ನೆಲಮಂಗಲ: ಪತ್ರಕರ್ತರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಧಮ್ಕಿ ಹಾಕಿರುವ ನೆಲಮಂಗಲ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಗಡಿಪಾರಿಗೆ ಆಗ್ರಹಿಸಿ ತಾಲೂಕು ಕಚೇರಿ ಮುಂದೆ ಸ್ವಾಭಿಮಾನಿ ಪತ್ರಕರ್ತರು ಪ್ರೆಸ್ ಕ್ಲಬ್ ಕೌನ್ಸಿಲ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ (Journalists protest) ನಡೆಸಿದರು. ಈ ಪ್ರತಿಭಟನೆಯಲ್ಲಿ ಬಿಗ್ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಭಾಗಿಯಾಗಿ ಬೆಂಬಲ ಸೂಚಿಸಿ, ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ (Jagadish Choudhary) ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
ತಾಲೂಕಿನ 50 ಕ್ಕೂ ಹೆಚ್ಚು ಸ್ವಾಭಿಮಾನಿ ಪತ್ರಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಮಟೆ ಬಾರಿಸಿ ಜಗದೀಶ್ ಚೌಧರಿ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಪತ್ರಕರ್ತರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿ, ತನ್ನ ಹಿಂಬಾಲಕರಿಂದ ಧಮ್ಕಿ ಹಾಕಿಸಿರುವ ಚೌಧರಿಯನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಲಾಯರ್ ಜಗದೀಶ್ ಅವರು, ಈ ಹಿಂದೆ ಒಬ್ಬ ಭ್ರಷ್ಟ ಐಪಿಎಸ್ ಅಧಿಕಾರಿ ಬಗ್ಗೆ ಮಾತನಾಡಿದಾಗ ರೌಡಿಶೀಟರ್ ಜಗದೀಶ್ ಚೌಧರಿ ನನಗೂ ಧಮ್ಕಿ ಹಾಕಿದ್ದ. ಈ ರೀತಿ ನನ್ನನ್ನು ಮುಗಿಸಲು ಎಷ್ಟೋ ಜನ ಧಮ್ಕಿ ಹಾಕಿದ್ದಾರೆ. ಈತ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾನೆ. ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಮದ್ಯ ವಿತರಣೆ ಮಾಡಿ ಈತ ಟ್ರೋಲ್ ಆಗಿದ್ದ. ಹೀಗಾಗಿ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಪತ್ರಕರ್ತರಿಗೆ ಧಮ್ಕಿ ಹಾಕಿರುವ ಚೌಧರಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೌಡಿ ಶೀಟರ್ ಜಗದೀಶ್ ಚೌದ್ರಿ ಹೆದರಿಕೆ ಬೆದರಿಕೆಗೆ ಪತ್ರಕರ್ತರು ಹೆದರಬಾರದು. ರೌಡಿ ಶೀಟರ್ನನ್ನು ಪೊಲೀಸರು ಮೊದಲು ಮಟ್ಟಹಾಕಿ ಪತ್ರಕರ್ತರನ್ನು ರಕ್ಷಣೆ ಮಾಡಬೇಕು. ನಾನು ಕೂಡ ನಿಮ್ಮ ಜತೆ ಇದ್ದೇನೆ, ಪೊಲೀಸರು ಕೂಡಲೇ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದು ವಕೀಲ್ ಸಾಬ್ ಜಗದೀಶ್ ಹೇಳಿದರು.
ಈ ಸುದ್ದಿಯನ್ನೂ ಓದಿ | Drone Pratap: ಡ್ರೋನ್ ಪ್ರತಾಪ್ ಸ್ಫೋಟ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡಲು ಸಿಎಂ ಕಚೇರಿ ಸೂಚನೆ
ನೆಲಮಂಗಲ ತಾಲೂಕು ಪತ್ರಕರ್ತರಿಗೆ ಜಗದೀಶ್ ಚೌದ್ರಿ ಕೆಲ ವರ್ಷಗಳ ಹಿಂದೆ ಜಾಹಿರಾತು ನೀಡಿದ್ದು, ಅದರಲ್ಲಿ ಸ್ವಲ್ಪ ಹಣವನ್ನು ಫೋನ್ ಪೇ ಮೂಲಕ ನೀಡಿ ಇನ್ನುಳಿದ ಹಣವನ್ನು ನೀಡದೆ ಸತಾಯಿಸಿದ್ದಾರೆ. ಪತ್ರಕರ್ತರು ಹಣ ಕೇಳಿದ್ದಕ್ಕೆ ಬೆದರಿಕೆ ಹಾಕಿ ಪತ್ರಕರ್ತರು ಬ್ಲಾಕ್ ಮೇಲರ್ಗಳು ಎಂಬಂತೆ ಬಿಂಬಿಸಿದ್ದಾರೆ ಎಂಬ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
3 ದಿನದ ಹಿಂದೆ ಜಗದೀಶ್ ಚೌದ್ರಿ ವಿರುದ್ಧ ಟಿ.ಬೇಗೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಭ್ರಷ್ಟ ಅಧಿಕಾರಿಗಳಿಗೆ ಜಗದೀಶ್ ಚೌದ್ರಿ ಬೆಂಬಲ ನೀಡಬಾರದು ಎಂದು ತಿಳಿಸಿದ್ದು, ಈ ಬಗ್ಗೆ ಸುದ್ದಿ ಮಾಡಿದ ಪತ್ರಕರ್ತರುಗಳಿಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಸುದ್ದಿ ಮಾಡಿದ ಪತ್ರಕರ್ತರನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದು, ಪತ್ರಕರ್ತರು ರೋಲ್ ಕಾಲ್ ಎಂದು ಜಗದೀಶ್ ಚೌದ್ರಿ ಸಾರ್ವಜನಿಕವಾಗಿ ಪತ್ರಕರ್ತರನ್ನು ನಿಂದಿಸಿದ್ದಾರೆ.
