Wednesday, 18th September 2024

ಕಾಂಗ್ರೆಸ್‌ ಪಕ್ಷಕ್ಕೆ ಕೆ.ಜಯಪ್ರಕಾಶ್‌ ಹೆಗ್ಡೆ ಸೇರ್ಪಡೆ ಇಂದು

ಉಡುಪಿ: ಗೋಬ್ಯಾಕ್‌ ಅಭಿಯಾನದ ನಡುವೆಯೇ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಮಂಗಳವಾರ ಕಾಂಗ್ರೆಸ್‌ ಪಕ್ಷವನ್ನು ಸೇರಲಿದ್ದಾರೆ.

ಆರಂಭದಲ್ಲಿ ಪಕ್ಷೇತರರಾಗಿ, ನಂತರ ಜನತಾದಳದಲ್ಲಿ ಗುರುತಿಸಿಕೊಂಡು ಮುಂದೆ ಕಾಂಗ್ರೆಸ್‌ ಸೇರಿ, 2017ರಲ್ಲಿ ಬಿಜೆಪಿಯ ಜತೆ ಕೈಜೋಡಿಸಿದ್ದ ಜಯ ಪ್ರಕಾಶ್‌ ಹೆಗ್ಡೆ ಅವರ ಘರ್‌ ವಾಪ್ಸಿ ಕಾರ್ಯಕ್ರಮ ಮಂಗಳವಾರ ಸಂಜೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಅವರು ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ. ಈ ನಡುವೆ ಕರಾವಳಿ ಅಭಿವೃದ್ಧಿಯ ಗುರಿ ಸಾಧನೆಗೆ ಕಾಂಗ್ರೆಸ್ ಸೇರುತ್ತಿರುವುದಾಗಿ ಜಯಪ್ರಕಾಶ್‌ ಹೆಗ್ಡೆ ದೃಢಪಡಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಾತಿಗಣತಿ ವರದಿ ಸಲ್ಲಿಸಿರುವ ಜಯಪ್ರಕಾಶ್‌ ಹೆಗ್ಡೆ ಅವರನ್ನು ಮರಳಿ ಕಾಂಗ್ರೆಸ್‌ ತೆಕ್ಕೆಗೆ ಸೆಳೆಯಲು ಹಿಂದಿನಿಂದಲೇ ಭಾರಿ ಪ್ರಯತ್ನಗಳು ನಡೆಯುತ್ತಿದ್ದವು. ಅವರಿಗೆ ಟಿಕೆಟ್‌ ನೀಡಬಾರದು, ಆಗಾಗ ಪಕ್ಷ ಬದಲಿಸುವ ಹೆಗ್ಡೆಯವರಿಗಿಂತ ಪಕ್ಷ ನಿಷ್ಠೆಯಿಂದ ದುಡಿಯುವ ಸುಧೀರ್‌ ಕುಮಾರ್‌ ಮುರೊಳ್ಳಿ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಆಗ್ರಹ ಕ್ಷೇತ್ರದಲ್ಲಿ ಜೋರಾಗಿದೆ. 

ಕೊರ್ಗಿ ಜಯಪ್ರಕಾಶ್‌ ಹೆಗ್ಡೆ ಅವರು ಒಂದು ರೀತಿಯಲ್ಲಿ ಪಕ್ಷಾತೀತ ನಾಯಕ. ಅವರು ಪಕ್ಷೇತರರಾಗಿಯೂ ಗೆಲ್ಲಬಲ್ಲ ತಾಕತ್ತನ್ನು ತೋರಿಸಿದವರು. ಜನತಾದಳ, ಕಾಂಗ್ರೆಸ್‌, ಬಿಜೆಪಿ ಎಲ್ಲ ಪಕ್ಷಗಳಲ್ಲೂ ಸೇವೆ ಸಲ್ಲಿಸಿದವರು.

Leave a Reply

Your email address will not be published. Required fields are marked *