ತುಮಕೂರು: ಇಂದು ಕುಷ್ಕಿ ಬೇಸಾಯ ಲಾಭದಾಯಕವಾಗಿ ಉಳಿದಿಲ್ಲ. ರೈತರು ಬೇಸಾಯದ ಜೊತೆಗೆ ಉಪಕಸುಬುಗಳನ್ನು ಅಳವಡಿಸಿಕೊಂಡರೆ ಅದಕ್ಕೆ ಬೇಕಾದ ಸಾಲಸೌಲಭ್ಯಗಳನ್ನು ನೀಡುತ್ತೇವೆ. ವಿಶೇಷವಾಗಿ ಹೈನುಗಾರಿಕೆ ಅನುಸರಿಸಲು ತಿಳಿಸಿ, ಹಾಲು ಉತ್ಪಾದನೆಗೆ ಹಸು ಕೊಳ್ಳಲು ಸಾಲ ನೀಡುತ್ತೇವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ನಡೆದ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 70ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಚಿವರು, ಹಸುಗಳ ಸಾಲ ಪಡೆಯಲು ಪಹಣ ನೀಡಿದರೆ ಬಡ್ಡಿರಹಿತ ಕೆಸಿಸಿ ಸಾಲ ನೀಡುತ್ತೇವೆ. ಅನೇಕ ಕಡೆ ಇಂತಹ ಸಾಲದ ಪ್ರಯೋಜನವನ್ನು ರೈತರು ಪಡೆದಿದ್ದಾರೆ, ಉಳಿದೆಡೆಯೂ ಸಾಲ ಸೌಕರ್ಯ ನೀಡುತ್ತೇವೆ. ಇದು ಬೇಡವೆನಿಸಿದರೆ ಪರ್ಯಾಯವಾಗಿ ಹಾಲು ಉತ್ಪಾದಕರ ಸಹಕಾರ ಸಂಘ, ವಿಎಸ್‌ಎಸ್‌ಎನ್ ಹಾಗೂ ಸಾಲ ಪಡೆಯುವ ರೈತ ಒಳಗೊಂಡ ತ್ರಿಪಾರ್ಟಿ ವ್ಯವಸ್ಥೆಯಡಿ ಹಸುಗಳ ಖರೀದಿಗೆ ಸಾಲ ನೀಡುತ್ತೇವೆ ಎಂದರು.
ಇದನ್ನೂ ಓದಿ: KN Rajanna: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಚಿವ ಕೆ.ಎನ್.ರಾಜಣ್ಣ
ಇAದು ಹಳ್ಳಿಗಳಲ್ಲಿ ಎಷ್ಟೋ ಕುಟುಂಬಗಳು ಜೀವನ ನಿರ್ವಹಣೆಗಾಗಿ ಹೈನುಗಾರಿಕೆಯನ್ನು ಅವಲಂಬಿಸಿವೆ. ಈಗಿನ ಮಳೆ ಪರಿಸ್ಥಿತಿ ಹಾಗೂ ಇತರೆ ಕಾರಣಗಳಿಂದ ವ್ಯವಸಾಯ ಲಾಭದಾಯಕವಾಗಿಲ್ಲ. ಈ ಕಾರಣದಿಂದ ವ್ಯವಸಾಯದ ಜತೆಗೆ ಹೈನುಗಾರಿಕೆ ಸೇರಿದಂತೆ ಉಪಕಸುಬುಗಳನ್ನು ಅಳವಡಿಸಿಕೊಳ್ಳಿ,ಬಡ್ಡಿ ಹೊರೆಯಾಗದಂತೆ ರೈತರಿಗೆ ಅನುಕೂಲ ವಾಗುವ ರೀತಿ ಹಸು ಖರೀದಿಸಲು ಸಾಲ ನಿಡುತ್ತೇವೆ ಎಂದು ಹೇಳಿದರು.
ಕೆಲವು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲಿನ ಗುಣಮಟ್ಟ ಅಳತೆಯಲ್ಲಿ ವ್ಯತ್ಯಾಸಗಳಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ಅಂತಹ ಸಂಘಗಳಲ್ಲಿ ಹಾಲಿನ ಗುಣಮಟ್ಟವನ್ನು ನಿಖರವಾಗಿ ಸೂಚಿಸುವ ಆಧುನಿಕ ಅಳತೆ ಮಾಪನಗಳನ್ನು ಅಳವಡಿಸಲಾಗುತ್ತಿದೆ. ಅಂತಹ ಸಾಫ್ಟ್ವೇರ್, ಅನಲೈಸರ್ ಇಲ್ಲದ ಸಂಘಗಳಲ್ಲಿ ರೈತರು ಒತ್ತಾಯ ಮಾಡಿ ಹಾಕಿಸಿಕೊಳ್ಳಿ. ಕೆಲವು ರೈತರು ಹಾಲಿಗೆ ನೀರು, ಉಪ್ಪು, ಯೂರಿಯ ಬೆರೆಸಿ ನೀಡುತ್ತಿರುವ ದೂರುಗಳಿವೆ. ಇದರಿಂದ ಹಾಲು ಕಲಬೆರಕೆಯಾಗುತ್ತಿದೆ. ಇಂತಹ ಹಾಲು ಕುಡಿಯುವ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಾರೆ. ಅಂತಹ ಹಾಲು ವಿಷ ಕೊಟ್ಟಂತಾಗುತ್ತದೆ. ಇಂತಹ ಪಾಪದ ಕೆಲಸ ಮಾಡಬಾರದು ಎಂದರು.
