ಬೆಂಗಳೂರು: ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಹತ್ಯೆ ಪ್ರಕರಣ ಸಂಬಂಧ ಇದೀಗ ಆರೋಪಿ ಅಭಿಷೇಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಜು.23 ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ಕೊಲೆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿ ಅಭಿಷೇಕ್ ನನ್ನು ಬಂಧಿಸಿದಾರೆ.
ಜು.23 ರಂದು ರಾತ್ರಿ 11.13 ನಿಮಿಷಕ್ಕೆ ಆರೋಪಿ ಅಭಿಷೇಕ್ ಪಿಜಿಗೆ ಬಂದು ಕೃತಿ ಕುಮಾರಿ ಇದ್ದ ರೂಮ್ ಬಾಗಿಲು ಬಡಿದಿದ್ದಾನೆ. ಈ ವೇಳೆ ಡೋರ್ ಓಪನ್ ಮಾಡುತ್ತಿದ್ದಂತೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕೃತಿ ತಪ್ಪಿಸಿಕೊಳ್ಳಲು ಬಿಡದೇ ಹಲವು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಅಭಿಷೇಕ್ನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. ಜುಲೈ 23ರ ನಡುರಾತ್ರಿ ಯುವತಿಯ ಕತ್ತು ಸೀಳಿ ಕೊಲೆ ಮಾಡಿ ಮಧ್ಯಪ್ರದೇಶದಲ್ಲಿ ತಲೆಮಾರಿಸಿಕೊಂಡಿದ್ದ.
ಆರೋಪಿಯನ್ನು ಬಂಧಿಸಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮಧ್ಯಪ್ರದೇಶದಲ್ಲಿ ಆತನನ್ನು ಬಂಧಿಸಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಕೊಲೆ ಆರೋಪಿ ಅಭಿಷೇಕ್ ಮಧ್ಯಪ್ರದೇಶದ ಭೋಪಾಲ್ ನಿವಾಸಿಯಾಗಿದ್ದು, ಮೃತ ಕೃತಿ ಕುಮಾರಿ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದನು. ಇಬ್ಬರೂ ಒಂದೇ ಪಿಜಿಯಲ್ಲಿ ಲಿವಿಂಗ್ ಟುಗೆದರ್ ರೀತಿಯಲ್ಲಿ ವಾಸವಾಗಿದ್ದರು. ಆದರೆ, ಕಳೆದ ಕೆಲವು ತಿಂಗಳ ಹಿಂದೆ ಅಭಿಷೇಕ್ ಕೆಲಸ ಬಿಟ್ಟು ಭೋಪಾಲ್‌ಗೆ ಹೋಗಿದ್ದನು. ಜೊತೆಗೆ, ಆಗಾಗ ಬೆಂಗಳೂರಿಗೆ ಬಂದು ಪ್ರೇಯಸಿಯನ್ನು ಭೇಟಿ ಮಾಡಿ ಹೋಗುತ್ತಿದ್ದನು.
ಯಾವುದೇ ಕೆಲಸ ಮಾಡದೇ ನಿರುದ್ಯೋಗಿಯಾಗಿ ಅಲೆದಾಡುತ್ತಿದ್ದ ಅಭಿಷೇಕ್‌ಗೆ ಬೆಂಗಳೂರಿನಲ್ಲಿಯೇ ಕೆಲಸಕ್ಕೆ ಸೇರಿಕೊಳ್ಳುವಂತೆ ಪ್ರೇಯಸಿ ಹೇಳಿದ್ದಾಳೆ. ಆದರೆ, ಆತ ಕೆಲಸಕ್ಕೆ ಸೇರಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಕೆಲ ದಿನಗಳ ಬಳಿಕ ಈತ ಸುಳ್ಳು ಹೇಳಿರುವ ವಿಚಾರ ಪ್ರೇಯಸಿಗೆ ತಿಳಿದಿದ್ದು, ಆತನಿಂದ ಅಂತರವನ್ನು ಕಾಯ್ದುಕೊಂಡಿದ್ದಾಳೆ.