ಇದನ್ನು ಪ್ರಶ್ನೆ ಮಾಡಿದ ಪತ್ರಕರ್ತರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಹಚರರ ಮೂಲಕ ತೇಜೋವಧೆ ಮಾಡಲು ಮುಂದಾಗಿ ಪತ್ರಕರ್ತರ ಕುಟುಂಬದ ಸಣ್ಣ ಮಗು ಸಹಿತ ಕುಟುಂಬ ಸದಸ್ಯರ ಭಾವಚಿತ್ರಗಳನ್ನು ಹರಿಬಿಟ್ಟು ಹೆದರಿಕೆ ಹಾಕಿದ್ದಾರೆ. ಈ ಬಗ್ಗೆ ಆಕ್ರೋಶಗೊಂಡ ಪತ್ರಕರ್ತರು ರೌಡಿ ಶೀಟರ್ ಜಗದೀಶ್ ಚೌದ್ರಿ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಡಿವೈಎಸ್ಪಿ ಜಗದೀಶ್ ಹಾಗೂ ತಹಸೀಲ್ದಾರ್ ಅಮೃತ್ ಅತ್ರೆಶ್ ರವರಿಗೆ ಪತ್ರಕರ್ತರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ರಾಘವೇಂದ್ರ ಆಚಾರ್, ಪ್ರಧಾನ ಕಾರ್ಯದರ್ಶಿ ಆಶಾ ಸೀನಪ್ಪ, ರಾಜ್ಯ ಕಾರ್ಯದರ್ಶಿ ಕೊಟ್ರೇಶ್, ಜಿಲ್ಲಾಧ್ಯಕ್ಷ ಮಂಜುನಾಥ್, ತುಮಕೂರು ಜಿಲ್ಲಾ ಗೌರವ ಅಧ್ಯಕ್ಷ ಸುದೀದ್ರ, ಬೆಂಗಳೂರು ನಗರ ಅಧ್ಯಕ್ಷ ಬಾನು ಪ್ರಕಾಶ್, ನೆಲಮಂಗಲ ತಾಲೂಕು ಅಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ವಿಜಯ್ ಹೊಸಪಾಳ್ಯ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬೂದಿಹಾಳ್ ಕಿಟ್ಟಿ, ಉಪಾಧ್ಯಕ್ಷ ರುದ್ರೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಹರೀಶ್, ಮಿಲ್ಟ್ರಿ ಮಾಮ, ರಾಜಶೇಖರ್, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಸಂಘಟನಾ ಕಾರ್ಯದರ್ಶಿ ವೇಣು, ಪತ್ರಕರ್ತರಾದ ಗುರು ಪ್ರಸಾದ್, ದಾಬಸ್ಪೇಟೆ ರಾಜೇಶ್, ಪ್ರದೀಪ್, ಶ್ರೀಧರ್, ಮಾರುತಿ, ರಾಮ್ ಪ್ರಸಾದ್, ರಾಮಚಂದ್ರ ಬಾಬು, ಹೊಸದಿಗಂತ ಬಾಬು,ಕಿಶೋರ್, ಅಲೀಮ್, ನಾಗೇಶ್, ಅಬ್ದುಲ್ ಆಫೀಜ್, ಲಕ್ಷ್ಮಣ್, ಸಿದ್ದರಾಜು, ಪವನ್ ಕುಮಾರ್, ವಂದನಾ, ವರ್ಷ,ಕವಿತಾ, ಉಮೇಶ್ ಪೂಜಾರ್, ಅರುಣ್ ಕುಮಾರ್, ಮೋಹನ್, ಬೆಂಗಳೂರು ಪ್ರಶಾಂತ್, ಸಂಚಾರಿ ಸತ್ಯ ಸಂಪಾದಕ ಶಂಕರ್, ಟೈಮ್ 9 ಜಯರಾಮ್, ಮತ್ತಿತರ ಸ್ವಾಭಿಮಾನಿ ಪತ್ರಕರ್ತರು ಉಪಸ್ಥಿತರಿದ್ದರು.