ಹೈಕೋರ್ಟ್ ವಿಭಾಗೀಯ ಪೀಠ ಬಿಜೆಪಿ ಸರಕಾರದ ವಿಭಜನೆಯನ್ನೇ ಎತ್ತಿಹಿಡಿದಿದೆ
ಚಿಕ್ಕಬಳ್ಳಾಪುರ : ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವಿಭಜನೆ ವಿಚಾರದಲ್ಲಿ ಗುರುವಾರ ಕರ್ನಾಟಕ ಹೈಕೋರ್ಟಿನ ವಿಭಾಗೀಯ ಪೀಠ ನೀಡಿರುವ ತೀರ್ಪು ಬಸವರಾಜು ಬೊಮ್ಮಾಯಿ ಸರಕಾರದಲ್ಲಿ ಆಗಿದ್ದ ಆದೇಶ ವನ್ನು ಎತ್ತಿಹಿಡಿದಿದೆಯೇ ವಿನಃ ಚಿಕ್ಕಬಳ್ಳಾಪುರ ನಿರ್ದೇಶಕ ಭರಣಿ ವೆಂಕಟೇಶ್ ಹೇಳಿದ ಆರ್ಟಿಕಲ್ ೧೪ರಂತೆ ಮಾಡಿದ್ದಾರೆ ಎಂಬುದು ಸುಳ್ಳು ಎಂದು ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್ ತಿಳಿಸಿದರು.
ನಗರದ ಕಣಜೇನಹಳ್ಳಿಯ ತಮ್ಮ ಸ್ವಗೃಹದಲ್ಲಿ ಶುಕ್ರವಾರ ಹೈಕೋರ್ಟಿ ಮಹಾ ತೀರ್ಪಿನ ಸಂಬ0ಧ ಮಾಧ್ಯಮದ ವರೊಂದಿಗೆ ಮಾತನಾಡಿದರು.
ವಿಭಜನೆ ವಿಚಾರದಲ್ಲಿ ಹೈಕೋರ್ಟ್ ಹಿಂದಿನ ಬಿಜೆಪಿ ಸರಕಾರ ತೆಗೆದುಕೊಂಡ ತೀರ್ಮಾನ ಸರಿಯಾಗಿದೆ.ಇದರಂತೆ ಕೋಲಾರ ಒಕ್ಕೂಟದಿಂದ ಚಿಕ್ಕಬಳ್ಳಾಪುರ ಒಕ್ಕೂಟ ಪ್ರತ್ಯೇಕ ಆಗಬಹುದು ಎಂದು ಹೇಳಿದ್ದಾರೆ ವಿನಃ ಭರಣಿ ವೆಂಕಟೇಶ್ ಹೇಳಿದಂತೆ ಬಾಗೇಪಲ್ಲಿಯ ಸರ್ವಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಕೋರ್ಟಿಗೆ ಸಲ್ಲಿಸಿದ ಕಾರಣಕ್ಕೆ ಆಗಿದೆ ಎಂಬುದು ಸುಳ್ಳು.ಬಾಗೇಪಲ್ಲಿಯಲ್ಲಿ ನಡೆದ ಸರ್ವಸದಸ್ಯರ ಸಭೆಯ ನಿರ್ಣಯವನ್ನು ಕೋರ್ಟಿಗೆ ಕೊಟ್ಟಿರುವುದು ನಿಜ.ಆದರೆ ನಮ್ಮ ವಕೀಲರು ಹೇಳಿದಂತೆ ನ್ಯಾಯಮೂರ್ತಿಗಳು ಇದನ್ನು ಪರಿಗಣಿಸಿ ಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಾಗೇಪಲ್ಲಿ ಸಭೆಯಲ್ಲಿ ವಿಭಜನೆ ಆಗಲು ಕೋಚಿಮುಲ್ ತೆಗೆದುಕೊಂಡ ತೀರ್ಮಾನವನ್ನು ನಾನು ಒಬ್ಬನೇ ವಿರೋಧ ಮಾಡಿದ್ದೇನೆ ಎಂದು ಗುರುವಾರ ಹೇಳಿರುವ ಹಾಲಿ ನಿರ್ದೇಶಕ ಭರಣಿ ವೆಂಕಟೇಶ್ ೫ ವರ್ಷದ ತಮ್ಮ ಅವಧಿಯಲ್ಲಿ ಹೈನೋಧ್ಯಮವನ್ನು ಬಹಳಷ್ಟು ಅಭಿವೃದ್ದಿ ಮಾಡಿದ್ದಾರೆ. ನನ್ನ ಅವಧಿಯಲ್ಲಿ ೧.