Sunday, 15th December 2024

ಸುಸ್ಥಿರ ಇಂಧನ, ಬೆಂಗಳೂರು ಆಚೆಗಿನ ನಗರಗಳ ನಿರ್ಮಾಣ, ಸ್ಪರ್ಧಾತ್ಮಕ ಮತ್ತು ಸುಸ್ಥಿರ ರಾಜ್ಯ ನಿರ್ಮಾಣವಾಗಬೇಕು: ಕಮಲ್ ಬಾಲಿ

ಬೆಂಗಳೂರು: “ಜಗತ್ತು ಇಂದು ಅತ್ಯಂತ ತ್ವರಿತವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ನಾವು ಪರಮೋಚ್ಛ ಸ್ಥಾನದಲ್ಲಿಯೇ ಮುಂದುವರೆಯಬೇಕು. ಸೂಕ್ತ ಸ್ಥಳ, ಸೂಕ್ತ ಕಾಲ ಮತ್ತು ಸೂಕ್ತ ಜನರೊಟ್ಟಿಗೆ ನಾವಿದ್ದು, ಕರ್ನಾಟಕ ಭವಿಷ್ಯದ ಪರಿವರ್ತನೆಗೆ ಸನ್ನದ್ಧವಾಗಿದೆ ಎಂದು ಸಿಐಐ ದಕ್ಷಿಣ ವಲಯದ ಪ್ರಾದೇಶಿಕ ಅಧ್ಯಕ್ಷ ಮತ್ತು ಭಾರತದಲ್ಲಿ ವೋಲ್ವೋ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಹೇಳಿದ್ದಾರೆ.

ಸಿಐಐ ಕರ್ನಾಟಕ ಘಟಕದಿಂದ ಆಯೋಜಿಸಲಾದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ “ಸ್ಪರ್ಧಾತ್ಮಕ ಮತ್ತು ಸುಸ್ಥಿರ ಕರ್ನಾಟಕ@100ನತ್ತ : ಬೆಳವಣಿಗೆ, ಒಳಗೊಳ್ಳುವಿಕೆ, ಜಾಗತೀಕರಣ, ವಿಶ್ವಾಸ ನಿರ್ಮಾಣ” ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭವಿಷ್ಯ ಭಾರತದ ನಿರ್ಮಾಣಕ್ಕೆ ಸೂಕ್ತ ಸ್ವರೂಪ ದೊರೆಯುತ್ತಿದೆ. ದೇಶ ತ್ವರಿತವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿದ್ದು, ಮೊದಲನೆಯದಾಗಿ ಇದಕ್ಕೆ ರಚನಾತ್ಮಕ ಸುಧಾರಣೆಗಳು ಕಾರಣ. ಜಗತ್ತಿಗೆ ಹೋಲಿಸಿದರೆ ಭಾರತದಲ್ಲಿ 46% ರಷ್ಟು ವಹಿವಾಟು ಹಣಕಾಸು ತಂತ್ರಜ್ಞಾನದ ಮೂಲಕ ಆಗುತ್ತಿದೆ. ಮೂಲ ಸೌಕರ್ಯವನ್ನು ಕೇಂದ್ರೀಕರಿಸಿ ಹಣಕಾಸು ಒಳಗೊಳ್ಳುವಿಗೆ ಆದ್ಯತೆ ನೀಡಲಾಗಿದೆ. ನಾಲ್ಕನೇಯದಾಗಿ ಹವಾಮಾನ ಬದಲಾವಣೆ ಕುರಿತಂತೆ ನಮ್ಮ ಬದ್ಧತೆ ಈ ಸಾಧನೆಗೆ ಕಾರಣ ಎಂದರು.

