Sunday, 15th December 2024

ಪಾಳು ಬಿಟ್ಟಿರುವ ಜಮೀನಿನ ಮಾಲಿಕರು ತಮ್ಮ ಆಸ್ತಿಯ ಬಗ್ಗೆ ಜವಾಬ್ದಾರಿ ವಹಿಸಬೇಕು

ಚಿಕ್ಕನಾಯಕನಹಳ್ಳಿ: ಬಗರ್ ಹುಕುಂ ಸಾಗುವಳಿ ಚೀಟಿ ಪಡೆದ ಸಾಗುವಳಿದಾರರ ಜಮೀನಿನ ನೊಂದಣಿ, ಪಹಣಿ, ಖಾತೆ ಸೇರಿದಂತೆ ಭೂಮಿಯ ಮೇಲಿನ ಎಲ್ಲಾ ಹಕ್ಕುಗಳನ್ನು ಸಾಗುವಳಿದಾರರಿಗೆ ಆದಷ್ಟು ಶೀಘ್ರ ಮಾಡಿಕೊಡುವಂತೆ ಶಾಸಕ ಸಿ.ಬಿ. ಸುರೇಶ ಬಾಬು ತಹಸೀಲ್ದಾರ್ ಅವರಿಗೆ ಸೂಚಿಸಿದರು.

ತೀನಂಶ್ರೀ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಲ್ಲೂಕಿಗೆ ವರ್ಗಾವಣೆ ಗೊಂಡು ಬಂದ ತಹಸೀಲ್ದಾರ್ ಗೀತಾ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸರಕಾರ ಬಗರ್ ಹುಕುಂ ಜಮೀನುಗಳನ್ನು ಮಂಜೂರು ಮಾಡಿದ ತಕ್ಷಣವೇ ಸಾಗುವಳಿದಾರರಿಗೆ ಖಾತೆ ಮಾಡಿಕೊಡುವಂತೆ ಅವರಿಗೆ ಸಲಹೆ ನೀಡಿದ್ದು ಅವರು ಅದಕ್ಕೆ ಒಪ್ಪಿದ್ದಾರೆ.

ಈ ಹಿಂದೆ ಹಂಗಾಮಿ ಸಾಗುವಳಿ ಚೀಟಿ ಪಡೆದಿರುವ ಅನೇಕ ಸಾಗುವಳಿದಾರರ ಜಮೀನು ದುರಸ್ತ್ ಆಗಿರುವುದಿಲ್ಲ. ಈ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ತಹಸೀಲ್ದಾರ್ ಇಚ್ಚಾಶಕ್ತಿ ತೋರಬೇಕೆಂದು ತಿಳಿಸಿದರು. ತಾಲ್ಲೂಕು ಈ ಬಾರಿ ಬರಕ್ಕೆ ತುತ್ತಾಗಿದ್ದು ಸಾವಿರಾರು ಎಕರೆಯಲ್ಲಿ ರೈತನು ಬೆಳೆದಿದ್ದ ಫಸಲು ನಾಶವಾಗಿದೆ. ಬೆಳೆ ಬೆಳೆಯಲು ಮಾಡಿದ್ದ ಕೈಸಾಲ ಬ್ಯಾಂಕಿನ ಸಾಲ ತೀರಿಸಲಾಗದೆ ರೈತನು ಇನ್ನಿತರ ವೆಚ್ಚಗಳನ್ನು ಭರಿಸಲಾಗದೆ ಹತಾಶೆಯ ಬದುಕನ್ನು ಸವೆಸುತ್ತಿದ್ದಾನೆ. ಕೂಡಲೇ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಪ್ರಯೋಜನೆ ಪಡೆಯಲು ಶಾಸಕರು ಮನವಿ ಮಾಡಿದರು.

ಜಮೀನಿನ ದಾಖಲೆ ಪತ್ರ ಪರಿಶೀಲಿಸಿಕೊಳ್ಳಿ
ರೈತರು ತಮ್ಮ ಜಮೀನಿನ ದಾಖಲೆ ಪತ್ರಗಳನ್ನು ಆಗಿಂದಾಗ್ಗೆ ಪರಿಶೀಲಿಸಿಕೊಳ್ಳುತ್ತಿರಬೇಕು. ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಜಮೀನನ್ನು ಖಾತೆ ಮಾಡಿಸಿಕೊಳ್ಳುವ ವಂಚಕರಿದ್ದು ಖಾತೆದಾರರು ತಮ್ಮ ಆಸ್ತಿಯ ಬಗ್ಗೆ ಎಚ್ಚರ ವಹಿಸಬೇಕು. ಜೀವನ ನಿರ್ವಹಣೆಗೆ ಪರಸ್ಥಳದಲ್ಲಿರುವವರು, ಧೀರ್ಘಕಾಲ ದವರೆಗೆ ಪಾಳು ಬಿಟ್ಟಿರುವ ಜಮೀನಿನ ಮಾಲಿಕರು ತಮ್ಮ ಆಸ್ತಿಯ ಬಗ್ಗೆ ಜವಾಬ್ದಾರಿವಹಿಸಬೇಕು ಎಂದು ತಹಸೀಲ್ದಾರ್ ಗೀತಾ ಹೇಳಿದರು.

ಖಾತೆ ಹಾಗು ತಿದ್ದುಪಡಿಗೆ ಸಂಬAದಿಸಿದAತೆ ಒಟ್ಟು ೯೪೪ ಅರ್ಜಿಗಳು ಸಲ್ಲಿಕೆಯಾಗಿವೆ. ಸಂದ್ಯಾ ಸುರಕ್ಷಾ ೧೦ ವೃದ್ದಾಪ್ಯ ವೇತನ ೧೨ ನಿರ್ಗತಿಕ ವಿಧವಾ ವೇತನ ೪, ಹಾಗು ವಿಕಲಚೇತನರ ವೇತನ ೬ ವಿವಿಧ ಮಾಸಾಶನಕ್ಕೆ ಸಲ್ಲಿಕೆಯಾಗಿದ್ದ ಒಟ್ಟು ೩೨ ಅರ್ಜಿಯ ಫಲಾನುಭವಿಗಳಿಗೆ ಅರ್ಹತಾ ಪತ್ರವನ್ನು ವಿತರಿಸಲಾಯಿತೆಂದು ಗ್ರಾಮ ಲೆಕ್ಕಾಧಿಕಾರಿ ಸಿದ್ದಲಿಂಗೇಗೌಡ ಮಾಹಿತಿ ನೀಡಿದರು.