Thursday, 12th December 2024

B C Nagesh: ಸಮಾಜಕ್ಕೆ ಉತ್ತಮ ಮಾಹಿತಿ ನೀಡುವ ಕೆಲಸ ಪತ್ರಕರ್ತರದ್ದಾಗಿದೆ- ಬಿ.ಸಿ.ನಾಗೇಶ್

tiptur

ತಿಪಟೂರು: ನಮ್ಮ ಸಮಾಜದಲ್ಲಿ ಅನೇಕ ಅಂಕುಡೊಂಕುಗಳನ್ನು ತಿದ್ದುವ ಹಾಗು ಸಮಾಜಕ್ಕೆ ಉತ್ತಮ ಮಾಹಿತಿಯನ್ನು ನೀಡುವ ಕೆಲಸ ಪತ್ರಕರ್ತರದ್ದಾಗಿದೆ ಎಂದು ಮಾಜಿ ಶಾಸಕ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಿ, ತಾಲ್ಲೂಕು ಘಟಕದವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ ಯೋಗ ಪ್ರದರ್ಶನ ಮತ್ತು ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಪತ್ರಕರ್ತ ಸಂಘದ ಸಂಸ್ಥಾಪಕರಾದ ಡಿ.ವಿ.ಜಿ.ಯವರ ಭಾವಚಿತ್ರಕ್ಕೆ ಪುಪ್ಷಾರ್ಚನೆ ಮಾಡಿ ಮಾತನಾಡಿದ ಅವರು, ಸಮಾಜದ ಪ್ರತಿಯೊಂದು ಮಾಹಿತಿಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪತ್ರಿಕೆ ಪಾತ್ರ ಅತೀ ಮುಖ್ಯ. ಸಮಾಜದ ಯಾವುದೇ ಲೋಪಗಳನ್ನ ನೇರವಾಗಿ ಸೂಚಿಸಿ ಸರಿಯಾದ ಮಾರ್ಗದಲ್ಲಿ ನಡೆಸಿ ಪ್ರಾಪಂಚಿಕ ಜ್ಞಾನವನ್ನು ಹೆಚ್ಚಿಸುತ್ತದೆ. ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿಯೂ ಸಹಾ ಪತ್ರಿಕೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೇ ಮಾದರಿಯಾಗಿ ಮುನ್ನಡೆಯುತ್ತಿದೆ. ನಮ್ಮ ದೈನಂದಿಕ ಜೀವನದಲ್ಲಿ ಪ್ರತಿನಿತ್ಯ ಬೆಳಗ್ಗೆ ಯೋಗ ಹಾಗೂ ಕ್ರೀಡಾಚಟುವಟಿಕೆಗಳನ್ನ ಮೈಗೂಡಿಸಿಕೊಂಡು, ಸಾವಯವ ಪದಾರ್ಥಗಳನ್ನು ಉಪಯೋಗಿಸು ವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಪತ್ರಕರ್ತರ ಸಂಘದವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

ನಗರಸಭೆ ಅಧ್ಯಕ್ಷೆ ಯಮುನಾ ಧರಣೀಶ್ ಮಾತನಾಡಿ, ನಮ್ಮ ದೇಶದಲ್ಲಿ ಸಾಮಾಜಿಕ ಜಾಲತಾಣಗಳು ಎಷ್ಟೇ ಬೇಗ ಮುಂದುವರೆದು ಸಮಾಜಕ್ಕೆ ಮಾಹಿತಿಯನ್ನು ನೀಡಿದರೂ ಸಹಾ ಪತ್ರಿಕೆಗಳು ತನ್ನದೇ ಆದ ಛಾಪನ್ನು ಮೂಡಿಸಿದೆ. ಪತ್ರಕರ್ತರು ಸಾಮಾಜಿಕ ಪ್ರಜ್ಞಾವಂತರಾಗಿ ಕಾನೂನು ಬದ್ದವಾಗಿ ಸುದ್ದಿಗಳನ್ನ ಜನರಿಗೆ ತಲುಪಿಸುತ್ತಿದ್ದಾರೆ. ಯೋಗ ಹಾಗೂ ಕ್ರೀಡೆಗಳು ದೈಹಿಕ ಹಾಗು ಮಾನಸಿಕವಾಗಿ ಶಕ್ತಿಯನ್ನು ನೀಡುವುದರಿಂದ ಎಲ್ಲರೂ ಸಹಾ ಮೈಗೂಡಿಸಿಕೊಳ್ಳಬೇಕು ಎಂದರು. ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ನಾಣ್ಯ ಚಿಮ್ಮುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.

ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಅಬಕಾರಿ ಪೋಲೀಸ್ ತಂಡ, ಕಂದಾಯ ಇಲಾಖೆ, ಬೆಸ್ಕಾಂ ಇಲಾಖೆ, ನಗರಸಭೆ ನೌಕರರ ತಂಡ, ಪೋಲೀಸ್ ಇಲಾಖೆ ತಂಡ, ಪತ್ರಕರ್ತರ ತಂಡ, ಶಿಕ್ಷಣ ಇಲಾಖೆ ತಂಡಗಳು ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪವನ್‌ಕುಮಾರ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಬೆಸ್ಕಾಂ ಇಲಾಖೆಯ ಮನೋಹರ್, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ಅಬಕಾರಿ ಡಿವೈಎಸ್ಪಿ ರಘು, ಸಬ್‌ರಿಜಿಸ್ಟಾರ್ ರಾಜಶೇಖರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಪತ್ರಕರ್ತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಆರ್.ಪ್ರಶಾಂತ್ ಕರೀಕೆರೆ, ಖಜಾಂಚಿ ಎ.ಆರ್.ಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ಕುಮಾರ್, ಜಿಲ್ಲಾ ನಿರ್ದೇಶಕ ಮಂಜುನಾಥ್ ಹಾಲ್ಕುರಿಕೆ, ಹಿರಿಯ ಪತ್ರಕರ್ತರಾದ ಉಜ್ಜಜ್ಜಿ ರಾಜಣ್ಣ, ಭಾನುಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.