವಕರನ್ನು ನಿಯೋಜಿಸಬೇಕು. ಅಲ್ಲದೆ ಶಿಕ್ಷಣ ಇಲಾಖೆಯಿಂದ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲು ಸೂಚಿಸಿದರು.
ಸ್ಟಾಲ್ ಗಳ ವ್ಯವಸ್ಥೆ: ಗ್ರಾಮ ವಾಸ್ತವ್ಯ ದಿನದಂದು ಜರಬಂಡಹಳ್ಳಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗುವುದು. ಸರ್ಕಾರಿ ಯೋಜನೆಗಳ ಜಾಗೃತಿ ಮತ್ತು ಅನುಷ್ಟಾನಕ್ಕಾಗಿ ಮಾಹಿತಿ ಕೇಂದ್ರ, ಅರ್ಜಿ ಸ್ವೀಕಾರ ಕೇಂದ್ರ ಮತ್ತು ಮಳಿಗೆಗಳನ್ನು ತೆರೆಯಲು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಗಳು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ, ಇ-ಶ್ರಮ್, ಪಡಿತರ ಯೋಜನೆ, ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ ಯೋಜನೆ, ಪೋಡಿ, ಹದ್ದುಬಸ್ತು, ಆಧಾರ್, ಪೌತಿ ಖಾತೆ, ಪಹಣಿ ದೋಷ ತಿದ್ದುಪಡಿ, ಆಶ್ರಯ ವಸತಿ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆಯನ್ನು ಸೂಕ್ತವಾಗಿ ಮಾಡಲು ಅಗತ್ಯ ಕ್ರಮವಹಿಸುವಂತೆ ಸಂಬ0ಧಪಟ್ಟ ಅಧಿಕಾರಿಗಳಿಗೆ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಗೌರಿಬಿದನೂರು ತಾಲ್ಲೂಕಿನ ತಹಸೀಲ್ದಾರ್ ಶ್ರೀನಿವಾಸ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹರೀಶ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.