೫ಲಕ್ಷ ಲೀಟರ್ ಹಾಲು ಪ್ರತಿದಿನ ಉತ್ಪಾಧನೆ ಆಗುತ್ತಿತ್ತು.ಇವರ ಅವಧಿಯಲ್ಲಿ ೬೦ಸಾವಿರಕ್ಕೆ ಕುಸಿದಿದೆ.ನನ್ನ ಅವಧಿಯಲ್ಲಿ ಗುಣಮಟ್ಟದಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗ ಬಹುಶಃ ಒಂಬತ್ತನೇ ಸ್ಥಾನದಲ್ಲಿದೆ. ನನ್ನ ಅವಧಿಯಲ್ಲಿ ಅಭಿವೃದ್ಧಿ ಹೇಗಿತ್ತು ಈಗ ಏನಾಗಿದೆ ಎಂಬುದನ್ನು ಅವರು ಬಹುಶಃ ನಿದ್ದೆಮಾಡುವಾಗಲಾದರೂ ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ನಾನು ವಿಭಜನೆಗೆ ವಿರೋಧ ಮಾಡಿಲ್ಲ, ಬದಲಿಗೆ ಬೊಮ್ಮಾಯಿ ಸರಕಾರದಲ್ಲಿ ಆಗಿದ್ದ ವಿಭಜನೆಯನ್ನು ನಿಮ್ಮ ಆಡಳಿತ ರದ್ಧು ಮಾಡಿದ್ದನ್ನು ಹೈಕೋರ್ಟಿನಲ್ಲಿ ಚಾಲೆಂಜ್ ಮಾಡಿದ್ದೇವೆ.ರಿಟ್ ಪಿಟೀಷನ್ ತೀರ್ಮಾನ ಆಗುವವರೆಗೆ ನೀವು ಯಾವುದೇ ತೀರ್ಮಾನ ತೆಗದುಕೊಳ್ಳಬಾರದು ಎಂದು ವಿರೋಧ ವ್ಯಕ್ತಮಾಡಿದ್ದೆ ವಿನಃ ವಿಭಜನೆ ಬೇಡವೆಂದು ಹೇಳಿಯೇ ಇಲ್ಲ. ಭರಣಿ ವೆಂಕಟೇಶ್ ಹೇಳುತ್ತಿರುವುದು ಶುದ್ಧ ಸುಳ್ಳು ಎಂದು ಕಿಡಿಕಾರಿದರು.
೨೦೧೭-೧೮ರಲ್ಲಿಯೇ ಸರ್ವಸದಸ್ಯರ ಸಭೆಯಲ್ಲಿ ಕೋಚಿಮುಲ್ ವಿಭಜನೆ ಆಗಬೇಕೆಂದು ಹೋರಾಟ ಮಾಡಿಕೊಂಡು ಬಂದಿದ್ದೇನೆ.ಇದಕ್ಕೆ ತಡೆ ತಂದವರು ನೀವು.ಅಡ್ಡಹಾಕಿದವರು ನೀವು.ಕೋರ್ಟ್ ತೀರ್ಪು ಬಂದಾಗಲೂ ತೆರೆ ಹಿಂದೆ ಇದನ್ನು ಮುಂದೆ ಹಾಕಲು ಪ್ರಯತ್ನಿಸಿರುವುದು ನೀವು. ಈಗಲಾದರೂ ನ್ಯಾಯಾಲಯ ಮಾಡಿರುವ ತೀರ್ಪನ್ನು ಒಪ್ಪಿಕೊಂಡು ವಿಭಜನೆ ನಂತರ ಏನೇನು ಮಾಡಬೇಕೋ ಅದನ್ನು ತುರ್ತಾಗಿ ಮಾಡಲು ಮುಂದಾಗಿ ಎಂದು ತಾಕೀತು ಮಾಡಿದರು.
