Friday, 22nd November 2024

KSRTC ತಾಂತ್ರಿಕ ಸಮಸ್ಯೆ: ಟಿಕೆಟ್ ರದ್ದು ಆಗಿದ್ದರ ಸಂದೇಶ ಕಳುಹಿಸಿ, ಮರು ಸಂಚಾರ ಆರಂಭಿಸಿದ ಬಸ್..!

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸ ಮಾದರಿಯ ಬಸ್‌ಗಳನ್ನು ಪರಿಚಯಿಸುವಲ್ಲಿ, ಪ್ರಯಾಣಿಕರಿಗೆ ಅನುಕೂಲವಾಗು ವ್ಯವಸ್ಥೆ, ಉಪಕ್ರಮ ಜಾರಿ ತರುವಲ್ಲಿ ಸದಾ ನಿರತವಾಗಿದೆ. ಆದರೆ ಈ ಸಲ ತಾಂತ್ರಿಕ ಸಮಸ್ಯೆಯಿಂದಾಗಿ ಸಂಸ್ಥೆಯು ಪ್ರಯಾಣಿಕರಿಂದ ವ್ಯಾಪಕ ಟೀಕೆಗೆ ಒಳಗಾಗಿದೆ.

ಪ್ರಯಾಣಿಕರೊಬ್ಬರು ಹುಬ್ಬಳ್ಳಿಯಿಂದ-ರಾಯಚೂರಿಗೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ ತಾವು ಹತ್ತಬೇಕಾದ ಬಸ್ ನಿಗದಿತ ಮಾರ್ಗದಲ್ಲಿ ಸಂಚರಿಸುವುದಿಲ್ಲ, ರದ್ದುಗೊಂಡಿದೆ ಎಂದು ಅವರ ಮೊಬೈಲ್‌ಗೆ ಸಂದೇಶ ರವಾನೆಯಾಗಿದೆ.

ಕಾಯ್ದಿರಿಸಿದ ಬಸ್ ಟಿಕೆಟ್ ರದ್ದುಗೊಂಡರೆ ಏಳು ದಿನಗಳಲ್ಲಿ ಆ ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಆಗಬೇಕು. ಆದರೆ ಈ ಪ್ರಯಾಣಿಕರಿಗೆ ಹಾಗೆ ಆಗಿಲ್ಲ, ಸಂಸ್ಥೆಯೇ ತನ್ನ ನಿಯಮ ಉಲ್ಲಂಘಿಸಿದೆ. ಒಂದು ತಿಂಗಳಾದರೂ ಹಣ ಪಾವತಿಸಿಲ್ಲ ಎಂದು ತಿಳಿದು ಬಂದಿದೆ. ಜುಲೈ 2ರಂದು ನಡೆದ ಘಟನೆ ಇದಾಗಿದ್ದು, ಆಗಸ್ಟ್ 7 ನೇ ತಾರೀಖಿನವರೆಗೂ ಈ ವ್ಯಕ್ತಿ ಮರುಪಾವತಿ ಸ್ವೀಕರಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.

ಆನ್‌ಲೈನ್‌ನಲ್ಲಿ ಜುಲೈ 2ರಂದು ರಾತ್ರಿಗೆ 10 ಗಂಟೆ ಹೊರಡಲು ಟಿಕೆಟ್ ಬುಕ್ ಮಾಡಿದ್ದರು. ಈ ಟಿಕೆಟ್ ರದ್ದು ಆಗಿದ್ದರ ಸಂದೇಶ ಅವರು ಮಧ್ಯಾಹ್ನವೇ ಸ್ವೀಕರಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅವರು ಮತ್ತೊಂದು ಬಸ್‌ ಟಿಕೆಟ್ ಬುಕ್ ಮಾಡಿದ್ದಾರೆ.

ಬುಕ್ ಮಾಡಿದ ಬಸ್ ಹತ್ತಲು ಅವರು ರಾತ್ರಿ ಹುಬ್ಬಳ್ಳಿಯ ಹೊಸ ಬಸ್‌ ನಿಲ್ದಾಣಕ್ಕೆ ತೆರಳಿದ್ದಾರೆ. ಈ ವೇಳೆ ವೇಳಾಪಟ್ಟಿಯಂತೆ ಬುಕ್ ಆಗಿ ನಂತರ ರದ್ದು ಸಂದೇಶ ಕಳುಹಿಸಿದ್ದ ಬಸ್ ಅದೇ ನಿಲ್ದಾಣದಲ್ಲಿ ಹುಬ್ಬಳ್ಳಿಯಿಂದ ರಾಯಚೂರಿಗೆ ಹೊರಡಲು ಸಿದ್ಧವಾಗಿದ್ದನ್ನು ಕಂಡು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಪರಿಶೀಲಿಸಿದರೆ ಅವರಿಗೆ ರಾತ್ರಿ 9.30ರ ಹೊತ್ತಿಗೆ ಬಸ್ ಮರು ಹೊಂದಿಸಲಾಗಿದೆ ಎಂಬ ಮೊದಲೇನ ಬಸ್‌ನ ಅಪ್ಡೇಟ್ ಸಂದೇಶ ಬಂದಿದೆ. ಸದ್ಯ ಅವರು ಯಾವ ಬಸ್‌ಗೆ ಹೋಗಬೇಕು ಎಂಬ ಪ್ರಶ್ನೆ ಉಂಟಾಗಿದೆ. ನಂತರ ಎರಡನೇ ಬಸ್‌ ಹಿಡಿದು ಅವರು ತೆರಳಿದ್ದಾರೆ. ರದ್ದಾದ ಬಸ್‌ ಟಿಕೆಟ್ ಹಣ ಈವರೆಗೆ ಬಂದಿಲ್ಲ ಎಂದು ಅವರು ದೂರಿದ್ದಾರೆ.

ಟಿಕೆಟ್ ಕಾಯ್ದಿರಿಸಿದರೂ ಉಂಟಾದ ಲೋಪದಿಂದಾಗಿ ಪ್ರಯಾಣಿಕರು ಪ್ರಯಾಣದ ಕೊನೆಗಳಿಗೆಯಲ್ಲಿ ಮಾನಸಿಕ ಕಿರಿ ಕಿರಿ ಎದುರಿಸುವಂತಾಗಿದೆ.

ಈ ಕುರಿತು KSRTC ವ್ಯವಸ್ಥಾಪಕ ನಿರ್ದೇಶಕ ಪ್ರತಿಕ್ರಿಯಿಸಿದ್ದು, ಪ್ರಯಾಣಿಕರ ಮೇಲೆ ನಮಗೆ ಹೆಚ್ಚು ಗೌರವ ಇದೆ. ಇಂತಹ ಸಮಸ್ಯೆಗಳು ಆಗದಂತೆ ಎಚ್ಚರಿಕೆ ವಹಿಸುತ್ತೇವೆ. ಕೆಲವೊಮ್ಮೆ ಹೀಗಾಗಿರುತ್ತದೆ. ತಾಂತ್ರಿಕ ಲೋಪ ಸರಿಪಡಿಸಲಾಗುವುದು ಶೀಘ್ರವೇ ಆ ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಮಾಡಲಾಗುವುದು ಎಂದು  ಭರವಸೆ ನೀಡಿದ್ದಾರೆ.