Sunday, 15th December 2024

ಅಹಿಂದ ವರ್ಗಗಳು ರಾಜಕೀಯಕ್ಕಾಗಿ ಒಗ್ಗೂಡಬೇಕಿದೆ: ಮಾಜಿ ಶಾಸಕ ಕೆ.ಎನ್.ರಾಜಣ್ಣ

ತುಮಕೂರು: ಜಿಲ್ಲೆಯ ಅಹಿಂದ ವರ್ಗಗಳ ಮತದಾರರ ಸಂಖ್ಯೆ ಹೆಚ್ಚಿದ್ದರು ರಾಜಕೀಯ ಅಧಿಕಾರ ಪಡೆಯುವಲ್ಲಿ ವಿಫಲರಾ ಗಿದ್ದೇವೆ.ರಾಜಕೀಯ ಅಧಿಕಾರಕ್ಕಾಗಿ ತಳ ಸಮುದಾಯಗಳು ಒಗ್ಗೂಡುವ ಅಗತ್ಯವಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಬಾಲಭವನದಲ್ಲಿ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದವತಿ ಯಿಂದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾ ರಂಭ ಉದ್ಘಾಟಿಸಿ ಮಾತನಾಡುತಿದ್ದ ಅವರು, ಮುಂದುವರೆದ ಸಮಾಜಗಳು ಅವರಲ್ಲಿ ಆತಂರಿಕವಾಗಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ರಾಜಕೀಯ ಅಧಿಕಾರ ಸಿಗುವಂತಹ ಸಂದರ್ಭದಲ್ಲಿ ಒಂದಾಗಿ ತಮ್ಮ ಹಕ್ಕು ಪ್ರತಿಪಾದಿಸುತ್ತಾರೆ. ನಾವುಗಳು ಅವರ ರೀತಿ ಯಲ್ಲಿಯೇ ರಾಜಕೀಯ ಅಧಿಕಾರದ ಅವಕಾಶವಿದ್ದಾಗ ಬಿನ್ನಮತ ಮರೆತು ಒಗ್ಗೂಡಬೇಕಿದೆ ಎಂದರು.
ದೇಶದಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಎಲ್ಲ ವರ್ಗದ ಜನರಿಗೆ ಅವರ ಯೋಗ್ಯತೆಯ ಆಧಾರದ ಮೇಲೆ ಅಧಿಕಾರ ನೀಡಿರುವ ಪಕ್ಷವೆನ್ನಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ.ಒರ್ವ ಶಾಸಕರ ಪರ ಮಾತನಾಡಲು ಮತ್ತೊಬ್ಬ ಶಾಸಕರಿಲ್ಲದ ಅತ್ಯಂತ ಸಣ್ಣ ಸಣ್ಣ ಜಾತಿಗಳನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡಿದೆ ಎಂದರು.
ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ, ಅದರಲ್ಲಿಯೂ ದೇವರಾಜು ಅರಸು ಅವರು ಸಿ.ಎಂ.ಆಗಿದ್ದಾಗ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆಯಿಂದ ಮಡಿಕೇರಿಯಿಂದ ಗೋವಾ ವರೆಗಿನ ಕರಾವಳಿ ಪ್ರದೇಶದ ಅನೇಕ ಹಿಂದುಳಿದ ಸಮುದಾಯಗಳು, ಗೇಣಿ ಕಾಯ್ದೆ ಅಡಿಯಲ್ಲಿ ಸ್ವಂತ ಭೂಮಿ ಹೊಂದುವಂತಾಯಿತು ಎಂದು ನುಡಿದರು.
ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ ಮಾತನಾಡಿ, ಮಲ್ಲಣ್ಣನವರಿಂದ ಇಂದಿನ ಚಂದ್ರಶೇಖರಗೌಡರವರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಎಲ್ಲರೂ ರಾಜಕೀಯವಾಗಿ ಬೆಳೆದವರೇ ಆಗಿದ್ದಾರೆ.ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಚಂದ್ರಶೇಖರಗೌಡ ಸಮಾಜ ಕಟ್ಟುವ ಜತೆಗೆ ಪಕ್ಷ ಸಂಘಟನೆಯತ್ತಲೂ ತೊಡಗುವ ಅಗತ್ಯವಿದೆ ಎಂದು ಕರೆ ನೀಡಿದರು.
ರೆಡ್‌ಕಾಸ್ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ನಾಗಣ್ಣ ಮಾತನಾಡಿ, ಗುರುವಾರ ಪ್ರಕಟಗೊಂಡಿರುವ ಗುಜರಾತ್ ಮತ್ತು ಹಿಮಾಚಲಪ್ರದೇಶ ಚುನಾವಣೆ ಹಿಂದುಳಿದ ವರ್ಗಗಳಿಗೆ ಒಂದು ಎಚ್ಚರಿಕೆ ಗಂಟೆಯಾಗಿದೆ. ಒಗ್ಗೂಡದಿದ್ದರೆ ಉಳಿಗಾಲವಿಲ್ಲ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಪಕ್ಷದ ನನ್ನನ್ನು ಗುರುತಿಸಿ, ಜಿಲ್ಲಾಧ್ಯಕ್ಷ ಹುದ್ದೆ ನೀಡಿದೆ. ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ,ಟಿ.ಬಿ.ಜಯಚಂದ್ರ ಸೇರಿದಂತೆ ಎಲ್ಲಾ ನಾಯಕರು ನನ್ನಗೆ ಬೆಂಬಲವಾಗಿ ನಿಂತಿದ್ದಾರೆ ಎಂದರು
 ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ನಮ್ಮ ಒಕ್ಕೂಟ ಸಮುದಾಯದ ಶೈಕ್ಷಣಿಕ,ಸಾಮಾಜಿ, ಅರ್ಥಿಕ ಮತ್ತು ರಾಜಕೀಯ ಬೆಳವಣಿಗೆಗೆ ಸಹಕಾರ ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾತ್ಯತೀತ ಮಾನವ ವೇದಿಕೆಯ ಅಧ್ಯಕ್ಷ ಟಿ.ಆರ್.ಆಂಜನಪ್ಪ, ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸಮೂರ್ತಿ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣ ಮುದ್ದಯ್ಯ, ಹಿಂದುಳಿದ ವರ್ಗಗಳ ಒಕ್ಕೂಟ್ದ ಕಾರ್ಯಾಧ್ಯಕ್ಷ ಪಿ.ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಪ್ರೆಸ್ ರಾಜಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಾಂತಕುಮಾರ್,ಟಿ.ಎನ್.ಮಧುಕರ್,ಸುವರ್ಣಮ್ಮ, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಶಶಿಹುಲಿ ಕುಂಟೆ ಮಠ್, ವೈ.ಎನ್.ನಾಗರಾಜು, ಹೆಚ್.ಆರ್.ಹನುಮಂತರಾಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.