” ಪ್ರಸ್ತುತ ಗಾತ್ರವನ್ನು ಅವಲೋಕಿಸಿದರೆ ಕರ್ನಾಟಕದ ಆರ್ಥಿಕತೆಯ 2035 ರ ವೇಳೆಗೆ 1 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗುವ ಗುರಿ ಹೊಂದಿದೆ, ಕರ್ನಾಟಕದ ಆರ್ಥಿಕತೆಯ ರಾಷ್ಟ್ರೀಯ ಆರ್ಥಿಕತೆಯ ಸುಮಾರು 8.2% ರಷ್ಟಿದೆ. ಪ್ರತಿವರ್ಷ ಅರ್ಧ ದಶಲಕ್ಷ ಯುವ ಸಮೂಹಕ್ಕೆ ಕೌಶಲ್ಯ ದೊರಕಿಸಿ ಕೊಟ್ಟರೆ, ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವನ್ನು ಹೆಚ್ಚಿಸಿದರೆ, 900,000 ನೋಂದಾಯಿತ ಎಂಎಸ್ಎಂಇಗಳಿಗೆ ಮಾರುಕಟ್ಟೆ ಸಂಪರ್ಕ ಒದಗಿಸಿ, ಬೆಂಗಳೂರಿನ ಆಚೆಗೆ ಸುಸ್ಥಿರ ನಗರಗಳನ್ನು ನಿರ್ಮಿಸುವತ್ತ ಗಮನ ಹರಿಸಬೇಕು. ರಾಜ್ಯದ ಸುಮಾರು 50% ಇಂಧನವನ್ನು ನವೀಕರಿಸಬಹುದಾದಂತೆ ಶುದ್ಧ ಇಂಧನ ವಲಯದಲ್ಲಿ ಮುಂಚೂಣಿಗೆ ತಂದರೆ ಕರ್ನಾಟಕವು ಈ ಗುರಿಯನ್ನು ಸಾಧಿಸಬಹುದು” ಎಂದು ಹೇಳಿದರು.

ಕೆನ್ನಮೆಟಲ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ ಕೃಷ್ಣನ್ ವೆಂಕಟೇಶನ್ ಮಾತನಾಡಿ, ಸಮರ್ಥ, ಸುಸ್ಥಿರ ಕರ್ನಾಟಕಕ್ಕಾಗಿ, ತಂತ್ರಾಂಶ ರಫ್ತು ವಲಯ, ರಫ್ತು ಆದಾಯ ಮತ್ತು ಜಿಡಿಪಿಗೆ ಅದರ ಕೊಡುಗೆ ಎರಡನ್ನೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಇದರ ಹೊರತಾಗಿ, ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ, ವಿಶೇಷವಾಗಿ ತಳಮಟ್ಟದಲ್ಲಿ, ನಮ್ಮ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಕೌಶಲ್ಯ, ಶಿಕ್ಷಣ, ಉತ್ಪಾದನೆ, ಪ್ರವಾಸೋ ದ್ಯಮ, ಆರೋಗ್ಯ ಮತ್ತು ಇತರ ಕ್ಷೇತ್ರಗಳ ಬೆಳವಣಿಗೆ ಅಗತ್ಯವಾಗಿದೆ” ಎಂದು ಅವರು ಹೇಳಿದರು.

ಹಿಟಾಚಿ ಎನರ್ಜಿ ಸಂಸ್ಥೆಯ ದಕ್ಷಿಣ ಏಷ್ಯಾ ಮತ್ತು ಭಾರತದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ವೇಣು ನೌಗೌರಿ ಮಾತನಾಡಿ, “ಬರುವ 2030ರ ವೇಳೆಗೆ ನಮ್ಮ ಇಂಧನ ಅಗತ್ಯದ ಶೇ.50ರಷ್ಟನ್ನು ನವೀಕರಿಸಬಹುದಾದ ಇಂಧನದ ಮೂಲಕ ಸಾಧಿಸಬೇಕು. ಇದು ಬಹಳ ದೊಡ್ಡ ಕೆಲಸ. ಒಂದು ದೇಶವಾಗಿ, ನಾವು ಇಲ್ಲಿಯವರೆಗೆ ಮಾಡಿದ್ದಕ್ಕಿಂತ ಕನಿಷ್ಠ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಪ್ರಗತಿ ಸಾಧಿಸಬೇಕಾಗಿದೆ. ಉತ್ಪಾದನೆ, ಪ್ರಸರಣ, ವಿತರಣೆ ಅಥವಾ ಬಳಕೆಯಲ್ಲಿ ಇಂಧನ ಪರಿವರ್ತನೆಯ ವ್ಯವಹಾರಗಳು ನಮಗೆ ಒಂದು ದೊಡ್ಡ ಅವಕಾಶವಾಗಿದೆ. ಇಂಧನ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ” ಎಂದರು.

“ಸಾಂಸ್ಥಿತಿ ವಲಯದ ಶ್ರೇಷ್ಠತೆಗಾಗಿ ನಂಬಿಕೆ ಮತ್ತು ಪುಟಿದೇಳುವ ಪರಿಸ್ಥಿತಿ ನಿರ್ಮಿಸುವ” ಕುರಿತಂತೆ ಒಂದು ದಿನದ ಸಿಇಒಗಳ ಸಂವಾದ ಗೋಷ್ಠಿ ಕಾರ್ಯಕ್ರಮದ ಭಾಗವಾಗಿತ್ತು.