Sunday, 15th December 2024

ಬಂಡಾಯ ಅಭ್ಯರ್ಥಿಯಾಗಿ ಸಂಗಣ್ಣ ಸ್ಪರ್ಧೆ?

-ಬೆಂಬಲಿಗರ ಸಭೆ ಬಳಿಕ ಘೋಷಣೆ ಸಾಧ್ಯತೆ?
– ಮಾ.21ರಂದು ಬೆಂಬಲಿಗರ ಸಭೆ ಆಯೋಜನೆ

ಕೊಪ್ಪಳ: ಕರ್ನಾಟಕದ ರಾಜಕಾರಣ ಬಿಜೆಪಿ ವರಿಷ್ಠರಿಗೆ ಅರ್ಥ ಆಗುತ್ತಿಲ್ಲವೋ? ಅಥವಾ ಇಲ್ಲಿನ ನಾಯಕರಲ್ಲಿನ ಸಮನ್ವಯತೆ ಕೊರತೆಯೋ? ಗೊತ್ತಿಲ್ಲ. ಬಿಜೆಪಿಯಲ್ಲಿ ಬಂಡಾಯದ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೊಪ್ಪಳದಲ್ಲಿಯೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟುವುದು ಬಹುತೇಕ ಖಚಿತವಾಗಿದೆ.

ಕಳೆದ ಎರಡು‌ ಅವಧಿಯಲ್ಲಿ ಸಂಗಣ್ಣ ಕರಡಿ ಸಂಸದರಾಗಿ ಕೆಲಸ ಮಾಡಿದ್ದಾರೆ. ಆದರೆ, ಹೈಕಮಾಂಡ್ ಈ ಬಾರಿ ಸಂಗಣ್ಣ ಕರಡಿಗೆ ಟಿಕೆಟ್ ನಿರಾಕರಿಸಿ, ವೈದ್ಯ ಡಾ.ಬಸವರಾಜ ಕ್ಯಾವಟರ್ ಹೆಸರು ಘೋಷಿಸಿದೆ. ಈ ಹಿನ್ನೆಲೆ ಹಾಲಿ ಸಂಸದ ಸಂಗಣ್ಣ ಕರಡಿ, ಈ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಟಿಕೆಟ್ ‌ಕೈ ತಪ್ಪಿದ ಹಿನ್ನೆಲೆ ಸಂಗಣ್ಣ ಕರಡಿ, ‌ಮಾ.21 ರಂದು ಕೊಪ್ಪಳದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಸಭೆ ನಂತರ ತೀರ್ಮಾನ ಪ್ರಕಟಿಸುವ ಸಾಧ್ಯಗೆ ಇದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಟಿಕೆಟ್ ಘೋಷಣೆ ನಂತರವೂ ರಾಜ್ಯದ ವರಿಷ್ಠರು ಸೌಜನ್ಯಕ್ಕೂ ನನಗೆ ಕರೆ ಮಾಡಿಲ್ಲ. ಟಿಕೆಟ್ ಘೋಷಣೆಗೂ ಮೊದಲೇ ಮಾತನಾಡಿಲ್ಲ. ಇದು ಸಂಗಣ್ಣ ಬಂಡಾಯ ಸ್ಪರ್ಧೆಗೆ ಕಾರಣ ಎಂದು ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಯಾವ ಮಾನದಂಡದ ಆಧಾರದ ಮೇಲೆ ಟಿಕೇಟ್ ನಿರಾಕರಿಸ ಲಾಗಿದೆ ಎಂಬ ಸಂಗಣ್ಣ ಪ್ರಶ್ನೆಗೆ ಈ ವರೆಗೂ ಹೈಕಮಾಂಡ್ ಉತ್ತರ ನೀಡಿಲ್ಲ. ಜೊತೆಗೆ ಈಗ ಟಿಕೆಟ್ ಬಿಟ್ಟುಕೊಟ್ಟರೆ ಮುಂದೆ ಏನಾದರೂ ಸ್ಥಾನಮಾನ ನೀಡುವ ಬಗ್ಗೆಯೂ ಮಾತನಾಡಿಲ್ಲ. ಇದರಿಂದ ತಮ್ಮ ಶಕ್ತಿ ಪ್ರದರ್ಶನಕ್ಕೆ ಸ್ಪರ್ಧೆ ಅನಿವಾರ್ಯ ‌ಎಂಬ ಮಾತುಗಳು ಆಪ್ತ ವಲಯದಿಂದ ಕೇಳಿ ಬಂದಿವೆ.

