Sunday, 8th September 2024

ಸುರೇಶ್-ರೇಣುಕಾ ಜೋಡಿ ವೈಚಾರಿಕಾ ವಿವಾಹದಢಿ ಬಂಧನ

ಚಿಕ್ಕಮಗಳೂರು: ಸಂವಿಧಾನದ ಮೌಲ್ಯಗಳನ್ನು ಮನೆಮನೆಗಳಲ್ಲಿ ಅಳವಡಿಸಿಕೊಳ್ಳುವಂತೆ ಸಾಹಿತಿ ,ಸಾಮಾಜಿಕ ಹೋರಾಟಗಾರ್ತಿ ವಾಣಿ ಪೆರೋಡಿ ಕರೆ ನೀಡಿದ್ದಾರೆ.
ಬಾಳೆಹೊನ್ನೂರು ಕಡ್ಲೆಮಕ್ಕಿಯ ನಾರಾಯಣ ಗುರು ಸಮುದಾಯ ಭವನದಲ್ಲಿ ವೈಚಾರಿಕ ವಿವಾಹ ವೇದಿಕೆ ಆಶ್ರಯದಲ್ಲಿ ನಡೆದ ಎಚ್.ಡಿ. ಸುರೇಶ್ ಮತ್ತು ಡಿ. ರೇಣುಕಾ ರವರ ವೈಚಾರಿಕ ವಿವಾಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಸಂವಿಧಾನವನ್ನು ದೇಶಕ್ಕೆ ದೊಡ್ಡ ಕೊಡುಗೆಯಾಗಿ ನೀಡಿದ್ದಾರೆ. ಅದು ನಮ್ಮ ಉಸಿರಾದಾಗ ಸಮಾಜದಲ್ಲಿ ಮೌಲ್ಯಗಳು ಜಾಗ್ರತ ಆಗಲು ಸಾಧ್ಯ ಎಂದು ಹೇಳಿದರು. ಅಂಬೇಡ್ಕರ್ ರವರು ಪ್ರಶ್ನೆಗಳನ್ನು ಕೇಳುತ್ತಾ ಬೆಳೆದು ಓದು ಜ್ಞಾನದಲ್ಲಿ ವಿಕಾಸ ಪಡೆದರು. ಹೀಗಾಗಿ ಅವರು ನಮಗೆ ಮುಖ್ಯವಾಗಿ ಕಾಣುತ್ತಾರೆ ಎಂದರು.
ಮನುಷ್ಯ ಪ್ರೀತಿಸುವುದರ ಜೊತೆಗೆ ಗೌರವಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಅಸಮಾನತೆಯ ನೆಲೆಯಲ್ಲಿ ಕುಟುಂಬಗಳಿವೆ, ಗಂಡು ಚಿಂತನೆಯ ಪ್ರಭಾವ ಕಾಣುತ್ತಿದ್ದೇವೆ ಎಂದು ವಿಷಾದಿಸಿದರು. ಯಜಮಾನಿಕೆ ಸಂಸ್ಕೃತಿಗಿಂತ ಸ್ನೇಹಿತರಂತೆ ಬದುಕುವುದು ಮುಖ್ಯ. ತಗ್ಗಿ ಬಗ್ಗುವುದು ಹೊಂದಾಣಿಕೆ, ವ್ಯವಹಾರ, ಮನೆ ನಿರ್ವಹಣೆ ವಿಷಯಗಳಲ್ಲಿ ಪರಸ್ಪರ ಅರಿತು ನಿರ್ಧಾರ ತೆಗೆದುಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ನವದಂಪತಿಗಳು ಹೊಸ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು. ಮದುವೆ ಎಂದರೆ ಎರಡು ಸ್ನೇಹಿತರ ಕುಟುಂಬಗಳು ಸೇರುವುದು, ಅದೊಂದು ಪ್ರೀತಿ ಬಂಧುತ್ವ ಬೆಸುಗೆಯ ಕ್ಷಣವು ಹೌದು ಎಂದು ಹೇಳಿದರು.
ಎರಡು ಕುಟುಂಬಗಳ ನಡುವಿನ ಪೈಪೋಟಿ ಆಡಂಬರದ ಫಲವಾಗಿ ಮದುವೆ ಎನ್ನುವ ವ್ಯವಸ್ಥೆ ಗೋಳಿನ ಪರಿಪಾಠವಾಗಿ ಮಾರ್ಪಟ್ಟಿದೆ ಎಂದು ವಿಷಾದಿಸಿ ಸಮಾಜಮುಖಿ ಬದುಕುವುದನ್ನು ಕಲಿಯಬೇಕೆಂದರು.
ವೈಚಾರಿಕ ವಿವಾಹ ವಿಧಿ ವಿಧಾನ ನಡೆಸಿಕೊಟ್ಟ ರಂಗ ನಿರ್ದೇಶಕ ಕೊಟ್ರಪ್ಪ ಜಿ ಹಿರೇಮಾಗಡಿ ಸರಳತೆ ಎನ್ನುವುದು ಹೊಸತಲ್ಲ ಹಿಂದಿನಿಂದಲೂ ಇದೆ ಎಂದು ಪ್ರತಿಪಾದಿಸಿ ಪ್ರೀತಿ ಮತ್ತು ಬದುಕು ಹೂವಿನ ಹಾರದಂತೆ ಇರಬೇಕೆಂದರು.
“ತಾಳಿ”ಕಟ್ಟುವ ಪದ್ಧತಿ ಅನೇಕ ಕುಟುಂಬಗಳಲ್ಲಿ ಇರಲಿಲ್ಲ. ಮಧ್ಯವರ್ತಿಗಳ ಪ್ರವೇಶ,ಲಾಭ ನಷ್ಟದ ವ್ಯವಹಾರ ಆರಂಭವಾದಾಗ ಹಿಂದಿನ ಆಲೋಚನೆ ಕ್ರಮಗಳು ಮರೆಯಾಗಿ ತಾಳಿ ಪದ್ಧತಿ ಆರಂಭವಾಯಿತು ಎಂದರು.
ಅನುಕರಣೆ ಆಡಂಬರದ ಮದುವೆಗಳು ಸಂಕಷ್ಟಕ್ಕೆ ಈಡು ಮಾಡುತ್ತವೆ. ಗಟ್ಟಿ ನಿರ್ಧಾರ ತೆಗೆದುಕೊಂಡಾಗ ಬದುಕು ಸಾರ್ಥಕ ಎನಿಸುತ್ತದೆ ಎಂದು ಹೇಳಿದರು. ವೈಚಾರಿಕ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಸಂವಿಧಾನ ಪುಸ್ತಕಗಳನ್ನು ವಧು ವರರಿಗೆ ನೀಡಲಾಯಿತು. ಮಾವಿನ ಸಸಿಗೆ ನೀರೆರದು ಕಾರ್ಯಕ್ರಮ ಉದ್ಘಾಟಿಸಲಾಯಿತು.
ಹರೀಶ್ ನಿರೂಪಿಸಿ, ಹೆಡದಾಳ ಕುಮಾ‌ರ್ ಸ್ವಾಗತಿಸಿದರು. ಕೂದುವಳ್ಳಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸುಮಲತಾ ವಂದಿಸಿದರು. ಇಂದಾವರ ನಾಗೇಶ್ ಕಾರ್ಯಕ್ರಮ ಸಂಯೋಜಿಸಿದರು. ಅಂಗಡಿ ಚಂದ್ರು ಹಾಡುವ ಮೂಲಕ ಸಭಿಕರನ್ನು ರಂಜಿಸಿದರು. ವಧು ವರರ ಹಿರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!