Saturday, 14th December 2024

ಹಳ್ಳಿಗುಡಿಯಲ್ಲಿ ಮತ್ತೇ ಬಂತು ಭೂ‌ಸ್ವಾಧೀನದ ಗುಮ್ಮ!!?

ಫೋಸ್ಕೋ ಹೋಯ್ತು, ರಾಮ್ಕೊ‌ ಬರುತ್ತಾ?

-ಸುಮಾರು 250 ಎಕರೆ ಗುರುತಿಸಿರುವ ಸಿಮೆಂಟ್ ಕಂಪನಿ

-ಪ್ರತಿ ಎಕರೆ ಜಮೀನನ್ನು 21 ಲಕ್ಷ ರೂಪಾಯಿಗೆ ಖರೀದಿಸಲು ಸಿದ್ಧತೆ!

-ಬಸವರಾಜ ಕರುಗಲ್.

ಗದಗ: ದಶಕದ ಹಿಂದೆ ನಡೆದಿದ್ದ ಪೋಸ್ಕೋ ವಿರುದ್ಧದ ಹೋರಾಟ ದೇಶಾದ್ಯಂತ ಸಂಚಲನ ಮೂಡಿಸಿತ್ತು. ರೈತರ ಜಮೀನು ಉಳಿಸುವ ಭಾಗವಾಗಿ ರಾಜ್ಯದ ಬಹುತೇಕ ಮಠಾಧೀಶರು, ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮುಂದಾಳತ್ವದಲ್ಲಿ ಹೋರಾಟದ ಹಾದಿ ಹಿಡಿದು ಸರಕಾರವನ್ನು ಮಣಿಸಿದ್ದರು.

ಗದಗ ಜಿಲ್ಲೆಯ ನೆಲ-ಜಲಕ್ಕೆ ಅಂಥ ಶಕ್ತಿ ಇದೆ ಎಂದು ತೋರಿಸಲು ಪೊಸ್ಕೊ ವಿರುದ್ಧದ ಹೋರಾಟ, ಕಳಸಾ ಬಂಡೂರಿ ನಾಲಾ ಹೋರಾಟ ಸಾಕ್ಷೊಯಾಗಿವೆ. ಈಗ ಮತ್ತೇ ಗದಗ‌ ಜಿಲ್ಲೆಯ ಫಲವತ್ತಾದ ಭೂಮಿ ಮೇಲೆ ಖಾಸಗಿ ಕಂಪನಿಯೊಂದರ ಕಣ್ಣು ಬಿದ್ದಿದ್ದು, ರೈತರಿಗೆ ಹಣದ ಮಂಕುಬೂದಿ ಎರಚಿ ಜಮೀನು ಕಬಳಿಸುವ ಸಂಚು ನಡೆದಿರುವುದು ಬೆಳಕಿಗೆ ಬಂದಿದೆ.

ತಮಿಳುನಾಡು ಮೂಲದ ರಾಮ್ಕೊ ಸಿಮೆಂಟ್ ಕಂಪನಿ ರಾಜ್ಯದಲ್ಲಿ ಫ್ಯಾಕ್ಟರಿ ಪ್ರಾರಂಭಿಸಲಿದ್ದು, ಅದಕ್ಕೆ ಪೊಸ್ಕೊ ಕಂಪನಿ ತೆಕ್ಕೆಗೆ ಜಾರಬೇಕಿದ್ದ ಜಮೀನಿನ ಮೇಲೆ ಕಣ್ಣು ಹಾಕಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ (ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ) ಹಳ್ಳಿಗುಡಿ ಭಾಗದ ಸುಮಾರು 250 ಎಕರೆ ಜಮೀನನ್ನು ವಶಕ್ಕೆ ಪಡೆಯಲು ಹುನ್ನಾರ ನಡೆಸಿದೆ. ಪ್ರತಿ ಎಕರೆಗೆ 21 ಲಕ್ಷ ರೂಪಾಯಿ ಕೊಡಲು ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಪೊಸ್ಕೊ ಕಂಪನಿ ಸರಕಾರದ ಮೂಲಕ ರೈತರ ಜಮೀನು ಕಬಳಿಸಲು ಕೈ ಹಾಕಿ ವಿಫಲವಾಗಿತ್ತು. ಅಂದಿ‌ನ ಸಿಎಂ ಯಡಿಯೂರಪ್ಪ, ಬೃಹತ್ ಕೈಗಾರಿಕಾ ಮಂತ್ರಿ ಮುರುಗೇಶ್ ನಿರಾಣಿ ವಿರುದ್ಧ ಮಠಾಧೀಶರು ತಿರುಗಿ ಬಿದ್ದಿದ್ದರಿಂದ ಮುಖಭಂಗ ಅನುಭವಿಸಿ, ಭೂಸ್ವಾಧೀನ ಯಡಿಯೂರಪ್ಪ ಸರಕಾರ ಹಿಂದೆ ಸರಿದಿತ್ತು.

