Wednesday, 9th October 2024

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೈಕಲ್ ಜಾಥಾ

ತುಮಕೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೆ ಸರ್ಕಾರ ನೀಡಿರುವ ಭರವಸೆಯಂತೆ ಸರಕಾರಿ ನೌಕರರಂತೆ ಸಮಾನ ವೇತನ, ವೇತನ ಆಯೋಗದ ಮಾದರಿಯಲ್ಲಿ ನೀಡುವುದು ಸೇರಿದಂತೆ ಇತರೆ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಬಳ್ಳಾರಿಯಿಂದ ಹಮ್ಮಿಕೊಂಡಿರುವ ಸೈಕಲ್ ಜಾಥಾ ನಗರಕ್ಕೆ ಆಗಮಿಸಿತು.
ನಗರದ ಟೌನ್‌ಹಾಲ್ ವೃತ್ತಕ್ಕೆ ಆಗಮಿಸಿದ ಸಾರಿಗೆ ನೌಕರರ ಕೂಟದ ಸೈಕಲ್ ಜಾಥಾ ದಲ್ಲಿ ಸಾರಿಗೆ ಸಂಸ್ಥೆಯ ತುಮಕೂರು ಜಿಲ್ಲೆಯ ನೌಕರರು ಮತ್ತು ಕುಟುಂಬದವರು ಪಾಲ್ಗೊಂಡು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿ ಸಿದರು.
ನಂತರ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಸೈಕಲ್ ಜಾಥಾದಲ್ಲಿ ತೆರಳಿದ ನೌಕರರು ಮತ್ತು ಕುಟುಂಬ ವರ್ಗದವರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ತಮ್ಮ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿ ಸರ್ಕಾರಕ್ಕೆ ಕಳುಹಿಸಿಕೊಡು ವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್. ಚಂದ್ರಶೇಖರ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲೂ 1 ಲಕ್ಷದ 7 ಸಾವಿರ ಜನರು ಕರ್ತವ್ಯ ನಿರ್ವಹಿಸುತ್ತಿದ್ದು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ನೀಡುವ ಸವಲತ್ತುಗಳನ್ನು ನೀಡುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಿತ್ತು.
ಸರ್ಕಾರಿ ನೌಕರರಿಗೆ ಸಮಾನವಾಗಿ ವೇತನ ನೀಡುವಂತೆ ನಾವು ಬೇಡಿಕೆ ಮುಂದಿಟ್ಟಿದ್ದೆವು. ಆದರೆ ಈ ಬೇಡಿಕೆ ಇದುವರೆಗೂ ಈಡೇರಿಲ್ಲ. ಬದಲಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಗದಾಪ್ರಹಾರ ನಡೆಸಿ ಶಿಕ್ಷಿಸಲಾಯಿತು. ಕೆಲವರನ್ನು ಸೇವೆಯಿಂದ ವಜಾ ಮಾಡಲಾಯಿತು ಎಂದು ಹೇಳಿದರು.
ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ನೀಡಬೇಕು. 1992 ರಿಂದೀಚೆಗೆ ಸಾರಿಗೆ ಸಂಸ್ಥೆಗಳಲ್ಲಿ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಿಲ್ಲ. ಈ ಕೂಡಲೇ ಕಾರ್ಮಿಕ ಸಂಘಗಳ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಸಾರಿಗೆ ಸಂಸ್ಥೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವುದು ಹಾಗೂ ಇತರೆ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದನ್ನು ಕೈ ಬಿಡುವ ಮೂಲಕ ಸಾರಿಗೆ ಸಂಸ್ಥೆ ಖಾಸಗೀಕರಣವನ್ನು ಕೈ ಬಿಡಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.
ನಮ್ಮ ಈ ಸೈಕಲ್ ಜಾಥಾವು ತುಮಕೂರಿನಿಂದ ಕೋಲಾರಕ್ಕೆ ತೆರಳುತ್ತಿದ್ದು, ನ. 25 ರಂದು ಕೋಲಾರದಲ್ಲಿ ಸೈಕಲ್ ಜಾಥಾದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸೈಕಲ್ ಜಾಥಾದಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ತುಮಕೂರು ಜಿಲ್ಲಾಧ್ಯಕ್ಷ ಕೆ.ವಿ. ಪುಟ್ಟಯ್ಯ, ವಿಭಾಗೀಯ ಉಸ್ತುವಾರಿ ಜಿ.ಬಿ. ನಾಗೇಶ್, ಪ್ರಧಾನ ಕಾರ್ಯದರ್ಶಿ ಕರಿಯಣ್ಣ, ಉಪಾಧ್ಯಕ್ಷರು ಸೈಯದ್ ಸಾಧಿಕ್, ಮಹಿಳಾ ಅಧ್ಯಕ್ಷೆ ಕಲಾವತಿ, ಮಹಿಳಾ ಉಪಾಧ್ಯಕ್ಷೆ ನೇತ್ರಾವತಿ ಮತ್ತಿತರರು ಪಾಲ್ಗೊಂಡಿದ್ದರು.