Wednesday, 20th November 2024

JCB work: ಇಂಗ್ಲೀಷ್ ನಾಮಫಲಕಗಳ ತೆರವು ಮಾಡಿದ ನಗರಸಭೆ ಸಿಬ್ಬಂದಿ : ವರ್ತಕರ ಅಸಮಾಧಾನ

ಗೌರಿಬಿದನೂರು: ನಗರದ ನಾಗಯ ರೆಡ್ಡಿ ವೃತ್ತದಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದವರೆಗೂ ವಾಣಿಜ್ಯ ಮಳಿಗೆಗಳಿಗೆ ಅಳವಡಿಸಿರುವ ಇಂಗ್ಲಿಷ್ ನಾಮಫಲಕಗಳನ್ನು ನಗರಸಭೆ ಅಧಿಕಾರಿಗಳು ಶುಕ್ರವಾರ ಬೆಳ್ಳಂ ಬೆಳಗ್ಗೆ ಜೆಸಿಬಿ ಸಹಾಯ ದೊಂದಿಗೆ  ತೆರವುಗೊಳಿಸಿದರು.

ಕನ್ನಡ ಶಿಕ್ಷಕರು ಹಾಗೂ ಚಿಂತಕರಾದ ಬಿ.ಎನ್.ಶಿವಕುಮಾರ್ ಮಾತನಾಡಿ ನಮ್ಮಪಕ್ಕದ ರಾಜ್ಯವಾದ ತಮಿಳು ನಾಡು , ಕೇರಳಕ್ಕೆ ಹೋದಲ್ಲಿ ಅವರ ಅಂಗಡಿ ಮಳಿಗೆಗಳಿಗೆ, ಸರ್ಕಾರಿ ಕಛೇರಿಗಳಿಗೆ, ಕೇಂದ್ರೀಕೃತ ಬ್ಯಾಂಕ್‌ಗಳಿಗೂ ಸಹ ತಮ್ಮ ಮಾತೃ ಭಾಷೆಯನ್ನು ಬಿಟ್ಟು ಬೇರೆಯಾವ ಭಾಷೆಯನ್ನು ಸಹ ಉಪಯೋಗಿಸುವುದಿಲ್ಲ. ಅವರಿಗೆ ನಮ್ಮ ಭಾಷೆ ಮಾತನಾಡಲು ಬಂದರು ಸಹ ತಮ್ಮ ಮಾತೃ ಭಾಷಾ ವಾತ್ಸಲ್ಯವನ್ನು ಬಿಟ್ಟು ನಮ್ಮ ಭಾಷೆಯನ್ನು ಮಾತ ನಾಡುವುದಿಲ್ಲ. ಅಂತಹ ಮನಸ್ಥಿತಿ ನಮ್ಮ ಜನರಿಗೆ ಬಂದರೆ ಚೆನ್ನಾಗಿರುತ್ತದೆ ಮತ್ತು ಕನ್ನಡ ನಾಮಪಲಕ ತೆರವು ಗೊಳಿಸುವುದು ಕೇವಲ ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗದಿರಲಿ ಎಂದರು.

ಇದೇ ವೇಳೆ ಅಂಗಡಿ ಮಾಲೀಕರಾದ-ರಾಮಲಿಂಗ ರೆಡ್ಡಿ ಮಾತನಾಡಿ ನಗರಸಭೆ ವತಿಯಿಂದ ಬೋರ್ಡು ತೆರವು ಸರಿಯಲ್ಲ. ನಮಗೆ ಯಾವುದೇ ಸೂಚನೆಯಾಗಲಿ ನೋಟಿಸ್ ಆಗಲಿ ನೀಡಿಲ್ಲ. ಮೇಲಾಗಿ ಬೋರ್ಡಿನಲ್ಲಿ ಎಷ್ಟರ ಮಟ್ಟಿಗೆ ಕನ್ನಡ ಅಕ್ಷರಗಳು ಇರಬೇಕೆಂದು ತಿಳಿಸಿರುವುದಿಲ್ಲ. ಈ ದಿನ ಏಕಾಏಕಿ ನಗರಸಭೆ ಅಧಿಕಾರಿಗಳು ಅಂಗಡಿ ಗಳ ಮೇಲಿರುವ ನಾಮಪಲಕಗಳನ್ನು ತಿರುವುಗೊಳಿಸುತ್ತಿದ್ದಾರೆ.ಇದು ತಪ್ಪು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡರು.

ಆರೋಗ್ಯನಿರೀಕ್ಷಕ-ನವೀನ ಮಾತನಾಡಿ  ತಹಸೀಲ್ದಾರರು,ಆಯುಕ್ತರು,ನಗರಸಭೆ-ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಕಚೇರಿಯ ಸಿಬ್ಬಂದಿ ನಗರಸಭೆ ಅಧಿಕಾರಿಗಳು ಅನೇಕ ಬಾರಿ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಭಾಷೆ ಬಳಸುವಂತೆ ವಾಣಿಜ್ಯ ಮಳಿಗೆಗಳ ಮಾಲಿಕರಿಗೆ ಸೂಚನೆ ನೀಡಲಾಗಿತ್ತು. ಆದರೂ ಕನ್ನಡಕ್ಕೆ ಆದ್ಯತೆ ನೀಡಿರಲಿಲ್ಲ. ಹೀಗಾಗಿ ತೆರವು ಮಾಡಿದ್ದೇವೆ ಎಂದು ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು.

ಮುಂದುವರೆದು ಈ ಬಗ್ಗೆ ತಾಲ್ಲೂಕು ಆಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿ ವರ್ತಕರಿಗೆ ಕಾಲಾವಕಾಶವನ್ನು ನೀಡಲಾಗಿತ್ತು. ಕಳೆದ 10 ದಿನಗಳ ಹಿಂದೆಯಿಂದ ಅಂಗಡಿ ಮಾಲಿಕರಿಗೆ ೨ಬಾರಿ ನೋಟಿಸ್ ಜಾರಿಮಾಡಿ, ೧ ಬಾರಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದ್ದೇವೆ ಆದರೂ ಸಹ ಮಳಿಗೆಗಳ ಮಾಲೀಕರು ಯಾವುದೇ ಬದಲಾವಣೆ ಮಾಡಿರುವುದಿಲ್ಲ ಆದಕಾರಣ ನಾವು ಇಂದು ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಎಂದರು.

ಇದೇ ವೇಳೆ ನಗರಸಭೆಯ ಸಿಬ್ಬಂದಿಗಳು ಮತ್ತು ಅಂಗಡಿ ಮಾಲೀಕರು ಉಪಸ್ಥಿತರಿದ್ದರು.