Thursday, 12th December 2024

ಕೊಳಚೆ ನಿರ್ಮೂಲನ ಮಂಡಳಿಗೆ 433 ಕೋಟಿ ಮಂಜೂರು: ಕಾರ್ಮಿಕರು ವಿರೋಧ

ತುಮಕೂರು: ಕಟ್ಟಡ ಕಾರ್ಮಿಕರ ಶ್ರಮದ ಹಣವನ್ನು 433 ಕೋಟಿ ಹಣವನ್ನು ಕೊಳಚೆ ನಿರ್ಮೂಲನ ಮಂಡಳಿಗೆ ನೀಡುವ ಸರ್ಕಾರದ ಕ್ರಮ ಈ ಕೂಡಲೇ ವಾಪಸ್ ಆಗಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಖಜಾಂಚಿ ಅಶ್ವತ್ಥ್ ನಾರಾಯಣ ಆಗ್ರಹಿಸಿದರು.

ವಿವಿಧ ಬೇಡಿಕೆಗಳ ಈಡೇರಿಗೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎಐಟಿಯುಸಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕರ ತಮ್ಮ ದುಡಿಮೆಯ ಪಾಲಿನಲ್ಲಿ ಉಳಿಸಿದ ಸೆಸ್‌ಹಣವನ್ನು ಅನಗತ್ಯವಾಗಿ ಖರ್ಚುಮಾಡಲು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಬಳಸಿಕೊಂಡು ಅನಗತ್ಯವಾಗಿ ಖರ್ಚುಮಾಡಲು ಹೊರಟಿ ರುವ ಕ್ರಮ ಖಂಡನೀಯ ಕಟ್ಟಡ ಕಾರ್ಮಿಕರ ಫಲಾನುಭವಿಗಳಿಗೆ ನೀಡಬೇಕಾದ ಶೈಕ್ಷಣಿಕ ಸಹಾಯ ಧನ, ವೈದ್ಯಕೀಯ ಸಹಾಯಧನ ಸೇರಿದಂತೆ ಹಲವು ಸವಲತ್ತುಗಳಿಗೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ ಬದಲಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಕೊಳಚೆ ನಿರ್ಮೂಲನಾ ಮಂಡಳಿಗೆ 433 ಕೋಟಿ ಹಣ ಮಂಜೂರು ಮಾಡಿರುವುದು ಕಟ್ಟಡ ಕಾರ್ಮಿಕರ ಸವಲತ್ತು ಗಳಿಗೆ ಕೈಹಾಕಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಕಂಬೇಗೌಡ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕಳಪೆಗುಣಮಟ್ಟದ ಕಿಟ್‌ಗಳನ್ನು ನೀಡಿರುವ ಮಂಡಳಿಯು ನೂರಾರುಕೋಟಿ ಅವ್ಯವಹಾರ ನಡೆದಿರುವುದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ರಾಜ್ಯ ಸರಕಾರದ ಸಂಜೀವಿನಿ ಅಥವಾ ಇಎಸ್‌ಐ ನಗದು ರಹಿತ ಯೋಜನೆಯನ್ನು ಜಾರಿಗೊಳಿಸಬೇಕು ಎಂದರು.

ರಾಜ್ಯ ಸಮಿತಿ ಸದಸ್ಯ ದೇವರಾಜು ಮಾತನಾಡಿ, ಕಟ್ಟಡ ಕಾರ್ಮಿಕರ ಸವಲತ್ತುಗಳಿಗಾಗಿ ರಾಜ್ಯದ್ಯಂತ 62 ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿದೆ ಇದುವರೆಗೂ ಸಲ್ಲಿಸಿರುವ ಅರ್ಜಿಗಳಿಗೆ ಸವಲತ್ತುಗಳನ್ನು ನೀಡಲಾಗದ ಮಂಡಳಿ ಬೇರೆ ಬೇರೆ ಇಲಾಖೆಗಳಿಗೆ ಹಣ ನೀಡಲು ಮುಂದಾಗಿರುವುದು ಕಾರ್ಮಿಕ ವಿರೋಧಿಯಾಗಿದೆ ಎಂದರು. ಕಲ್ಯಾಣ ಮಂಡಳಿಯಲ್ಲಿ ರಾಜಕೀಯ ಪ್ರೇರಿತವಾದ ಪ್ರಾತಿನಿಧ್ಯ ನೀಡಲಾಗುತ್ತಿದ್ದು ನೈಜ ಕಾರ್ಮಿಕ ಸಂಘಗಳಿಗೆ ಪ್ರಾನಿನಿಧ್ಯ ನೀಡಬೇಕು, ಕಟ್ಟಡ ಕಾರ್ಮಿಕರಲ್ಲದವರಿಗೂ ಕಟ್ಟಡ ಕಾರ್ಮಿಕರ ಕಾರ್ಡ್ ನೀಡಲಾಗುತ್ತಿದ್ದು ಅದನ್ನು ತಡೆಯಬೇಕು ಎಂದರು

ರಾಜ್ಯ ಸಮಿತಿ ಸದಸ್ಯರಾದ ನಾಗರತ್ನಮ್ಮ, ಜಿಲ್ಲಾ ಮುಖಂಡರುಗಳಾದ ಚಂದ್ರಶೇಖರ್ ಜಿ, ಈರದಾಸಣ್ಣ, ಗೋವಿಂದರಾಜು, ಲತಾಮಣಿ, ಗೋವಿಂದರಾಜು, ದೊಡ್ಡತಿಮ್ಮಯ್ಯ, ಕೃಷ್ಣಕುಮಾರಿ, ತಾಯಮ್ಮ, ಚಂದ್ರಶೇಖರ್‌ಡಿ.ಎಲ್ ಶ್ರೀನಿವಾಸ, ವಸಂತ ರಾಜು, ಗುರುಸಿದ್ದಪ್ಪ ಕುಪ್ಪೂರು ವೆಂಕಟೇಶ್, ಶಿವಾನಂದ, ಪುನಿತ್, ಶ್ರೀನಿವಾಸ್ ಪ್ರತಿಭಟನೆಯಲ್ಲಿ ಮಾತನಾಡಿದರು.