ನಮ್ಮನಾಯಕ ಡಾ.ಕೆ.ಸುಧಾಕರ್ ಕೋಚಿಮುಲ್ ವಿಭಜನೆ ಮಾಡಿದಾಗ ಇಲ್ಲಿ ಪ್ಯಾಕಿಂಗ್ ಯೂನಿಟ್, ಇಲ್ಲ, ಮೂಲಭೂತ ಸೌಕರ್ಯ ಇಲ್ಲ, ಈ ವಿಭಜನೆ ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದಿರಿ? ಇವತ್ತು ಏನಪ್ಪ ನೀವು ವೈಜ್ಞಾನಿಕವಾಗಿ ಮಾಡಿದ್ದೀರಿ?ಏನೂ ಮಾಡಿಯೇ ಇಲ್ಲವಲ್ಲ. ಏನೂ ಇಲ್ಲದೆ ವಿಭಜನೆಗೆ ಈಗ ಒಪ್ಪಿಕೊಂಡಿದ್ದೀ ರಲ್ಲ,ಅಲ್ಲ ನಿಮ್ಮದೇ ಸರಕಾರ ಇದೆ ಈಗಲಾದರೂ ಹತ್ತು ಎಕರೆ ಜಮೀನು ಕೊಡಿಸಿ,ಇಲ್ಲಾ ೫೦ ಕೋಟಿ ದುಡ್ಡುಕೊಡಿಸಿ,ಇಲ್ಲವೇ ಪ್ಯಾಕಿಂಗ್ ಯೂನಿಟ್ ಮಾಡಿಸಿ ವಿಭಜನೆ ಮಾಡಿಸಿದ್ದಿದ್ದರೆ ನಾವೇ ಬಂದು ನಿಮಗೆ ದೊಡ್ಡದೊಂದು ಹೂವಿನ ಹಾರ ಗೌರವ ಸಲ್ಲಿಸುತ್ತಿದ್ದೆವು. ನೀವು ಅದೇನೂ ಮಾಡಿಲ್ಲ,ವಿಭಜನೆ ಮಾಡಿರುವುದು ನಮ್ಮ ಬಿಜೆಪಿ ಸರಕಾರ,ಡಾ.ಕೆ.ಸುಧಾಕರ್ ಬೊಮ್ಮಾಯಿ ಸರಕಾರದಲ್ಲಿ ಪಟ್ಟುಹಿಡಿದು, ಹೋರಾಟ ಮಾಡಿದ್ದರಿಂದ ಇವತ್ತು ನ್ಯಾಯಾಲಯದಲ್ಲಿ ನಮಗೆ ಜಯ ಸಿಕ್ಕಿದೆ ಎಂದರು.
ಈಗ ಯಾರು ಆಡಳಿತಾಧಿಕಾರಿ ಆಗುತ್ತಾರೋ ಅವರು ಶೀಘ್ರವಾಗಿ ಚುನಾವಣೆ ನಡೆಸಬೇಕು. ನಿಮ್ಮ ಅವಧಿ ಮುಗಿದು ಈಗಾಗಲೇ ೬ ತಿಂಗಳು ಆಗಿದೆ.ಈ ಅವಧಿಯಲ್ಲಿ ಕಾನೂನು ವಿರುದ್ಧವಾಗಿ ಆಡಳಿತ ನಡೆಸಿ ಅನೇಕ ತೀರ್ಮಾನ ಗಳನ್ನು ತೆಗೆದುಕೊಂಡಿದ್ದೀರಿ ಎಂದು ದೂರುದ ಅವರು ಈ ಹೋರಾಟಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಬಸವರಾಜ ಬೊಮ್ಮಾಯಿ ಅವರಿಗೆ ಡಾ.ಕೆ.ಸುಧಾಕರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಇದನ್ನೂ ಓದಿ: Chikkaballapur News: ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸುವಂತೆ ಕನ್ನಡಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