ಕಬ್ಬು ಖರೀದಿಗೆ ಜಿಲ್ಲಾಧಿಕಾರಿಗಳಿಂದ ಸಕರಾತ್ಮಕ ಸ್ಪಂದನೆ
ಚಿಂಚೋಳಿ: ಚಿಂಚೋಳಿ/ ಕಾಳಗಿ ತಾಲೂಕುಗಳಲ್ಲಿ ರೈತರು ಬೆಳೆದ ಕಬ್ಬು ಖರೀದಿಸಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ತಾಲೂಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಬ್ದುಲ್ ಬಾಶೀದ್ ಅವರು ಕಲ್ಬುರ್ಗಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಹೆಕ್ಟೇರ್ ಜಮಿನಿನಲ್ಲಿ ರೈತರು ಬೆಳದ ಕಬ್ಬನ್ನು ಮಾರಾಟ ಮಾಡಲು ಈ ಭಾಗದಲ್ಲಿ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದರಿಂದ ಕಬ್ಬು ಬೆಳೆದ ರೈತರು ಆತಂಕದಲ್ಲಿದ್ದು, ಕಳೆದ ವರ್ಷ ಕಾರ್ಖಾನೆಗಳು ಸಮಯಕ್ಕೆ ಸರಿಯಾಗಿ ಕಬ್ಬು ಖರೀದಿಸದೆ ಇರುವುದರಿಂದ ಹಲವಾರು ರೈತರು ಕಬ್ಬು ಬೆಳೆದ ಕಬ್ಬನ್ನು ಕಟಾವು ಮಾಡಿ ತಮ್ಮ ಜಮಿನಿನಲ್ಲೆ ನಾಶಪಡಿಸಿಕೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಪ್ರಸ್ತುತ ವರ್ಷದ ಕಬ್ಬು ಕಟಾವು ಹಂತಕ್ಕೆ ಬಂದರು ಯಾವುದೆ ಕಾರ್ಖಾನೆಯವರು ಕಬ್ಬು ಖರೀದಿಸಲು ಬೇಡಿಕೆ ಇಡುತ್ತಿಲ್ಲ. ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳದ ಕಬ್ಬು ಹಾಳಾಗುವ ಮುನ್ಸೂಚನೆ ಕಂಡು ರೈತರು ಸಂಕಷ್ಟಕ್ಕೆ ಬಿದ್ದು ಭಯದಲ್ಲಿದ್ದಾರೆ.
ರೈತರ ಬಗ್ಗೆ ಕಾಳಜಿ ವಹಿಸಿ ಪ್ರಸ್ತುತ ವರ್ಷದ ಕಬ್ಬಿಗೆ ಸೂಕ್ತವಾದ ಬೆಂಬಲ ಬೆಲೆ ನೀಡುವುದರೊಂದಿಗೆ ಈ ಭಾಗದ ಲ್ಲಿರುವ ಕಾರ್ಖಾನೆಯ ಮಾಲೀಕರಿಗೆ ಎರಡು ತಾಲೂಕುಗಳ ಆಯಾ ವಲಯಗಳಿಗೆ ಅನುಗುಣವಾಗಿ ಸಮೀಪವಿರುವ ಕಾರ್ಖಾನೆಗಳಿಗೆ ಕಬ್ಬು ಖರೀದಿಸಲು ಆದೇಶ ನೀಡಬೇಕು ಮತ್ತು ರೈತರ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಸರಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸಬೇಕೆಂದು ಸಿಪಿಐಎಂ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮ್ಮಶೆಟ್ಟಿ, ಸಂಘಟನೆ ಹೋರಾಟಗಾರ ಮಾರುತಿ ಗಂಜಗಿರಿ ಸಮ್ಮುಖದಲ್ಲಿ ತಾಲೂಕ ಹಿತ ರಕ್ಷಣಾ ಸಮಿತಿ ನಿಯೋಗ ಮನವಿ ಸಲ್ಲಿಸಿ ಆಗ್ರಹಿಸಿದೆ.
ಕಲಬುರಗಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾವ ಟಿ ಟಿ, ಶರಣಬಸಪ್ಪ ಮಮ್ಮಶೆಟ್ಟಿ, ಮಾರುತಿ ಗಂಜಗಿರಿ ಅವರು ಮಾತನಾಡಿದರು.
ಈ ಸಂಧರ್ಭದಲ್ಲಿ ಚಿಂಚೋಳಿ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಿ ಸಮಿತಿ ಅಧ್ಯಕ್ಷ ಅಬ್ದುಲ್ ಬಾಶೀದ್, ಸುಭಾಷ ರಾಠೋಡ್, ಲಕ್ಷ್ಮಣ ಆವಂಟಿ, ಜಗನ್ನಾಥ ಗುತ್ತೇದಾರ, ಬಸವರಾಜ ಸಜ್ಜನ ಶೆಟ್ಟಿ, ಅನೀಲ ಜಮಾದಾರ, ದೀಪಾಕನಾಗ ಪುಣ್ಯಶೆಟ್ಟಿ,ನಾಗೇಶ ಗುಣಾಜಿ, ನರಸಿಂಲು ಕುಂಬಾರ, ನರಸಿಂಹಲು ಸವಾರಿ, ಸುರೇಶ ಬಂಟಾ ಸೇರಿ 50ಕ್ಕೂ ಹೆಚ್ಚಿನ ಮುಖಂಡರು ರೈತರು, ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳಿಂದ ಸಕರಾತ್ಮಕ ಸ್ಪಂದನೆ : ಚಿಂಚೋಳಿ – ಕಾಳಗಿ ಭಾಗದ ಕಬ್ಬು ಬೆಳೆಗಾರರ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗುತ್ತದೆ. ಈಗಾಗಲೇ ಕಬ್ಬು ಬೆಳೆಯ ಬಗ್ಗೆ ಹುಬ್ಬಳ್ಳಿ ವಲಯವಾರು ಅಂಕಿ ಅಂಶಗಳ ಮಾಹಿತಿ ಸಂಗ್ರಹಿಸಲಾಗಿದ್ದು, ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿ, ರೈತರಿಗೆ ಸೂಕ್ತವಾದ ಬೆಲೆಯನ್ನು ಕೊಡುವ ಕಾರ್ಖಾನೆಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ. ಸರಕಾರ ರೈತರೊಂದಿಗೆ ಇದೆ ಎಂದು ಜಿಲ್ಲಾಧಿಕಾ ರಿಗಳು ಸಮಿತಿಯೊಂದಿಗೆ ಒಂದುವರೆ ಗಂಟೆಗಳಕಾಲ ಸಭೆ ನಡೆಸಿ ಸಕರಾತ್ಮಕ ಸ್ಪಂದನೆಯನ್ನು ಸಮಿತಿಗೆ ನೀಡಿದ್ದಾರೆ ಎಂದು ತಾಲೂಕ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಬ್ದುಲ್ ಬಾಶೀದ್ ತಿಳಿಸಿದರು.