Saturday, 14th December 2024

ಕೆ ಎನ್ ರಾಜಣ್ಣನವರಿಗೆ ಶುಭ ಕೋರಿಕೆ

ಗುಬ್ಬಿ: ನೂತನ ಸಚಿವ ಸಂಪುಟಕ್ಕೆ ಆಯ್ಕೆಯಾದ ಕೆ ಎನ್ ರಾಜಣ್ಣನವರಿಗೆ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಶುಭ ಕೋರಲಾಯಿತು.

ನಂತರ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಗೌರವಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ತಾಲೂಕಿನಲ್ಲಿ ಎಸ್ ಆರ್ ಶ್ರೀನಿವಾಸ್ ರವರ ಗೆಲುವಿಗೆ ಎಸ್ಸಿ ಎಸ್ಟಿ ಸಮುದಾಯ ಬೆನ್ನುಲುಬಾಗಿ ಶ್ರಮಿಸಿದೆ. ಜಿಲ್ಲೆಯ ಪ್ರಭಾವಿ ರಾಜಕಾರಣಿಯಾದ ಕೆ ಎನ್ ರಾಜಣ್ಣನವರಿಗೆ ಸಚಿವ ಸ್ಥಾನ ನೀಡಿರುವುದು ಸಂತೋಷದ ವಿಷಯವಾಗಿದ್ದು ತಳಸಮುದಾಯದ ಏಳಿಗೆಗೆ ಪೂರಕವಾಗಲಿದೆ. ದ್ವೇಷ ಅಸೂಯೆಯನ್ನು ಮರೆತು ಎಲ್ಲರೂ ಒಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ ಎಚ್ ಜಗನ್ನಾಥ್ ಮಾತನಾಡಿ ಹಿರಿಯ ಹಾಗೂ ಅನುಭವಿ ರಾಜಕಾರಣಿ ಯಾದ ಕೆ ಎನ್ ರಾಜಣ್ಣನವರು ಹುಟ್ಟು ಹೋರಾಟಗಾರರಾಗಿದ್ದು ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದಾರೆ. ಜಿಲ್ಲೆಯಲ್ಲಿ ಡಾ ಜಿ ಪರಮೇಶ್ವರ್ ಮತ್ತು ಕೆಎನ್ ರಾಜಣ್ಣನವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಎಸ್ ಆರ್ ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ತಾಲೂಕಿನ ಜನತೆಯ ಮಹಾದಾಸೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಜಿ ಎನ್ ಅಡವಿ ಸ್ವಾಮಿ, ಕಾರ್ಯದರ್ಶಿ ಹೆಚ್ಆರ್ ರಾಮಚಂದ್ರಪ್ಪ,ಕಾಂಗ್ರೆಸ್ ಮುಖಂಡ ಮಂಜಣ್ಣ, ದ ಸಂ ಸ ಉಸ್ತುವಾರಿ ಸಂಚಾಲಕ ಅದಲಗೆರೆ ಈಶ್ವರಯ್ಯ,ಹೇರೂರು ನಾಗಣ್ಣ, ಬಸವರಾಜು, ಹಾಗಲವಾಡಿ ವಿಜಯಕುಮಾರ್, ಜಿ ಎಲ್ ರಂಗನಾಥ್, ಮುಂತಾದವರಿದ್ದರು.