Monday, 28th October 2024

ಇಂದಿನಿoದ ಹಳೆಯೂರು ಆಂಜನೇಯ ಸ್ವಾಮಿ ಜಾತ್ರೆ

ಚಿಕ್ಕನಾಯಕನಹಳ್ಳಿ : ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿಯವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆ ನಡೆದಿದೆ. ಜು. ೧೦ ರಿಂದ ೧೨ ರವರೆಗೆ ಜಾತ್ರೆ ನಡೆಯಲಿದೆ. ಬ್ರಹ್ಮ ರಥೋತ್ಸವಕ್ಕೆ ಅಣಿ ಮಾಡಿಕೊಂಡಿದ್ದು ಕಳೆದ ಕೆಲ ದಿನಗಳಿಂದ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದೆ.

ಇಲ್ಲಿನ ವಿವಿಧ ಸಂಘದ ಸದಸ್ಯರು ಆಂಜನೇಯ ದೇವಾಲಯದ ಆವರಣ, ಕಲ್ಯಾಣಿ, ಮಹಾದ್ವಾರ, ಹಾಗು ಮುಂಭಾಗ ಸೇರಿದಂತೆ ರಥವನ್ನು ಶುಚಿಗೊಳಿಸಿ ನೀರು ಹಾಕಿ ತೊಳೆಯುವ ಮೂಲಕ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಪುರಸಭೆ ಸಿಬ್ಬಂದಿ ಪಟ್ಟಣದ ಸ್ವಚ್ಚತೆ, ಕುಡಿಯುವ ನೀರು, ಬೀದಿಗಳ ವಿದ್ಯುತ್ ದೀಪಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಗಮನ ಹರಿಸಿದೆ.

ಬೆಳ್ಳಿ ಪಲ್ಲಕ್ಕಿ ಉತ್ಸವ : ಜಾತ್ರೆ ಸೇರಿದಂತೆ ಬೆಳ್ಳಿ ಪಲ್ಲಕ್ಕಿ ಉತ್ಸವ ನೆಡೆಯುವುದು ಇಲ್ಲಿನ ವಿಶೇಷ. ಪಲ್ಲಕ್ಕಿ ಉತ್ಸವಕ್ಕೆ ಸುಮಾರು ವರ್ಷಗಳ ಇತಿಹಾಸವಿದೆ. ಈಗಿರುವ ಪಲ್ಲಕ್ಕಿಯನ್ನು ಬಹಳ ವರ್ಷಗಳಿಂದ ಬಳಸಲಾಗುತ್ತಿದೆ. ಆಂಜನೇಯ ಸ್ವಾಮಿ ಜಾತ್ರೆಯ ದಿನವಾದ ಶನಿವಾರ (ಜು.೧೦) ಮದ್ಯಾಹ್ನ ೩ಕ್ಕೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪಲ್ಲಕ್ಕಿಗೆ ಸ್ವಾಮಿಯವರನ್ನು ಪ್ರತಿಷ್ಟಾಪಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಕೆಂಚರಾಯನ ಮಣೇವಿ ನೊಂದಿಗೆ ಆರಂಭವಾಗುವ ಪಲ್ಲಕ್ಕಿ ಉತ್ಸವ ಊರಿನ ರಾಜ ಬೀದಿಗಳಲ್ಲಿ ಸಾಗುವುದು.

ಬ್ರಹ್ಮ ರಥೋತ್ಸವ : ಜು. ೧೧ ರ ಭಾನುವಾರ ಆಂಜನೇಯ ಸ್ವಾಮಿಯವರ ಭವ್ಯವಾದ ರಥೋತ್ಸವದ ಮೆರವಣಿಗೆ ನಡೆಯ ಲಿದ್ದು ಇದನ್ನು ಮಡಿ ತೇರು ಎಂಬ ಪ್ರತೀತಿಯೊಂದಿಗೆ ಎಳೆಯಲಾಗುತ್ತದೆ. ರಥವನ್ನು ನೆಹರು ವೃತ್ತದವರೆಗೆ ಎಳೆದು, ಮರುದಿನ ಪುನಃ ದೇವಾಲಯಕ್ಕೆ ಮೈಲಿಗೆ ತೇರು ಎಂಬ ಪ್ರತೀತಿಯೊಂದಿಗೆ ಎಳೆದು ತರಲಾಗುವುದು. ಈ ಸಮಯದಲ್ಲಿ ಸ್ವಾಮಿಯವರ ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆದು ಭಕ್ತಾದಿಗಳು ಘೋಷಣೆ ಕೂಗುತ್ತ ಮುನ್ನಡೆಯುವರು.