Thursday, 12th December 2024

ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ

ಕೊಡಗು: ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪದ ಕಾವಾಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿಯಾಗಿದೆ.

ಕೇರಳದ‌ ಎರ್ಣಾಕೊಳಂನಿಂದ ಹಾಸನಕ್ಕೆ ಬರುವಾಗ ಕೆಎಸ್‌ಆರ್‌ಟಿಸಿ ಬಸ್‌ ಮಗುಚಿಬಿದ್ದಿದೆ.

50 ಜನ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದಾಗ, ನಸುಕಿನ ಜಾವ 3:45ರ ಸುಮಾರಿಗೆ ಕಾವಾಡಿ ಸಮೀಪ ಚಾಲಕ ತಿರುವು ತೆಗೆದುಕೊಳ್ಳುತ್ತಿದ್ದಾಗ ನಿಯಂತ್ರಣ ಸಿಗದೆ ಪಲ್ಟಿ ಹೊಡೆದಿದೆ. ನಿದ್ದೆ ಮಂಪರಿನಲ್ಲಿದ್ದ ಪ್ರಯಾಣಿಕರೆಲ್ಲರೂ ಬಸ್‌ ಪಲ್ಟಿ ಆಗುತ್ತಿದ್ದಂತೆ ಭಯಗೊಂಡಿದ್ದಾರೆ.

ಕೂಡಲೇ ಸ್ಥಳೀಯರ ನೆರವಿನಿಂದ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ವಿರಾಜಪೇಟೆ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಲ್ಟಿ ಹೊಡೆದ ಬಸ್‌ನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯಿತು.