ಚಿಕ್ಕಬಳ್ಳಾಪುರ: 2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಸ್ಪರ್ಧಿಸಲಿದೆ ಎಂದು ಕೆಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಬಿ. ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಕ್ಕಬಳ್ಳಾ ಪುರ ಕ್ಷೇತ್ರದಲ್ಲಿ ಪಕ್ಷದ ಅಧ್ಯಕ್ಷನಾದ ನಾನು ಮತ್ತು ಬಾಗೇಪಲ್ಲಿ ಕ್ಷೇತ್ರದಿಂದ ತಿಮ್ಮಣ್ಣ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ. ಉಳಿದ ಮೂರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.
ಚಿಂತಾಮಣಿ, ಗೌರಿಬಿದನೂರು ತಾಲ್ಲೂಕುಗಳಲ್ಲಿ ಪಕ್ಷವು ಸದೃಢವಾಗಿದೆ. ಈಗಾಗಲೇ ಭ್ರಷ್ಟಾಚಾರದ ವಿರುದ್ಧ ಅಭಿಯಾನಗ ಳನ್ನು ನಡೆಸುತ್ತಿದ್ದೇವೆ. ಜಿಲ್ಲಾ ಕೇಂದ್ರದಲ್ಲಿ ನಮ್ಮ ಸಂಘಟನೆಯನ್ನು ಬಲಿಷ್ಠಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಪಕ್ಷವು ಹಮ್ಮಿಕೊಂಡಿರುವ ದೇಣಿಗೆ ಸಂಗ್ರಹ ಕಾರ್ಯಕ್ಕೆ ಜಿಲ್ಲೆಯಲ್ಲಿ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ₹ 80 ಸಾವಿರ ಸಂಗ್ರಹವಾಗಿದೆ.
ಈಗಾಗಲೇ ಪಕ್ಷವು 60 ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇವರು ಆಯಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಸಹ ತೊಡಗಿದ್ದಾರೆ. ಪ್ರತಿ ತಿಂಗಳು ಅಭ್ಯರ್ಥಿಗಳ ಆಯ್ಕೆಗೆ ಸಂದರ್ಶನ ನಡೆಸುತ್ತಿದೆ. ಡಿ.10 ಮತ್ತು 12ರಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಮಹಿಳೆಯರಿಗೆ ₹ 2,500 ಮತ್ತು ಪುರುಷರಿಗೆ ₹ 5,000 ಶುಲ್ಕ ಇದೆ. ಮಾಹಿತಿಗೆ 7975625575 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ನರಸಿಂಹಗೌಡ ಮಾತನಾಡಿ, ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕನಿಷ್ಠ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು ಎನ್ನುವ ಆಲೋಚನೆ ಇದೆ. ಕಾಂಗ್ರೆಸ್, ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಪಕ್ಷಗಳು ಮಹಿಳೆಯರಿಗೆ ಮತ್ತು ಯುವ ಸಮುದಾಯಕ್ಕೆ ಅನ್ಯಾಯ ಮಾಡುತ್ತಿವೆ ಎಂದು ದೂರಿದರು.
ಜಿಲ್ಲೆಯಲ್ಲಿ ಜನಪರ ಹೋರಾಟಗಳನ್ನು ಪಕ್ಷದಿಂದ ರೂಪಿಸಲಾಗುವುದು. ಗ್ರಾಮ ಮಟ್ಟದಿಂದಲೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಯುವ ಘಟಕದ ಪ್ರಧಾನ ಕಾರ್ಯದರ್ಶಿ ಡ್ಯಾನಿಯಲ್, ಎಂ.ಬಿ.ರುದ್ರಾರಾಧ್ಯ, ವೆಂಕಟೇಶ್, ರಮೇಶ್ ಗೋಷ್ಠಿಯಲ್ಲಿ ಇದ್ದರು.