ತುಮಕೂರು: ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರಕಾರಗಳು ತುರ್ತು ಕ್ರಮವಹಿಸಬೇಕಾಗಿದೆ ಎಂದು ನಿವೃತ್ತ ತಹಸೀಲ್ದಾರ್ ಹಾಗೂ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಆಗ್ರಹಿಸಿದರು.
ನಗರದ ಬಾಲಭವನದಲ್ಲಿ ಕರ್ನಾಟಕ ಕಾಡುಗೊಲ್ಲರ ಪರಿಷತ್ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಪ್ಪಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಾಡುಗೊಲ್ಲರ ಸಮುದಾಯ ಇತರೆ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿಯೂ ಎಸ್ಟಿ ಸಮುದಾಯಕ್ಕೆ ಸೇರಬೇಕಿದೆ.ಇಡೀ ಸಮಾಜಕ್ಕೆ ಭಗವದ್ಗೀತೆ ನೀಡಿದವರು.ಆ ಮೂಲಕ ಎಲ್ಲಾ ಸಮುದಾಯಗಳ ನಡೆ,ನುಡಿಗಳ ಕುರಿತು ಒಂದು ಸಾಂಸ್ಕೃತಿಕ ವೇದಿಕೆಯನ್ನು ಸಿದ್ದಪಡಿಸಿಕೊಟ್ಟಂತಹ ಕುಲ ನಮ್ಮದು, ನಾವುಗಳೇ ಹಾದಿ ತಪ್ಪಿ ನಡೆದರೆ, ಬೇರೆಯವರನ್ನು ಪ್ರಶ್ನಿಸುವ ನೈತಿಕತೆ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ನಾವೆಲ್ಲರೂ ಒಗ್ಗೂಡಿ ಹೋರಾಟವನ್ನು ರೂಪಿಸಿ, ನಮ್ಮ ಹಕ್ಕುಗಳನ್ನು ಪಡೆಯೋಣ. ಮುಂದಿನ ಪೀಳಿಗೆಯ ಉಜ್ವಲ ಏಳಿಗೆಗೆ ಮುನ್ನುಡಿ ಬರೆಯೋಣ ಎಂದು ಸಲಹೆ ನೀಡಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಡಾ.ಎಂ.ಗುರುಲಿಂಗಯ್ಯ ಮಾತನಾಡಿ, ವಿದೇಶಿ ತಜ್ಞರಲ್ಲದೆ, ನಮ್ಮ ದೇಶದ ಕುಲ ಶಾಸ್ತ್ರೀಯ ಅಧ್ಯಯನ ಕಾರರ ಅಭಿಪ್ರಾಯದಂತೆ ಕಾಡುಗೊಲ್ಲ ಜನಾಂಗ ಬುಡಕಟ್ಟು ಸಮುದಾಯಕ್ಕೆ ಸೇರಿದೆ. 2012ರಲ್ಲಿ ವರದಿ ಸಲ್ಲಿಸಲಾಗಿದೆ. ಅದರೆ ಇದುವರೆಗೂ ಎಸ್ಟಿ ಜಾತಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆದಿಲ್ಲ ಎಂದರು.
ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ್ ಮಾತನಾಡಿ,ಶಿಕ್ಷಣದಿಂದ ಮಾತ್ರ ಅಸಮಾನತೆ,ಬಡತನ ಹೋಗಲು ಸಾಧ್ಯ.ಕಾಡುಗೊಲ್ಲ ಸಮಾಜದ ಇಡೀ ಪ್ರಪಂಚ ಹೆಚ್ಚು ಜನಪ್ರಿಯ.ಸತ್ಯ,ಧರ್ಮದ ಸಂಕೇತವಾಗಿರುವ ಶ್ರೀಕೃಷ್ಣನನ್ನು ಪೂಜಿಸುವ ಈ ಜನಾಂಗ ಎಲ್ಲಡೆ ಪುರಸ್ಕಾರ ದೊರೆಯಬೇಕೆಂದರು.
ಕರ್ನಾಟಕ ಕಾಡುಗೊಲ್ಲರ ಪರಿಷತ್ ರಾಜ್ಯಾಧ್ಯಕ್ಷ ಅರುಣ್ ಕೃಷ್ಣಯ್ಯ ಮಾತನಾಡಿ,ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ದಿಯ ದೃಷ್ಟಿಯಲ್ಲಿ ಕಾಡುಗೊಲ್ಲರ ಪರಿಷತ್ ಸಂಘಟನೆಗಳನ್ನು ಕಟ್ಟಲಾಗಿದೆ.ನಮ್ಮ ಸಮುದಾಯ ಮಾತ್ರ ಹೈನುಗಾರಿಕೆ, ಪಶುಸಂಗೋಪನೆ ಹೆಸರಿನಲ್ಲಿ ಉನ್ನತ ಶಿಕ್ಷಣದಿಂದ ಹಿಂದೆ ಸರಿಯುತ್ತಿದೆ. ಇದು ಬದಲಾಗಬೇಕಿದೆ. ಹಾಗಾಗಿ ಕರ್ನಾಟಕ ಕಾಡುಗೊಲ್ಲರ ಪರಿಷತ್ ಈ ನಿಟ್ಟಿನಲ್ಲಿ ಪ್ರತಿ ಹಟ್ಟಿಗಳಲ್ಲಿ ಅರಿವು ಮೂಡಿಸಿ,ಯುವಕರನ್ನು ವಿದ್ಯಾಭ್ಯಾಸದ ಕಡೆಗೆ ಗಮನಹರಿಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ 150ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಮುಖಂಡರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಚಿಕ್ಕಣಸ್ವಾಮಿ ದೇವಾಲಯದ ಆರ್ಚಕರಾದ ಡಾ.ಶಿವಕುಮಾರಸ್ವಾಮಿ, ಜಿಲ್ಲಾ ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಕರಿಯಣ್ಣ, ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಕೆ.ವೀರೇಶ್, ಕೇಶವಮೂರ್ತಿ, ಶೇಷಕುಮಾರ್, ಶ್ರೀನಿವಾಸ್, ಬಿ.ಕೆ.ಜಯಣ್ಣ,ಕರುನಾಡ ವಿಜಯಸೇನೆಯ ಲಕ್ಷಿö್ಮನಾರಾಯಣ್, ಕಲ್ಪನ ಗೋವಿಂದರಾಜು, ನೀಲಾಲೋಚನ ಪ್ರಭು, ಲಕ್ಷಿö್ಮಕಾಂತ್, ಕೆಂಕೆರೆ ಮಲ್ಲಿಕಾರ್ಜುನ್, ಬಿಳಿಗೆರೆ ಜಯಣ್ಣ, ಯೋಗೀಶ್, ಕೊಟ್ರೇಶ್, ಗುರುಶಾಂತ್, ಪವನ್ ಹಲವರು ಉಪಸ್ಥಿತರಿದ್ದರು.