ಚಿಕ್ಕನಾಯಕನಹಳ್ಳಿ : ಸಿದ್ದರಾಮಯ್ಯನವರ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದು ಪೂರ್ವ ನಿರ್ಧಾರ. ಇದಕ್ಕಾಗಿ ವಿಜಯಶಂಕರ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನಿಯೋಜಿಸಿದಾಗಲೇ ಈ ಅನುಮಾನ ಸಾಬೀತಾಗಿದೆ ಎಂದು ಮಾಜಿ ಶಾಸಕ ಕಿರಣಕುಮಾರ್ ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ನಗರದಲ್ಲಿ ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ನೆಹರು ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯಪಾಲರ ವಿರುದ್ದ ಗೋಬ್ಯಾಕ್ ಘೋಷಣೆ ಕೂಗಲಾಯಿತು. ಬಳಿಕ ದಂಡಾಧಿಕಾರಿ ಪುರಂದರ್ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಹಿಂದಿನ ಸರಕಾರದ ಅವಧಿಯಲ್ಲಿ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗು ಕುಮಾರಸ್ವಾಮಿ ಅವರ ವಿರುದ್ದ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಲಾಗಿತ್ತು. ಆಗ ಅನುಮತಿ ನಿರಾಕರಿಸಿದ್ದ ಇದೇ ರಾಜ್ಯಪಾಲರು ಕ್ರಿಮಿನಲ್ ಹಿನ್ನಲೆಯಿರುವ ಅಬ್ರಾಹಂ ಎಂಬ ವ್ಯಕ್ತಿಯ ದೂರಿಗೆ ಸಿದ್ದರಾಮಯ್ಯ ವಿರುದ್ದ ಕ್ರಮಕ್ಕೆ ಅನುಮತಿ ನೀಡಿದ್ದಾರೆ. ಇದು ಖಂಡನೀಯ. ಪಶ್ಚಿಮ ಬಂಗಾಳ ಸಹಿತ ಅನೇಕ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಲ್ಲಿ ಅಧಿಕಾರ ಕಸಿಯಲು ಯತ್ನಿಸಲಾಗುತ್ತಿದೆ. ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ರಾಜ್ಯ ಸರಕಾರ ಗಳನ್ನು ಅಸ್ಥಿರಗೊಳಿಸಲು ನರೇಂದ್ರ ಮೋದಿ ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಿ.ಡಿ.ಚಂದ್ರಶೇಖರ್, ಪಿ.ಟಿ.ಚಿಕ್ಕಣ್ಣ, ಕೆಪಿಸಿಸಿ ಸೇವಾದಳದ ಕೃಷ್ಣೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ರಾಧ, ಕಾರ್ಮಿಕ ಘಟಕದ ಸುಗಂಧರಾಜ್, ಮುಖಂಡರುಗಳಾದ ಸಾಸಲು ಮಂಜುನಾಥ್, ಬೀರಪ್ಪ, ಗಂಗಾಧರ್ ಮಗ್ಗದಮನೆ, ನಿರವಗಲ್ ನರಸಿಂಹಮೂರ್ತಿ, ಕಾತ್ರಿಕೆ ಹಾಲ್ ಗೋವಿಂದರಾಜ್, ನರಸಿಂಹಮೂರ್ತಿ, ಹೇಮರಾಜ್, ಹಾಗು ಕಾಂಗ್ರೆಸ್ ಕಾರ್ಯಕರ್ತರಿದ್ದರು.