Sunday, 15th December 2024

ಸಿದ್ದು ರಾಜಕೀಯ ಬಿಟ್ಟು ಜ್ಯೋತಿಷ್ಯ ಹೇಳಲಿ

ಕೊಪ್ಪಳ: ಸಿದ್ದರಾಮಯ್ಯ ರಾಜಕೀಯ ಬಿಟ್ಟು ಜ್ಯೋತಿಷ್ಯ ಹೇಳುವುದು ಒಳ್ಳೆಯದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.

ತಾಲೂಕಿನ ಹಲಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೊಸ ಉದ್ಯೋಗ ಹುಡುಕಿ ಕೊಳ್ಳುತ್ತಿದ್ದಾರೆ ಎಂದರು. ನರೇಂದ್ರ ಮೋದಿ ಅವರಪ್ಪರಾಣೆ ಪ್ರಧಾನಿ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿ ದಿದ್ದರು. ಆದರೆ, ಮೋದಿಯವರು ಎರಡು ಬಾರಿ ಪ್ರಧಾನಿಯಾದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಆದ್ದರಿಂದ, ಸಿದ್ದರಾಮಯ್ಯ ಅವರ ಭವಿಷ್ಯ ಪದೇ ಪದೇ ಸುಳ್ಳಾಗುತ್ತದೆ‌. ಮುಂಬರುವ ಚುನಾವಣೆ ಬಳಿಕ ಸಿದ್ದರಾಮಯ್ಯ ನಿರುದ್ಯೋಗಿ ಅಗಲಿದ್ದಾರೆ. ಈಗಿನಿಂದಲೇ ಹೊಸ ಉದ್ಯೋಗ ಹುಡುಕಿಕೊಳ್ಳುತ್ತಿದ್ದಾರೆ ಎಂದರು.

ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅವರನ್ನು ಸೋಲಿಸುತ್ತೇವೆ. ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಸಿದ್ದರಾಮಯ್ಯ ಅವರಿಗೆ ಒಂದು ಕ್ಷೇತ್ರ ಇಲ್ಲದಿರುವುದು ದುರಂತ ಎಂದು ಟೀಕಿಸಿದರು.

ರಾಜ್ಯದಲ್ಲಿ ಪೇಜ್ ಪ್ರಮುಖ್ ಎಂಬ ವಿನೂತನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನಸಾಮಾನ್ಯರ ದೃಷ್ಟಿಯಿಂದ ರಾಜ್ಯ ಸರ್ಕಾರ ಅತ್ಯುತ್ತಮ ಕೆಲಸ ಮಾಡುತ್ತಿದೆ. ಆದ್ದರಿಂದ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ನಳೀನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಆನಂದ್ ಸಿಂಗ್, ಹಾಲಪ್ಪ ಆಚಾರ, ಸಂಸದ ಸಂಗಣ್ಣ ಕರಡಿ ಇದ್ದರು.