Saturday, 14th December 2024

ಶಾಲಾ-ಆಸ್ಪತ್ರೆ ನಿರ್ಮಾಣಕ್ಕೆ ಜಮೀನು ನೀಡಲು ಸಚಿವ ಗೋವಿಂದ ಕಾರಜೋಳ ಸೂಚನೆ

ಕಲಬುರಗಿ ವಲಯದ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ

ಕಲಬುರಗಿ: ನೀರಾವರಿ ಯೋಜನೆ ಅನುಷ್ಟಾನಕ್ಕೆ ಭೂಸ್ವಾಧೀನ ಮಾಡಲಾದ ಜಮೀನಿನಲ್ಲಿ ಖಾಲಿ ಭೂಮಿ ಉಳಿದಿದ್ದಲ್ಲಿ ಅದನ್ನು ಶಾಲಾ-ಕಾಲೇಜು, ಆಸ್ಪತ್ರೆ ನಿರ್ಮಾಣಕ್ಕೆ ನೀಡಿ ಎಂದು ನೀರಾವರಿ ನಿಗಮದ ಅಧಿಕಾರಿಗಳಿಗೆ ಜಲಸಂಪ ನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಸೂಚಿಸಿದರು.

ಕಲಬುರಗಿಯಲ್ಲಿ ಕರ್ನಾಟಕ ನೀರಾವರಿ ನಿಗಮದ ಕಲಬುರಗಿ ವಲಯದ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಯೋಜನೆ ಅನುಷ್ಟಾನದ ನಂತರ ಉಳಿದ ಜಮೀನು ಸದುಪಯೋಗ ಮಾಡಿ ಕೊಳ್ಳುವಂತೆ ತಿಳಿಸಿದರು.

ಕಲಬುರಗಿ ಜಿಲ್ಲೆಯ ಅಮರ್ಜಾ, ಬೆಣ್ಣೆತೋರಾ, ಭೀಮಾ ಏತ ನೀರಾವರಿ, ಚಂದ್ರಂಪಳ್ಳಿ, ಗಂಡೋರಿ ನಾಲಾ ಹಾಗೂ ಲೋವರ್ ಮುಲ್ಲಾಮಾರಿ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶಗಳ ಕೊನೆಯ ರೈತನ ಜಮೀನಿಗೂ ನೀರು ಹರಿಸಲು ಲಭ್ಯ ವಾಗುವಂತೆ ಆಧುನೀಕರಣ ಕಾಮಗಾರಿಗಳು ಗುಣಮಟ್ಟದ ಜೊತೆಗೆ ಕಾಲಮಿತಿಯಲ್ಲಿ ಮುಗಿಸಬೇಕು. ಕಳಪೆ ಕಾಮಗಾರಿಗೆ ಇಲ್ಲಿ ಅವಕಾಶವಿಲ್ಲ ಎಂದು ಸಚಿವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಇನ್ನೂ ಯೋಜನೆ ಕಾಲಮಿತಿಯಲ್ಲಿ ಪೂರ್ಣ ಮಾಡದೆ ವಿಳಂಬ ನೀತಿ ಅನು ಸರಿಸುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ವಹಿಸುವು ದಲ್ಲದೆ ಗುತ್ತಿಗೆದಾರನಿಗೆ ಪಾವತಿಗೆ ಉಳಿದಕೊಂಡ ಬಾಕಿ ಮೊತ್ತದಲ್ಲಿ ಶೇ.1 ರಿಂದ 7ರ ವರೆಗೆ ದಂಡ ಹಾಕುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಲಬುರಗಿ ಜಿಲ್ಲೆಯ ಬಂದರವಾಡ ಮತ್ತು ಮಣ್ಣೂ ಗ್ರಾಮದ ಹತ್ತಿರ ಭೀಮಾ ನದಿಯಿಂದ ನೀರನ್ನು ಎತ್ತಿ ಅಫಜಲಪೂರ ತಾಲೂಕಿನ 7 ಕೆರೆ ತುಂಬಿಸುವ 51 ಕೋಟಿ ರೂ. ಮೊತ್ತದ ಯೋಜನೆ ಬರುವ ಸೆಪ್ಟೆಂಬರ್ ಒಳಗೆ ಮುಗಿಸಬೇಕು ಎಂದರು.

