Friday, 22nd November 2024

KPSC Group B Exam: ಕೆಪಿಎಸ್‌ಸಿ ಗ್ರೂಪ್‌-ಬಿ ಹುದ್ದೆಗಳ ಪರೀಕ್ಷೆ ಹಾಲ್‌ ಟಿಕೆಟ್‌ ಬಿಡುಗಡೆ; ಡೌನ್‌ಲೋಡ್‌ ವಿಧಾನ ಇಲ್ಲಿದೆ

KPSC Group B Exam

ಬೆಂಗಳೂರು: ಸೆ.14 ಮತ್ತು 15ರಂದು ನಡೆಯಲಿರುವ ಬಿಬಿಎಂಪಿ, ಜಲ ಸಂಪನ್ಮೂಲ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿನ ಗ್ರೂಪ್‌-ಬಿ ಹುದ್ದೆಗಳ ನೇಮಕಾತಿ ಪರೀಕ್ಷೆಗೆ (KPSC Group B Exam) ಕೆಪಿಎಸ್‌ಸಿಯಿಂದ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಸೆ.5ರಂದೇ ಪ್ರವೇಶ ಪತ್ರ ಬಿಡುಗಡೆಯಾದರೂ ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ಹಾಲ್‌ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ ಹೊಸದಾಗಿ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಕೆಪಿಎಸ್‌ಸಿ ಸೂಚಿಸಿದೆ.

ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಹೊರಡಿಸಿದೆ. 2024ರ ಮಾರ್ಚ್‌ 13ರ ಅಧಿಸೂಚನೆಯಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆ.14 ಮತ್ತು 15 ರಂದು ನಿಗದಿಪಡಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡಿದ್ದ ಪ್ರವೇಶ ಪತ್ರಗಳಲ್ಲಿ, ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವು ಅಭ್ಯರ್ಥಿಗಳ ಪರೀಕ್ಷಾ ಉಪಕೇಂದ್ರಗಳ ಹಂಚಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದಿತ್ತು. ಹೀಗಾಗಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯನ್ನು ಪ್ರಸ್ತುತ ಬಗೆಹರಿಸಲಾಗಿದ್ದು, ಈಗಾಗಲೇ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡಿರುವ ಅಭ್ಯರ್ಥಿಗಳೂ ಸೇರಿ ಎಲ್ಲಾ ಅಭ್ಯರ್ಥಿಗಳು ಹೊಸದಾಗಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಈ ಮೂಲಕ ತಿಳಿಸಲಾಗಿದೆ.

ಪ್ರವೇಶ ಪತ್ರ ಡೌನ್‌ಲೋಡ್‌ ಮಾಡುವುದು ಹೇಗೆ?

  • ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ, https://kpsc.kar.nic.in/indexk.html
  • ಹೋಮ್‌ಪೇಜ್‌ನಲ್ಲಿ ಅಪ್ಲೈ ಆನ್‌ಲೈನ್‌ (ʼಒನ್‌ ಟೈಮ್‌ ರಿಜಿಸ್ಟ್ರೇಷನ್‌ʼ) ಎಂದಿರುವ ಕಡೆ ಕ್ಲಿಕ್‌ ಮಾಡಿ
  • ಯೂಸರ್‌ ಐಡಿ, ಪಾಸ್‌ ಬಳಸಿ ಲಾಗಿನ್‌ ಆಗಿ
  • ಪ್ರವೇಶ ಪತ್ರ ಕೆಟಗರಿಯಲ್ಲಿ ಅಧಿಸೂಚನೆ, ಪರೀಕ್ಷಾ ದಿನಾಂಕ ಆಯ್ಕೆ ಮಾಡಿ ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಿ

ಕೆಪಿಎಸ್‌ಸಿ ಮತ್ತೆ ಎಡವಟ್ಟು

ಈ ಮೊದಲು ಸೆ.5ರಿಂದ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕೆಲ ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ಪೇಪರ್-‌, ಪೇಪರ್-2‌ ಪರೀಕ್ಷೆಗೆ ಪ್ರತ್ಯೇಕ ಪರೀಕ್ಷಾ ಕೇಂದ್ರಗಳು ನಿಗದಿಯಾಗಿದ್ದರಿಂದ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದರು. ತಾಂತ್ರಿಕ ಕಾರಣದಿಂದಾಗಿ ಕೆಲವು ಅಭ್ಯರ್ಥಿಗಳ ಪರೀಕ್ಷಾ ಉಪಕೇಂದ್ರಗಳ ಹಂಚಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ, ತಾತ್ಕಾಲಿಕವಾಗಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲಾಗಿದೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಕೆಪಿಎಸ್‌ಸಿ ತಿಳಿಸಿತ್ತು. ಇದೀಗ ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ ಹೊಸದಾಗಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಆಯೋಗ ತಿಳಿಸಿದೆ.