ಈಗ ರಾಮ್ಕೊ ಸಿಮೆಂಟ್ ಕಂಪನಿ, ಕುತಂತ್ರದ ಹೆಜ್ಜೆ ಇಟ್ಟಿದೆ. ಸರಕಾರದ ಮೂಲಕ ಭೂಸ್ವಾಧೀನಕ್ಕೆ ಮುಂದಾದರೆ ಮತ್ತೇ ವಿರೋಧ ಎದುರಿಸುವ ಭೀತಿಯಿಂದಾಗಿ ರಾಮ್ಕೊ ಕಂಪನಿ, ನೇರವಾಗಿ ಜಮೀನಿನ ಒಡೆಯರೊಂದಿಗೆ ಮಾತುಕತೆ ನಡೆಸಿದೆ. ಇದು ಭೂಮಿಯನ್ನು ಕೊಡುವ, ಖರೀದಿಸುವ ಖಾಸಗಿ ಪ್ರಕ್ರಿಯೆ ಆಗುವುದರಿಂದ ಯಾರ ವಿರೋಧವನ್ನು ಪರಿಗಣಿಸುವ ಅಗತ್ಯವಿಲ್ಲ ಎಂಬ ಲೆಕ್ಕಾಚಾರದಲ್ಲಿದೆ.

ಲಕ್ಕುಂಡಿ ಬಳಿ ರೈತರ ಸಭೆ?:
ಗದಗ ತಾಲೂಕಿನ ಲಕ್ಕುಂಡಿ ಬಳಿಯ ಬೂದಿ ಬಸವಣ್ಣ ದೇವಸ್ಥಾನದ ಆವರಣದಲ್ಲಿ ರಾಮ್ಕೊ ಸಿಮೆಂಟ್ ಫ್ಯಾಕ್ಟರಿ ಪ್ರತಿನಿಧಿಗಳು ವಶಕ್ಕೆ ತೆಗೆದುಕೊಳ್ಳಲು ಉದ್ದೇಶಿಸಿರುವ ಜಮೀನನ ರೈತ ಮಾಲೀಕರ ಸಭೆ ನಡೆಸಿದೆ. ಪ್ರತಿ ಎಕರೆ ಭೂಮಿಗೆ 21 ಲಕ್ಷ ರೂಪಾಯಿ ಹಣ ಕೊಡುವ ಮಂಕುಬೂದಿ ಎರಚಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

***

“ಈ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸುತ್ತೇವೆ. ಇದು ಸತ್ಯವೇ ಆಗಿದ್ದರೆ ಹಳ್ಳಿಗುಡಿಯಲ್ಲಿ ತೋಂಟದಾರ್ಯ ಮಠಕ್ಕೆ ಸಂಬಂಧಿಸಿದ ಜಮೀನುಗಳಿವೆ. ಫಲವತ್ತಾದ ಜಮೀನನ್ನು ಸರಕಾರದ ಮೂಲಕವಾಗಲೀ, ರಿಯಲ್ ಎಸ್ಟೇಟ್ ಮೂಲಕವಾಗಲಿ ಕೈಗಾರಿಕೆಗಳಿಗೆ ನೀಡಲು ಈಗಲೂ ನಮ್ಮ ವಿರೋಧ ಇದೆ. ಪರಿಸರವಾದಿಗಳೊಂದಿಗೆ, ಪ್ರಗತಿಪರರೊಂದಿಗೆ ಚರ್ಚಿಸಿ ಮುಂದಿನ ದಾರಿ ಕಂಡುಕೊಳ್ಳುತ್ತೇವೆ.”
-ಜಗದ್ಗುರು ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಸಂಸ್ಥಾನ ಶ್ರೀ ತೋಂಟದಾರ್ಯ ಮಠ, ಗದಗ.

“ಈ ಬಗ್ಗೆ ನನಗೇನು ಮಾಹಿತಿ ಇಲ್ಲ. ಇವತ್ತು ರವಿವಾರ ಇರುವುದರಿಂದ ಅಧಿಕಾರಿಗಳು ಸಿಗಲ್ಲ. ಸೋಮವಾರ ತಿಳಿದುಕೊಂಡು ಹೇಳ್ತಿನಿ. ಭೂಸ್ವಾಧೀನ ಮಾಡಿಕೊಳ್ಳುವುದಾಗಿದ್ದರೆ ನನ್ನ ಗಮನಕ್ಕೆ ಬರುತ್ತಿತ್ತು.
-ಅನ್ನಪೂರ್ಣ ಉಪವಿಭಾಗಾಧಿಕಾರಿ, ಗದಗ.