ಕಲಬುರಗಿ ನೀರಾವರಿ ವಲಯದಲ್ಲಿ ನೀರಾವರಿ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಂಡ 47916 ಎಕರೆ ಪೈಕಿ 47370 ಎಕರೆ ಪ್ರದೇಶ ಇಲಾಖೆಯ ಹೆಸರಿನಲ್ಲಿದೆ ಎಂದು ವಲಯದ ಮುಖ್ಯ ಅಭಿಯಂತ ಆರ್.ಎಲ್.ವೆಂಕಟೇಶ ಸಭೆಗೆ ತಿಳಿಸಿದರು. ಸಚಿವ ಗೋವಿಂದ ಕಾರಜೋಳ ಮಾತನಾಡಿ ಕಲಬುರಗಿ ವಲಯದಲ್ಲಿನ ಉಳಿದ 546 ಎಕರೆ ಪ್ರದೇಶ ಸೇರಿದಂತೆ ರಾಜ್ಯದಾದ್ಯಂತ 2.80 ಲಕ್ಷ ಎಕರೆ ಪ್ರದೇಶದ ಪೈಕಿ ಬಾಕಿ ಉಳಿದಿರುವ 2220 ಎಕರೆ ಪ್ರದೇಶವನ್ನು ಇಲಾಖೆಯ ಹೆಸರಿಗೆ ಆರ್.ಟಿ.ಸಿ. ಮಾಡಲು ಕ್ರಮ ವಹಿಸಬೇಕು ಜೊತೆಗೆ ಅತಿಕ್ರಮಣವಾಗಿರುವ ಜಮೀನು ಸಹ ತೆರವುಗೊಳಿಸಬೇಕು ಎಂದು ಕೆ.ಎನ್.ಎನ್.ಎಲ್ ವ್ಯಸವ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರಿಗೆ ಸಚಿವರು ಸೂಚಿಸಿದರು.

ಬೀದರ ಜಿಲ್ಲೆಯ ಮೇಲ್ದಂಡೆ ಮುಲ್ಲಾಮಾರಿ ಯೋಜನೆಯ ಮುಖ್ಯ ಕಾಲುವೆಯ ಹಾರ್ಡ್ ರಾಕ್ ಬದಲಾವಣೆಗೆ ವಾರ್ಷಿಕ ನಿರ್ವಹಣೆಯ ಅನುದಾನ ಬಳಸಿದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಗೋವಿಂದ ಎಂ. ಕಾರಜೋಳ ಅವರು ಈ ಬಗ್ಗೆ ವಿಶೇಷ ತಾಂತ್ರಿಕ ತಂಡ ಕಳುಹಿಸಿ ಪರಿಶೀಲಿಸಿ ವರದಿ ನೀಡುವಂತೆ ಸಭೆಯಲ್ಲಿದ್ದ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕೆ.ಬಿ.ಕೃಷ್ಣಮೂರ್ತಿ ಅವರಿಗೆ ನಿರ್ದೇಶನ ನೀಡಿದರು.

ಕಲಬುರಗಿ ವಲಯದಲ್ಲಿ 47 ಸಹಾಯಕ ಅಭಿಯಂತರರು, 16 ಕಿರಿಯ ಅಭಿಯಂತರರು ಸೇರಿದಂತೆ ಒಟ್ಟು 67 ಹುದ್ದೆಗಳು ಖಾಲಿ ಇದ್ದು, ಇದರಿಂದ ನೀರಾವರಿ ಯೋಜನೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಶಾಸಕ ಎಂ.ವೈ.ಪಾಟೀಲ ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆಸಿದ ಸಚಿವ ಗೋವಿಂದ ಕಾರಜೋಳ 371ಜೆ ಮೀಸಲಾತಿಯಂತೆ 185 ಅಧಿಕಾರಿಗಳ ನೇಮಕಾತಿ ಯಾಗಿದ್ದು, ಅವರೆಲ್ಲರು ತರಬೇತಿ ಪಡೆಯು ತ್ತಿದ್ದಾರೆ. ಶೀಘ್ರವೇ ಇವರ ಸೇವೆ ಪ್ರದೇಶಕ್ಕೆ ಸಿಗಲಿದೆ ಎಂದರು.