ಪರೀಕ್ಷೆ ಹೇಗಿರುತ್ತದೆ?

ವಿವಿಧ ಇಲಾಖೆಗಳಲ್ಲಿನ ಗ್ರೂಪ್‌-ಬಿ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯುವವರು ಸೆ. 14ರಂದು ನಡೆಯುವ ಕಡ್ಡಾಯ ಪರೀಕ್ಷೆ ಬರೆಯಬೇಕು. ಗರಿಷ್ಠ 150 ಅಂಕಗಳ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅಭ್ಯರ್ಥಿಯು ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಇನ್ನು ಸೆ.15ರಂದು ಸಾಮಾನ್ಯ ಪತ್ರಿಕೆ-1‌, ನಿರ್ದಿಷ್ಟ ಪತ್ರಿಕೆ -2 ಒಳಗೊಂಡ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.

ಕಡ್ಡಾಯ ಕನ್ನಡ ಪರೀಕ್ಷೆ

ಈ ಹುದ್ದೆಗಳಿಗೆ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ನಿಯಮ ಉಪ ನಿಯಮ-7 ರಲ್ಲಿ ನಿರ್ದಿಷ್ಟ ಪಡಿಸಲಾದಂತೆ, ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲಿ ಅರ್ಹತೆಯನ್ನು ಪಡೆಯದ ಹೊರತು ಆಯ್ಕೆಗೆ ಅರ್ಹರಾಗುವುದಿಲ್ಲ. ಈ ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿದ್ದು, ಅಭ್ಯರ್ಥಿಯು ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪ್ರಶ್ನೆ, ಪತ್ರಿಕೆಯನ್ನು ಎಸ್.ಎಸ್.ಎಲ್.ಸಿ. ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗುತ್ತದೆ.

ವಿಶೇಷ ಸೂಚನೆ: ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು 29-11-2022ರ ಫಲಿತಾಂಶವನ್ನು ಈ ಅಧಿಸೂಚನೆಯಲ್ಲಿನ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೂ ಪರಿಗಣಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆನ್ ಲೈನ್ ಅರ್ಜಿಯ ನಿಗದಿತ ಅಂಕಣದಲ್ಲಿ ಕನ್ನಡ ಭಾಷಾ ಪರೀಕ್ಷೆ ಕುರಿತಂತೆ ಕೇಳಿರುವ ಮಾಹಿತಿಯನ್ನು ತಪ್ಪದೇ ನಮೂದಿಸಿರಬೇಕು.

ಈ ಸುದ್ದಿಯನ್ನೂ ಓದಿ | Money Tips: ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ
ಪರೀಕ್ಷೆಯು ತಲಾ 300 ಅಂಕಗಳ ಎರಡು ಪ್ರಶ್ನೆ ಪತ್ರಿಕೆ (ಸಾಮಾನ್ಯ ಪತ್ರಿಕೆ-1‌, ನಿರ್ದಿಷ್ಟ ಪತ್ರಿಕೆ -2) ಒಳಗೊಂಡಿರುತ್ತದೆ. ಪತ್ರಿಕೆ-1ರಲ್ಲಿ ಪ್ರಚಲಿತ ವಿದ್ಯಮಾನ, ಸಾಮಾನ್ಯ ವಿಜ್ಞಾನ, ಭಾರತ ಹಾಗೂ ಕರ್ನಾಟಕದ ಇತಿಹಾಸ, ಭೂಗೋಳ ಶಾಸ್ತ್ರ, ಸಮಾಜ ವಿಜ್ಞಾನ, ಬೌದ್ಧಿಕ ಸಾಮರ್ಥ್ಯ, ದೈನಂದಿನ ಗ್ರಹಿಕೆ ವಿಷಯಗಳು ಇರಲಿವೆ. ಇನ್ನು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಯಾಗಿದ್ದು, ಆಯಾ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮ ನೀಡಲಾಗಿದ್ದು, ಕೆಪಿಎಸ್‌ಸಿ ಅಧಿಸೂಚನೆಯಲ್ಲಿ ಪಠ್ಯಕ್ರಮ ನೀಡಲಾಗಿದೆ.