ಚಿಕ್ಕಬಳ್ಳಾಪುರ : ಈ ಬಾರಿಯ ನವೆಂಬರ್ 1 ರಂದು ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮವನ್ನು ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮ ಸಡಗರದೊಂದಿಗೆ ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ಅರ್ಥಪೂರ್ಣವಾಗಿ ಮತ್ತು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಂಬಂಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಸಾಹಿತಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಬಾರಿ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದ್ದು, ಅಂದು ವೇದಿಕೆ ಕಾರ್ಯಕ್ರಮ ದಲ್ಲಿ ಧ್ವಜಾರೋಹಣ, ನಾಡಗೀತೆ, ವಿದ್ಯಾರ್ಥಿಗಳಿಂದ ಸಮೂಹ ಗೀತ ಗಾಯನ ಮತ್ತು ನೃತ್ಯ, ಗೌರವ ವಂದನೆ, ಸಾಧಕರಿಗೆ ಸನ್ಮಾನ, ಪೊಲೀಸ್ ಕವಾಯತು ಕಾರ್ಯಕ್ರಮಗಳನ್ನು ಎಂದಿನಂತೆಯೇ ಆಯೋಜಿಸಲಾಗುವುದು.
ಅಲ್ಲದೆ ನಗರದ ಉಪವಿಭಾಗಾಧಿಕಾರಿ ಕಚೇರಿಯಿಂದ ಬಿ.ಬಿ.ರಸ್ತೆಯ ಮೂಲಕ ಕ್ರೀಡಾಂಗಣದವರೆಗೆ ಸ್ಥಬ್ದ ಚಿತ್ರಗಳು ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಗುವುದು. ಸ್ಥಳೀಯ ಸಾಹಿತಿಗಳನ್ನು ಒಳಗೊಂಡAತೆ ಪ್ರಮುಖ ಕನ್ನಡ ಸಾಹಿತಿಗಳ ಛಾಯಾಚಿತ್ರಗಳನ್ನು ಹಾಗೂ ಅವರ ಸಂದೇಶಗಳ ಫಲಕಗಳನ್ನು ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ವೇದಿಕೆ ಸಿದ್ಧತೆ, ಅಲಂಕಾರ, ಸರ್ಕಾರಿ ಕಚೇರಿಗಳಿಗೆ ದೀಪಾಲಂಕಾರ, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಆಹ್ವಾನ ಪತ್ರಿಕೆಗಳ ಮುದ್ರಣ ಮತ್ತು ವಿತರಣೆ, ಆಂಬುಲೆನ್ಸ್ ವ್ಯವಸ್ಥೆ, ಕಾರ್ಯಕ್ರಮ ನಿರ್ವಹಣೆ, ನಿರೂಪಣೆ, ಕ್ರೀಡಾಂಗಣ ಸ್ವಚ್ಛತೆ ಇನ್ನಿತರೆ ಸಿದ್ಧತಾ ಕಾರ್ಯಗಳನ್ನು ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಿ ಈ ಎಲ್ಲಾ ಕಾರ್ಯಗಳನ್ನು ಸಮರ್ಪಕವಾಗಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆದ್ದರಿಂದ ಕನ್ನಡ ಸಾಹಿತ್ಯ ಕಲೆ ಕ್ಷೇತ್ರಗಳಲ್ಲಿ ಹಾಗೂ ಕನ್ನಡಪರ ಚಟುವಟಿಕೆಗಳಲ್ಲಿ ಸಾಧನೆ ಗೈದಿರುವ ಸಾಧಕರು ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿಯನ್ನು ಸಹ ಸಲ್ಲಿಸ ಬಹುದು. ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ನಿರ್ಧರಿಸುವ ಸಾಧಕರಿಗೆ ಸನ್ಮಾನ ಮಾಡಲಾಗು ವುದು. ಸರ್ಕಾರಿ ಕಚೇರಿಗಳು ಸೇರಿದಂತೆ, ಖಾಸಗಿ ಶಾಲಾ ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸುವಂತೆ ಸಂಬAಧ ಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವ ಆಚರಣೆಯ ಕುರಿತು ಸಲಹೆಗಳನ್ನು ಸಭೆಗೆ ನೀಡಿದರು.
ನವೆಂಬರ್ 01 ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಗಳು ಆಹ್ವಾನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೋಡಿ ರಂಗಪ್ಪ, ನಿಕಟಪೂರ್ವ ಅಧ್ಯಕ್ಷ ಕೈವಾರ ಶ್ರೀನಿವಾಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಯಲುವಳ್ಳಿ ಸೊಣ್ಣೇಗೌಡ, ಮಂಚನಬಲೆ ಶ್ರೀನಿವಾಸ್, ಸಾಹಿತಿ ಸರಸಮ್ಮ, ವೆಂಕಟಾಚಲಪತಿ, ಸಂಘಟನೆಗಳ ಮುಖಂಡರಾದ ರವಿಕುಮಾರ್, ಉಷಾ ಶ್ರೀನಿವಾಸ್, ಕಸಾಪ ಸದಸ್ಯರು, ವಿವಿಧ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು, ಸದಸ್ಯರು, ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಇದನ್ನೂ ಓದಿ: Chikkaballapur: ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಜನಗಣತಿ ಸಮೀಕ್ಷಾ ವರದಿ ಕೂಡಲೇ ಜಾರಿ ಜಾರಿಗೊಳಿಸಬೇಕು