ಶಿವಮೊಗ್ಗ: ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಬಿಜೆಪಿಗೆ ವಾಪಸ್ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಈಶ್ವರಪ್ಪ ಠೇವಣಿ ಕಳೆದುಕೊಂಡು, ಸೋಲು ಕಂಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿದ್ದ ಬಿ. ವೈ. ರಾಘವೇಂದ್ರ ವಿರುದ್ಧ ಕೆ. ಎಸ್. ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದ್ದರಿಂದ ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿತ್ತು.
“ಬಿಜೆಪಿ ಎಂದರೆ ಈಶ್ವರಪ್ಪ, ಈಶ್ವರಪ್ಪ ಎಂದರೆ ಬಿಜೆಪಿ” ಎಂದು ಸದಾ ಹೇಳುವ ಕೆ. ಎಸ್. ಈಶ್ವರಪ್ಪ ಪಕ್ಷಕ್ಕೆ ವಾಪಸ್ ಆಗುವ ತಯಾರಿ ಆರಂಭಿಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹಿರಿಯರ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ವರಿಷ್ಠರು ಹಸಿರು ನಿಶಾನೆ ತೋರಿಸಿದರೆ ಈಶ್ವರಪ್ಪ ಕೆಲವೇ ದಿನಗಳಲ್ಲಿ ಮತ್ತೆ ಬಿಜೆಪಿಗೆ ವಾಪಸ್ ಆಗಲಿದ್ದಾರೆ.