Sunday, 8th September 2024

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ: ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರಿಂದ ಪೂರ್ವಸಿದ್ಧತಾ ಸಭೆ

ಕಲಬುರಗಿ: ಸೆ.ರ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳ ವಾರ ನೂತನ ಪ್ರಾದೇಶಿಕ ಆಯುಕ್ತ ಮತ್ತು ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಕೃಷ್ಣ ಬಾಜಪೇಯಿ ಅವರು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಲಾದ ಪೂರ್ವ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕೃಷ್ಣ ಬಾಜಪೇಯಿ ಅವರು, ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಯಶಸ್ಸಿಗೆ ಈಗಾಗಲೆ ಉಪ ಸಮಿತಿ ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಅದನ್ನು ಎಲ್ಲರು ಚಾಚುತಪ್ಪದೆ ಪಾಲಿಸಬೇಕು ಎಂದರು.

ಸೆ.17 ರಂದು ಮುಖ್ಯಮಂತ್ರಿಗಳು ಕಲಬುರಗಿ ವಿಮಾನ ನಿಲ್ದಾಣದಿಂದ ನೇರವಾಗಿ ಎಸ್.ವಿ.ಪಿ.ವೃತ್ತಕ್ಕೆ ಆಗಮಿಸಿ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ನಂತರ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಎನ್.ವಿ.ಮೈದಾನದಲ್ಲಿ ಆಯೋಜಿಸಲಾಗಿರುವ “ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವಕ್ಕೆ” ವಿದ್ಯುಕ್ತ ಚಾಲನೆ ನೀಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವರು. ಅಲ್ಲದೆ ಕಲ್ಯಾಣ ಕರ್ನಾಟಕದ ಅತಿದೊಡ್ಡ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಸಹ ಉದ್ಘಾಟಿಸುವರು ಎಂದರು.

ಎನ್.ವಿ.ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಕಾರಣ ಕುಡಿಯುವ ನೀರಿನ ವ್ಯವಸ್ಥೆ, ಬಯೋ ಟಾಯಲೆಟ್ ವ್ಯವಸ್ಥೆ, ಆಸನದ ವ್ಯವಸ್ಥೆ ಹಾಗೂ ಬ್ಯಾರಿಕೇಡ್‍ದೊಂದಿಗೆ ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಬೇಕು. ಅಗ್ನಿಶಾಮಕ ವಾಹನ ಮತ್ತು ಅಂಬುಲೆನ್ಸ್ ವಾಹನಗಳು ಎನ್.ವಿ.ಮೈದಾನ ಮತ್ತು ಪರೇಡ್ ಮೈದಾನದಲ್ಲಿ ತೈನಾತಿಸಬೇಕು. ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಫಲಾನುಭವಿ ಗಳು, ಸಾರ್ವಜನಿಕರು ಬರಲು ಬಸ್ ವ್ಯವಸ್ಥೆ ಮಾಡಲಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಸಮನ್ವಯ ಸಾಧಿಸಬೇಕು. ವಾಹನಗಳ ಪಾರ್ಕಿಂಗ್‍ಗೆ ನಾಲ್ಕು ದಿಕ್ಕಿನಲ್ಲಿ ಅಗತ್ಯ ವ್ಯವಸ್ಥೆ ಮಾಡುವಂತೆ ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು ಅವರಿಗೆ ಕೃಷ್ಣ ಬಾಜಪೇಯಿ ಅವರು ಸೂಚಿಸಿದರು.

ಅಮೃತ ಮಹೋತ್ಸವ ಅಂಗವಾಗಿ ಸೆ.15 ರಂದು ಜಗತ್ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣ ವರೆಗೆ ಸಾಂಸ್ಕೃತಿಕ ಕಲಾ ತಂಡಗಳ ಭವ್ಯ ಮೆರವಣಿಗೆ ಆಯೋಜಿಸಬೇಕು, ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಬೇಕು ಹಾಗೂ ಸೆ.15 ರಿಂದ ಮೂರು ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಬೇಕು.

ಕಲಬುರಗಿ ನಗರ ಹೊರತುಪಡಿಸಿ ಬೇರೆ ತಾಲೂಕು ಹಾಗೂ ಜಿಲ್ಲೆಗಳಿಂದ ಮಳಿಗೆ ಹಾಕಲು ಆಗಮಿಸುವ ಸಣ್ಣ ಉದ್ಯಮಿ, ಸ್ವ-ಸಹಾಯ ಸಂಘ ಗಳು, ಮಾರಾಟಗಾರರಿಗೆ ಅಗತ್ಯ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಯಿತು. ಖ.ಐ.ಸಿ. ಜಂಟಿ ನಿರ್ದೇಶಕ ಮಾಣಿಕ ರಘೋಜಿ ಅವರು ಮಾತನಡಿ, ಈಗಾಗಲೆ ಪುರುಷ ಹಾಗೂ ಮಹಿಳಯೆರಿಗೆ ಪ್ರತ್ಯೇಕ ಮೂರು ಕಡೆ ವವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಡಿ.ಸಿ. ಯಶವಂತ ವಿ. ಗುರುಕರ್ ಮಾತನಾಡಿ, ಎನ್.ವಿ.ಮೈದಾನದಲ್ಲಿ ನಡೆಯುವ ಅಮೃತ ಮಹೋತ್ಸವ ಮುಖ್ಯ ವೇದಿಕೆ, ಎಸ್.ವಿ.ಪಿ. ವೃತ್ತವನ್ನು ಹೂವಿನಿಂದ ಆಲಂಕರಿಸಬೇಕು. ಸಿ.ಎಂ. ಭಾಗವಹಿಸುವ ಕಾರ್ಯಕ್ರಮದೆಲ್ಲಡೆ ಶಿಷ್ಟಚಾರವನ್ನು ಕಟ್ಟುನಿಟಾಗಿ ಪಾಲಿಸಬೇಕು. ನಿಯಮಿತವಾಗಿ ವಿದ್ಯುತ್ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಅಮೃತ ಮಹೋತ್ಸವ ಅಂಗವಾಗಿ ಇದೂವರೆಗೆ ಕೈಗೊಳ್ಳಲಾದ ಪೂರ್ವಸಿದ್ಧತೆ ಕುರಿತು ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕೆ.ಕೆ.ಆರ್.ಡಿ.ಬಿ. ಉಪ ಕಾರ್ಯದರ್ಶಿ ಆನಂದ ಪ್ರಕಾಶ ಮೀನಾ, ಸಹಾಯಕ ಆಯುಕ್ತೆ ಮೋನಾ ರೋಟ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

error: Content is protected !!