ತುಮಕೂರು: ನಗರದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಮೀಪದಲ್ಲಿ ನೂತನವಾಗಿ ಆರಂಭಗೊಂಡಿರುವ ಕರುನಾಡ ಮಿತ್ರ ಫೌಂಡೇಷನ್ ಕಚೇರಿಯನ್ನು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಟೂಡಾ ಅಧ್ಯಕ್ಷ ಬಾವಿಕಟ್ಟೆ ಬಿ.ಎಸ್.ನಾಗೇಶ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಮಾಜಸೇವೆಯನ್ನು ಗುರಿಯಾಗಿಸಿಕೊಂಡು ಅನೇಕರು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ, ಅವರ ಸಾಲಿನಲ್ಲಿ ಟೂಡಾ ಸದಸ್ಯರಾದ ಜೆ.ಜಗದೀಶ್ ಅವರೂ ಸಹ ಹಲವಾರು ವರ್ಷ ಗಳಿಂದಲೂ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಜೊತೆಗೆ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಯುವಕರಿಗೆ ಉತ್ತೇಜನ ನೀಡುತ್ತಿದ್ದಾರೆ. ಈಗ ಕರುನಾಡಮಿತ್ರ ಫೌಂಡೇಷನ್ ಆರಂಭಿಸಿದ್ದು, ಇದರಡಿಯಲ್ಲಿ ಇವರ ಸೇವಾ ಕಾರ್ಯ ಮತ್ತಷ್ಟು ಮುಂದು ವರೆಯಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಯುವಕರಿಗೆ ಸ್ಪೂರ್ತಿಯಾಗಿರುವ ಜಗದೀಶ್ ಅವರು, ಸೇವಾ ಮನೋಭಾವದಿಂದ ಕರುನಾಡಮಿತ್ರ ಫೌಂಡೇಷನ್ ಆರಂಭಿಸಿದ್ದು, ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾವಿಕಟ್ಟೆ ಬಿ.ಎಸ್.ನಾಗೇಶ್ ಮಾತನಾಡಿ, ಹಲವಾರು ವರ್ಷಗಳಿಂದಲೂ ಜಗದೀಶ್ ಅವರ ಸೇವಾ ಮನೋಭಾವವನ್ನು ನೋಡಿದ್ದೇನೆ. ಟೂಡಾ ಸದಸ್ಯರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಇವರ ಸೇವಾ ಮನೋಭಾವನೆ ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಶುಭ ಹಾರೈಸಿದರು.
ಕರುನಾಡ ಮಿತ್ರ ಫೌಂಡೇಷನ್ ಅಧ್ಯಕ್ಷ ಹಾಗೂ ಟೂಡಾ ಸದಸ್ಯ ಜೆ.ಜಗದೀಶ್, ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡ ಬೇಕೆಂಬ ಉದ್ದೇಶದಿಂದ ಕರುನಾಡಮಿತ್ರ ಫೌಂಡೇಷನ್ ಅನ್ನು ಆರಂಭಿಸಿದ್ದೇನೆ ಎಂದರು.
ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಕ್ರೀಡೆಗೆ ಒತ್ತು ಕೊಟ್ಟು, ಜನರಿಗೆ ಉತ್ತೇಜನ ನೀಡಬೇಕು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಹಂಬಲವಿರುವುದರಿಂದ ಕರುನಾಡಮಿತ್ರ ಫೌಂಡೇಷನ್‌ನ್ನು ನೊಂದಾಯಿಸಿ ಕಚೇರಿ ಆರಂಭಿಸಿ ರುವುದಾಗಿ ತಿಳಿಸಿದರು.
ಈ ಹಿಂದೆ 16 ವರ್ಷಗಳಿಂದಲೂ ಸತತವಾಗಿ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್, ಕಬಡ್ಡಿ ಟೂರ್ನಮೆಂಟ್, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಅವರಿಗೆ ಬಹುಮಾನ ವಿತರಣೆ ಮಾಡುವಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ನಿರ್ಗತಿಕರಿಗೆ ಚಳಿಗಾಲದಲ್ಲಿ ಬೆಡ್ ಶೀಟ್, ಕೊರೋನ ಸಂದರ್ಭದಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ ಆಹಾರ ಕಿಟ್‌ಗಳನ್ನು ಕೊಡುವುದರ ಮೂಲಕ ಸಮಾಜ ಸೇವೆ ಮಾಡಿಕೊಂಡು ಬರಲಾಗಿದೆ ಎಂದರು.
ಇನ್ನು ಮುಂದೆ ಈ ಕರುನಾಡಮಿತ್ರ ಫೌಂಡೇಷನ್ ಅಡಿಯಲ್ಲಿ ಜನರಿಗೆ, ಕಡುಬಡವರಿಗೆ ಏನಾದರೂ ಸಹಾಯ ಮಾಡುವ ಉದ್ಧೇಶದಿಂದ ಫೌಂಡೇಷನ್ ಆರಂಭಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ನೇತಾಜಿ ಶ್ರೀಧರ್ ಕೆ., ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಟೂಡಾ ಸದಸ್ಯರಾದ ಪ್ರತಾಪ್ ಕುಮಾರ್, ಹನುಮಂತಪ್ಪ, ನೇತ್ರತಜ್ಞರಾದ ಡಾ.ರಾಜಣ್ಣ, ರುದ್ರೇಶ್, ಕೆ.ವೇದಮೂರ್ತಿ, ಚಂದನ್, ಸುವರ್ಣ ಜಗದೀಶ್, ಗ್ರಾಪಂ ಅಧ್ಯಕ್ಷ ಚಂದ್ರು, ಮಾಜಿ ಅಧ್ಯಕ್ಷ ಬೋರಣ್ಣ, ಈ.ಟಿ.ನಾಗರಾಜು, ಚಂದ್ರಬಾಬು, ಮಂಜುನಾಥ್, ಗೋವಿಂದರಾಜು, ಎಂ.ಗೋಪಿ, ಶಬ್ಬೀರ್ ಅಹಮದ್ ಸೇರಿದಂತೆ ಅನೇಕರು ಹಾಜರಿದ್ದು ಶುಭ ಹಾರೈಸಿದರು.