ಡಿಸಿಸಿ ಬ್ಯಾಂಕ್‌ನ ನೂತನ ಕಟ್ಟಡ
ನಗರದ ಹೊರಪೇಟೆಯ ಡಿಸಿಸಿ ಬ್ಯಾಂಕಿನ ನಿವೇಶನದಲ್ಲಿ ಬ್ಯಾಂಕಿನ ಕೇಂದ್ರ ಕಚೇರಿಯ ನೂತನ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿಲಾಗಿದೆ. ಕಟ್ಟಡದ ಪ್ಲಾನ್, ಎಸ್ಟಿಮೇಟ್ ಸಿದ್ಧಪಡಿಸಿಲು ಇಂಜಿನಿಯರ್‌ಗಳಿಗೆ ತಿಳಿಸಲಾಗಿದೆ. ಅವರು ನೀಡುವ ಪ್ಲಾನ್ ಅನ್ನು ಆಡಳಿತ ಮಂಡಳಿಯ ಅನುಮೋದನೆ ಪಡೆದು ಕಟ್ಟಡ ಕಟ್ಟಲು ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಒಂದು ಸಹಕಾರಿ ಸಂಸ್ಥೆ ಸ್ಥಾಪನೆ ಮಾಡಬೇಕು ಎಂಬುದು ಸರ್ಕಾರದ ನೀತಿಯಾಗಿದೆ. ಜಿಲ್ಲೆಯಲ್ಲಿ ಇನ್ನೂ 80-90 ಸಹಕಾರಿ ಸಂಸ್ಥೆಗಳ ಸ್ಥಾಪನೆಗೆ ಅವಕಾಶವಿದೆ. ಸಹಕಾರಿ ಸಂಸ್ಥೆಯ ಶ್ರೇಯಸ್ಸಿಗೆ ಶ್ರಮಿಸುವ ಸ್ಥಳೀಯ ಸಹಕಾರಿಗಳು ಮುಂದೆ ಬಂದರೆ ಸಂಸ್ಥೆ ಆರಂಭಿಸಲು ಸಿದ್ಧರಿದ್ದೇವೆ. ಜಿಲ್ಲೆಯ ಡಿಸಿಸಿ ಬ್ಯಾಂಕಿನ ಎಲ್ಲಾ 43 ಶಾಖೆಗಳಲ್ಲಿ ಗ್ರಾಹಕರಿಗೆ ಹಣದ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತವಾಗಿ ಬ್ಯಾಂಕ್‌ಗಳಲ್ಲಿ ಹಣ ಇಡುವ ವ್ಯವಸ್ಥೆ ಮಾಡಿದ್ದೇವೆ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಶಾಸಕರೂ ಆದ ನಿರ್ದೇಶಕ ಕೆ.ಷಡಕ್ಷರಿ, ನಿರ್ದೇಕರೂ ಆದ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ನಿರ್ದೇಶಕರಾದ ಬಿ.ಶಿವಣ್ಣ, ತಾಳೆಮರದಹಳ್ಳಿ ನರಸಿಂಹಯ್ಯ, ಎಸ್.ಲಕ್ಷ್ಮೀನಾರಾಯಣ, ಜಿ.ಎಸ್.ರವಿ, ಎಸ್.ಹನುಮಾನ್, ಎಸ್.ಆರ್.ರಾಜಕುಮಾರ್, ಎಂ.ಸಿದ್ಧಲಿಂಗಪ್ಪ, ಎಂ.ವಿ.ರಾಮಚಂದ್ರ, ಹೆಚ್.ಸಿ.ಪ್ರಭಾಕರ್, ಬಿ.ನಾಗೇಶ್‌ಬಾಬು, ಜಿ.ಎನ್.ಮೂರ್ತಿ, ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಮೂರ್ತಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಂಗಮಪ್ಪ, ನಬಾರ್ಡ್ ಅಧಿಕಾರಿ ಕೀರ್ತಿ ಪ್ರಭಾ, ಮಹಾಪ್ರಬಂಧಕರಾದ ಪಿ.ಎಸ್.ರಾಮಕೃಷ್ಣನಾಯಕ, ಎಸ್.ಶ್ರೀಧರ್ ಮೊದಲಾದವರು ಭಾಗವಹಿಸಿದ್ದರು.
ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಹಕಾರಿ ಸಂಸ್ಥೆಗಳಿಗೆ ಸಚಿವ ಕೆ.ಎನ್.ರಾಜಣ್ಣ ಈ ವೇಳೆ ಬಹುಮಾನ ವಿತರಿಸಿದರು.