ತುಮಕೂರು: ಜ್ಞಾನವೆಂಬುದು ಬೇರೆಯವರು ಕದಿಯಲಾಗದ ಸಂಪತ್ತು. ಹಣ ಒಮ್ಮೆ ಬರಬಹುದು, ಹೋಗಲುಬಹುದು. ಆದರೆ ಜ್ಞಾನ ಒಮ್ಮೆ ನಿಮ್ಮೊಳಗೆ ಬಂದರೆ ಅದು ನಿರಂತರ ವೃದ್ದಿಯಾಗುತ್ತದೆ, ಹಾಗಾಗಿ ನೀವು ಜ್ಞಾನವಂತರಾಗಲು ಹೆಚ್ಚಿನ ಗಮನ ನೀಡಿ, ನಂತರ ಸಂಪತ್ತು ನಿಮ್ಮನ್ನು ತಾನಾಗಿಯೇ ಹಿಂಬಾಲಿಸುತ್ತದೆ ಎಂದು ಮೈಸೂರು ವಿವಿ ಅರ್ಥಶಾಸ್ತ್ರ ಆಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಶಿವಚಿತ್ತಯ್ಯ ಅಭಿಪ್ರಾಯಪಟ್ಟರು.
ನಗರದ ಶ್ರೀಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜುವತಿಯಿಂದ ಹಮ್ಮಿಕೊಂಡಿದ್ದ ಸ್ಪೂರ್ತಿ ಎನ್.ಎಸ್.ಎಸ್,ಯುವ ರೆಡ್‌ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ನಿಮ್ಮ ಗುರಿ ಏನೇ ಇರಲಿ. ಅದಕ್ಕೆ ತಕ್ಕದಾದ ಜ್ಞಾನವನ್ನು ಸಂಪಾದಿಸಿ,ಆಗ ಮಾತ್ರ ಸಮಾಜದಲ್ಲಿ ನಿಮಗೆ ಗೌರವ ದೊರೆಯುತ್ತದೆ ಎಂದರು.
ಜಾನಪದ ಕಲಾವಿದರಾದ ಅಮ್ಮ ರಾಮಚಂದ್ರಪ್ಪ ಮಾತನಾಡಿ,ನಾನು ಕ್ರಮಬದ್ದ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿಲ್ಲ. ಆದರೂ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿದ್ದೇನೆ.ಇದು ಸಂಗೀತಕ್ಕೆ ಇರುವ ಶಕ್ತಿ,ಕಡು ಬಡತನದಲ್ಲಿಯೇ ಹುಟ್ಟಿ, ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಿನ ನನ್ನನ್ನು ಇದುವರೆಗೂ ಸಾಕಿ,ಸಲಹಿರುವುದು ಈ ಜನಪದ ಸಂಗೀತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ದಕ್ಷಿಣ ಮೂರ್ತಿ ಮಾತನಾಡಿ,ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ.ಶೀಲ.ಕೆ.ಪಿ, ದಿವ್ಯ, ಪಾವನ, ಶ್ವೇತ.ಸಿ.ಎಸ್. ಮತ್ತಿತರರು ಪಾಲ್ಗೊಂಡಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.