ಬಾಗೇಪಲ್ಲಿ: ಆಸ್ತಿ, ಹಣ, ಐಶ್ವರ್ಯ ಏನೂ ಬೇಡ ಜೀವ ಉಳಿದರೆ ಸಾಕು ಎನ್ನುವಂತಹ ಪ್ರಾಣಾಪಾಯ ಸ್ಥಿತಿಯಲ್ಲಿ ಜೀವದ ಹಂಗನ್ನು ಲೆಕ್ಕಿಸದೆ ರಾಜ್ಯದ ಆರು ಕೋಟಿ ಜನತೆಗೆ ಉಚಿತ ಕೋವಿಡ್ ಲಸಿಕೆ ಕೊಟ್ಟು ಪ್ರಾಣ ಉಳಿಸಿರುವ ಅಂದಿನ ಸಚಿವ ಡಾ.ಕೆ.ಸುಧಾಕರ್ ಬಗ್ಗೆ ಕಾಂಗ್ರೆಸ್ಸಿನ ಕೆಲ ಮಂತ್ರಿಗಳು ಮೂರ್ಖತನದ ಹೇಳಿಕೆ ನೀಡುತ್ತಿರುವುದು ಖಂಡಿನೀಯ ಎಂದು ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರು ಹಾಗೂ ಬಿಜೆಪಿ ಮುಖಂಡ ಟಿ.ಕೋನಪರೆಡ್ಡಿ ಕಾಂಗ್ರೆಸ್ಸಿಗರ ವಿರುದ್ದ ಗುಡುಗಿದರು.
ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿರುವ ಗಡಿದಂ ಶ್ರೀ ವೇದಮಾತ ಗಾಯತ್ರಿ ಭವನದಲ್ಲಿ ಸೋಮವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೂತನ ಸಂಸದ ಡಾ.ಕೆ.ಸುಧಾಕರ್ ಅವರ ಅಭಿನಂದನಾ ಸಮಾರಂಭ ಕುರಿತು ಏರ್ಪಡಿಸಿದ್ದ ಮೈತ್ರಿ ಪಕ್ಷದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಮುಡಾ ನಿವೇಶನ, ವಾಲ್ಮೀಕಿ ನಿಗಮ, ಎಸ್‌ಟಿಪಿ, ಟಿಎಸ್‌ಪಿ ಯೋಜನೆ ಅನುದಾನ ದುರ್ಬಳಕೆ, ಅಂಬೇಡ್ಕರ್ ನಿಗಮಗಳಲ್ಲಿ ನಡೆದಿರುವ ಹಗರಣಗಳನ್ನು ಮುಚ್ಚಿಹಾಕಿಕೊಳ್ಳುವ ದುರುದ್ಧೇಶದಿಂದಲೇ ಸಂಸದ ಡಾ.ಕೆ.ಸುಧಾಕರ್ ವಿರುದ್ದ ಕಾಂಗ್ರೆಸ್ಸಿನ ಕೆಲ ಮಂತ್ರಿಗಳು ಮೂರ್ಖತನ ಹೇಳಿಕೆಗಳು ನೀಡುತ್ತಿದ್ದಾರೆ. ಅಂದಿನ ಬಿಜೆಪಿ ಸರ್ಕಾರದ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಹಾಗೂ ಕುಟುಂಬ ಸದಸ್ಯರು ಕೋವಿಡ್ ಸೋಂಕಿಗೆ ಗುರಿಯಾಗಿದ್ದ ವೇಳೆಯಲ್ಲಿ ಪ್ರಾಣದ ಹಂಗನ್ನು ತೊರೆದು ರಾಜ್ಯ ಸಂಚಾರ ಮಾಡಿ ಜನತೆಗೆ ಉಚಿತ ಚಿಕಿತ್ಸೆಯ ಜೊತೆಗೆ ಎರಡು ಬಾರಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ವಿತರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಒಂದೂವರೆ ವರ್ಷದ ಅವಧಿಯಲ್ಲಿ ಆಗಿರುವ ಹಲವು ಹಗರಣ ಗಳನ್ನು ಮುಚ್ಚಿ ಹಾಕಿಕೊಳ್ಳಲು ಮೂರು ವರ್ಷಗಳ ಹಿಂದಿನ ಬಿಜೆಪಿ ಸರ್ಕಾರದ ಜನಪರ ಯೋಜನೆಗಳಲ್ಲಿ ಅಕ್ರಮ ನಡೆದಿದೆ ಎನ್ನುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ತನಿಖೆ ನಡೆಸುತ್ತಿರುವುದು ಮೂರ್ಖತನದ ತೀರ್ಮಾನ ಆಗಿದೆ. ತನ್ನ ಕಳ್ಳತನ, ಹಗರಣಗಳನ್ನು ಮುಚ್ಚಿಹಾಕೊಳ್ಳುವ ಪ್ರಯತ್ನದಲ್ಲಿ ಸಂಸದ ಡಾ.ಕೆ.ಸುಧಾಕರ್ ವಿರುದ್ದ ಕಾಂಗ್ರೆಸ್ಸಿ ಗರು ಮಾಡುತ್ತಿರುವ ಅಪಪ್ರಚಾರದ ಹೇಳಿಕೆಗಳಿಗೆ ರಾಜ್ಯದ ಜನತೆ ಮನ್ನಣೆ ನೀಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಸಚಿವರ ವಿರುದ್ದ ಹರಿಹಾಯ್ದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಹರಿನಾಥರೆಡ್ಡಿ ಮಾತನಾಡಿ, ಬಾಗೇಪಲ್ಲಿ ಪಟ್ಟಣದ ಟಿ.ಬಿ.ಕ್ರಾಸ್‌ನಲ್ಲಿರುವ ಸೂರ್ಯ ಕನ್ವಷನ್ ಹಾಲ್‌ನಲ್ಲಿ ಸೆ.11 ರಂದು ಮಧ್ಯಾಹ್ನ 12 ಗಂಟೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಜಿಲ್ಲೆಯ ಅಭಿವೃದ್ದಿಯ ಹರಿಹಾರ ಡಾ.ಕೆ.ಸುಧಾಕರ್‌ಗೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮತದಾರರ ಪರವಾಗಿ ಅಭಿನಂದನಾ ಸಮಾರಂಭವನ್ನು ಅಯೋಜಿಸಲಾಗಿದ್ದು, ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲೂಕು ಗಳ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಸೊಸೈಟಿ ಅಧ್ಯಕ್ಷ ಜೆ.ಪಿ.ರೆಡ್ಡಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಎಸ್.ಆರ್.ಲಕ್ಷ್ಮೀನಾರಾಯಣ, ಮುಖಂಡರಾದ ಕೆ.ಟಿ.ವೀರಾಂಜನೇಯ, ಡಾ.ಎಂ.ಎನ್.ರಾಜಾರೆಡ್ಡಿ, ಚೌಡರೆಡ್ಡಿ, ಎಸ್.ವೈ.ವೆಂಕಟರಮಣಾರೆಡ್ಡಿ, ಜಿ.ವಿ.ಕೃಷ್ಣಾರೆಡ್ಡಿ, ಜಿ.ಎಸ್.ಸುಧಾಕರರೆಡ್ಡಿ, ಗೋಪಾಲ, ಆ.ನ.ಮೂರ್ತಿ, ಎಸ್.ಟಿ.ಚಂದ್ರಮೋಹನ್‌ಬಾಬು, ವೆಂಕಟೇಶ್, ಎಲ್.ಬಾಸ್ಕರ್, ಶ್ರೀನಿವಾಸರೆಡ್ಡಿ, ಕೆ.ಆರ್.ಅಂಜಿನಪ್ಪ, ಕೆ.ಎಸ್.ಸೋಮಶೇಖರರೆಡ್ಡಿ, ಛಲವಾಧಿ ರಮೇಶ್, ನಿರ್ಮಲಮ್ಮ, ವಿನೋದ್ ಮತ್ತಿತರರು ಇದ್ದರು.