ಬೆಂಬಲಿಗ ಪಡೆ: ಕಳೆದ 2 ಅವಧಿಯಲ್ಲಿ ಸಂಸದರಾಗಿದ್ದ ಸಂಗಣ್ಣ ಕರಡಿ, ಪ್ರತಿ ದಿನವೂ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದು, ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲದೇ, ಪಾಸ್ ಪೋರ್ಟ್ ಸೇವಾ ಕೇಂದ್ರ, ಅಂಚೆ ಕಚೇರಿ ವಿಭಾಗೀಯ ಕಚೇರಿ, ರೈಲ್ವೇ ಸೇತುವೆಗಳು,‌ ರೈಲ್ವೇ ಯೋಜನೆ ಸೇರಿ ಕೇಂದ್ರ ಸರಕಾರದ ಸಾಕಷ್ಟು ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಈ ಹಿನ್ನೆಲೆ ಸಂಗಣ್ಣ ಕರಡಿ ತಮ್ಮದೇ ಆಗಿರುವ ಬೆಂಬಲಿಗರನ್ನು ಇಡೀ ಲೋಕಸಭೆ ಕ್ಷೇತ್ರದಾದ್ಯಂತ ಹೊಂದಿದ್ದಾರೆ. ಈ ಹಿನ್ನೆಲೆ ಸಂಗಣ್ಣ ಕರಡಿ ‌ಅವರ ಸ್ಪರ್ಧೆ ‌ಸಹಜವಾಗಿ ಬಿಜೆಪಿ ಗೆಲುವಿಗೆ ಬ್ರೇಕ್ ಹಾಕಲಿದೆ.

ಬಿಜೆಪಿಗೆ ಕುತ್ತು: ಒಂದೊಮ್ಮೆ ಸಂಗಣ್ಣ ಕರಡಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ‌ಮಾಡಿದರೆ ಬಿಜೆಪಿ ಅಭ್ಯರ್ಥಿಗೆ ಕುತ್ತು ಎದುರಾಗಲಿದೆ. ಕೊಪ್ಪಳ ದಲ್ಲಿ ಜಾತಿ ಆಧಾರದಲ್ಲಿ ಚುನಾವಣೆ ನಡೆಯುತ್ತಿದೆ. ಇದು ಸ್ವತಃ ಸಿಎಂ ಸಿದ್ದರಾಮಯ್ಯ ಅವರಿಗೆ ಅನುಭವಕ್ಕೆ ಬಂದಿದೆ. ಆದರೆ, ಈ ಬಾರಿ ಒಂದೇ ಜಾತಿಗೆ ಸೇರಿದ ಇಬ್ಬರು ಅಭ್ಯರ್ಥಿಗಳ ಸ್ಪರ್ಧೆಯಿಂದ ಮತ ವಿಭಜನೆಯಾಗಿ ಕಾಂಗ್ರೆಸ್ ‌ಅಭ್ಯರ್ಥಿ ಗೆಲವಿನ ಹಾದಿ‌ ತೀರಾ ಸುಲಭವಾಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿವೆ.

*

ಬಿಜೆಪಿ ಹೈಕಮಾಂಡ್ ನಡವಳಿಕೆ ನನಗೆ ಬೇಸರ ತರಿಸಿದ್ದಂತೂ ನಿಜ. ಈ ಹಿನ್ನೆಲೆ ನಾನು ಗುರುವಾರ ನನ್ನ ಬೆಂಬಲಿಗರ ಸಭೆ ಕರೆದಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ನಿರ್ಧಾರ ಪ್ರಕಟಿಸುತ್ತೇನೆ. ಈ ಹಂತದಲ್ಲಿ ಏನೂ ಹೇಳುವುದಿಲ್ಲ.

ಸಂಗಣ್ಣ ಕರಡಿ, ‌ ಸಂಸದ