Sunday, 15th December 2024

ಕಲಬುರಗಿಯ ಹೋಟೆಲ್‌ನಲ್ಲಿ ಸಿಲಿಂಡರ್ ಸ್ಪೋಟ: ಕಾರ್ಮಿಕರಿಗೆ ಗಾಯ

ಲಬುರಗಿ: ಕಲಬುರಗಿಯ ಸಪ್ತಗಿರಿ ಆರೆಂಜ್ ಹೋಟೆಲ್‌ನಲ್ಲಿ ಬೆಳಗ್ಗೆ ಸಿಲಿಂಡರ್ ಸ್ಪೋಟಗೊಂಡು ಹಲವಾರು ಜನ ಕಾರ್ಮಿಕರು ಗಾಯಗೊಂಡಿ ದ್ದಾರೆ. ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸಿಲಿಂಡರ್ ಸ್ಪೋಟದಿಂದ ಹೋಟಲ್‌ನಲ್ಲಿದ್ದ ವಸ್ತುಗಳು ಹಾನಿಗೊಳಗಾಗಿವೆ. ಹೋಟೆಲ್ ಸುತ್ತಲೂ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬ್ರಹ್ಮಪುರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಉಪಾಹಾರ ಹಾಗೂ ಇತರ ಆಹಾರ ತಯಾರಿಕೆಗಾಗಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್‌ನಲ್ಲಿ ಇದ್ದರು. ಈ ವೇಳೆ ಅಡುಗೆ ಅನಿಲ ಸ್ಪೋಟಗೊಂಡಿದ್ದು ಭಾರೀ ಅನಾಹುತವಾಗಿದೆ.

ಘಟನೆ ನಡೆದ ಬಳಿಕ ತಕ್ಷಣ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯದೊಂದಿಗೆ ಗಾಯಗೊಂಡ ಕಾರ್ಮಿಕರನ್ನು ರಕ್ಷಿಸಲಾಗಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳನ್ನು ಮಹೇಶ್ ಲಕ್ಷ್ಮಣ, ವಿಠಲ್, ಮಲ್ಲಿನಾಥ್, ಅಪ್ಪಾರಾಯ, ಸತ್ಯವಾನ ಶರ್ಮ್, ಪ್ರಶಾಂತ್, ಶಂಕರ್, ಗುರುಮೂರ್ತಿ, ರಾಕೇಶ್ ಎಂದು ಗುರುತಿಸಲಾಗಿದೆ.