ಜಿಲ್ಲೆಯ ಗಂಡೋರಿ ನಾಲಾ ಮತ್ತು ಕೆಳದಂಡೆ ಮುಲ್ಲಾಮಾರಿ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಕೊನೆಯ ರೈತನಿಗೆ ನೀರು ಹರಿಯುತ್ತಿಲ್ಲ ಎಂದು ಸ್ಥಳೀಯ ಶಾಸಕರು ಸಭೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಚಿವರು ಎಂ.ಡಿ. ಅವರಿಗೆ ಆದೇಶಿಸಿದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ: ಕಲಬುರಗಿ ಮಹಾನಗರಕ್ಕೆ 24 ಗಂಟೆ ಕುಡಿಯುವ ನೀರು ಒದಗಿಸುವ ಯೋಜನೆ ಸೇರಿದಂತೆ ಕಲಬುರಗಿ ನೀರಾವರಿ ವಲಯದಲ್ಲಿ ಎಲ್ಲಿಯೇ ಕುಡಿಯುವ ನೀರಿಗೆ ಬೇಡಿಕೆ ಬಂದಲ್ಲಿ ಅದನ್ನು ಪ್ರಥಮಾದ್ಯತೆ ಮೇಲೆ ನೀರು ನೀಡಲು ನಾವು ಸಿದ್ಧರಿದ್ದೇವೆ. ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾದದ್ದು ನಗರಾಭಿವೃದ್ಧಿ ಇಲಾಖೆ, ಕುಡಿಯುವ ನೀರು ಸರಬರಾಜು ಮಂಡಳಿ ಹೊರತು ಜಲಸಂಪನ್ಮೂಲ ಇಲಾಖೆ ಅಲ್ಲ ಎಂದು ಸ್ಪಷ್ಟಪಡಿಸಿದರು. ಒಂದು ವೇಳೆ ಸಂಬಂಧಪಟ್ಟ ಇಲಾಖೆಗಳು ನಿಶ್ಚಿತ ಠೇವಣಿ ಅನುದಾನ ಇಲಾಖೆಗೆ ನೀಡಿದಲ್ಲಿ ಕುಡಿಯುವ ನೀರಿನ ಕಾಮಗಾರಿಗಳು ಕೈಗೆತ್ತಿಳ್ಳ ಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಕಾರಂಜಾ ಜಲಾಶಯದಿಂದ ಬೀದರ ನಗರಕ್ಕೆ 2 ಟಿ.ಎಂ.ಸಿ. ನೀರು ಪೂರೈಕೆಗೆ ಅಲ್ಲಿನ ಜಿಲ್ಲಾಧಿಕಾರಿಗಳು ಪತ್ರ ಬರೆದಿರುವ ಹಿನ್ನೆಲೆ ಯಲ್ಲಿ ಜಲಾಶಯದಿಂದ ನೀರನ್ನು ಎತ್ತಿ ಪಡೆಯಲು ಸಚಿವರು ಒಪ್ಪಿಗೆ ಸೂಚಿಸಿದಲ್ಲದೆ ಚುಳಕಿನಾಲಾ ಕಾಲುವೆ ದುರಸ್ತಿಗೂ ಕೂಡಲೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಪುನರ್ವಸತಿ ಕೇಂದ್ರಗಳು ಸಿ.ಇ.ಓ ಗಳಿಗೆ ಹಂಚಿಕೆ ಮಾಡಿ: ನೀರಾವರಿ ಯೋಜನೆ ಅನುಷ್ಟಾನದಿಂದ ಬಾಧಿತ ಗ್ರಾಮಸ್ಥರ ಅನುಕೂಲಕ್ಕಾಗಿ ಸ್ಥಾಪಿಸಲಾದ ಪುನರ್ವಸತಿ ಕೇಂದ್ರಗಳಲ್ಲಿ ರಸ್ತೆ, ವಿದ್ಯುತ್, ಸಮುದಾಯ ಭವನ, ದೇವಸ್ಥಾನ ಸೇರಿದಂತೆ ಮೂಲಭೂತ ಸೌಕರ್ಯಗಳು ಕಾಮಗಾರಿ ಪೂರ್ಣಗೊಂಡಲ್ಲಿ ಕೂಡಲೆ ಸಂಬಂಧಿಸಿದ ಜಿಲ್ಲಾ ಪಂಚಾಯತ್ ಸಿ.ಇ.ಓ ಅವರಿಗೆ ಹಂಚಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಐನಾಪೂರ ಏತ ನೀರಾವರಿ ಯೋಜನೆಗೆ ಒಪ್ಪಿದೆ: ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ನೀರನ್ನು ಎತ್ತಿ ಚಿಂಚೋಳಿ ತಾಲೂಕಿನ 3710 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 192.19 ಕೋಟಿ ರೂ. ಮೊತ್ತದ ಐನಾಪೂರ ಏತ ನೀರಾವರಿ ಯೋಜನೆ ಕೈಗೊಳ್ಳಲು ಸಚಿವ ಗೋವಿಂದ ಕಾರಜೋಳ ಸಮ್ಮತಿ ವ್ಯಕ್ತಪಡಿಸಿದರು. ಇದಲ್ಲದೆ ಜಿಲ್ಲೆಯಲ್ಲಿ ಸೇಡಂ ತಾಲೂಕಿನ 1280 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ 60 ಕೋಟಿ ರೂ. ವೆಚ್ಚದ ಯಡ್ಡಳ್ಳಿ ಏತ ನೀರಾವರಿ ಯೋಜನೆ ಮತ್ತು 1870 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ 84 ಕೋಟಿ ರೂ. ವೆಚ್ಚದ ತೆರನಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರಿ ಆದೇಶ ಹೊರಡಿಸಿರುವುದರಿಂದ ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಂಸದ ಡಾ.ಉಮೇಶ ಜಾಧವ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ, ಶಶೀಲ ನಮೋಶಿ, ಸುನೀಲ್ ವಲ್ಯಾಪೂರೆ, ಕೃಷ್ಣಾ ಮೇಲ್ದಂಡೆ ಯೋಜನೆ (ಕಾಡಾ) ಭೀಮರಾಯನಗುಡಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶರಣಪ್ಪ ತಳವಾರ, ಕಲಬುರಗಿ ನೀರಾವರಿ ಯೋಜನೆಗಳ ವಲಯದ (ಕಾಡಾ) ಅಧ್ಯಕ್ಷ ಹರ್ಷವರ್ಧನ ಗು. ಗುಗಳ ಸೇರಿದಂತೆ ನೀರಾವರಿ ಯೋಜನೆಗಳ ಕಾರ್ಯನಿರ್ವಾಹಕ ಅಭಿಯಂತರರು ಇದ್ದರು.