ಗುಬ್ಬಿ: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಹಳೆಯ ದಾಖಲೆಗಳನ್ನು ತಿದ್ದಿ ನಕಲಿ ಸೃಷ್ಟಿಸಿ ಅಂದಾಜು 450 ಎಕರೆ ಜಮೀನು ಸುಮಾರು 137 ಮಂದಿಗೆ ಪರಭಾರೆ ಮಾಡಲು ಮುಂದಾದ ಭೂ ಮಾಫಿಯಾ ತಂಡವನ್ನು ಗುಬ್ಬಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯ , ತಿಪ್ಪೂರು, ಹಳೇಗುಬ್ಬಿ ಗ್ರಾಮಗಳು. ಸಿ.ಎಸ್.ಪುರ ಹೋಬಳಿಯ, ನೆಟ್ಟೆಕೆರೆ, ಅಡಿಕೆಕೆರೆ ಗ್ರಾಮಗಳು. ನಿಟ್ಟೂರು ಹೋಬಳಿಯ ಈಚಲು ಕಾವಲ್, ದೊಡ್ಡಗುಣಿ ಗ್ರಾಮ ಮತ್ತು ಹಾಗಲವಾಡಿ ಹೋಬಳಿಯ ಬೋಸಿಂಗನ
ಹಳ್ಳಿ, ಎರಚಲುಕಟ್ಟೆಗಳ ಗ್ರಾಮಗಳ ಸರ್ಕಾರಿ ಜಮೀನಿನ ಕಡತಗಳನ್ನು ತಿದ್ದಿರುವುದು ಬೆಳಕಿಗೆ ಬಂದಿದೆ.
ಅಕ್ರಮದ ಬಗ್ಗೆ ಮಾಹಿತಿ ನೀಡಿದ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಅವರು ಜಮೀನು ದಾಖಲಾತಿಗಳ ಕಣ್ಮರೆ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನಲೆಯಲ್ಲಿ ಸತ್ಯಾ ಸತ್ಯತೆಯನ್ನು ಪತ್ತೆ ಹಚ್ಚುವಂತೆ ತಹಶೀಲ್ದಾರ್ ಆರತಿಗೆ ಶಾಸಕರು ಮೌಖಿಕ ಸೂಚನೆ ನೀಡಿದ ಮೇರಿಗೆ ತನಿಖೆ ನಡೆಸಿದ ತಹಶೀಲ್ದಾರ್ ಅವರಿಗೆ ಹಗರಣದ ನಡೆದಿರುವುದು ಬಯಲಾಗಿದೆ.
ಅವಶ್ಯವಿದ್ದ ಕೆಲ ದಾಖಲೆಗಳ ರೆಕಾರ್ಡ್ ರೂಂ ನಲ್ಲಿ ಹುಡುಕಿದ ಸಂದರ್ಭದಲ್ಲಿ ಈ ನಕಲಿ ಸಹಿ, ದಾಖಲೆ ಸೃಷ್ಟಿ ದಂಧೆ ಮಾಡಿರುವ ಅನುಮಾನ ತಹಶೀಲ್ದಾರ್ ಬಿ.ಆರತಿ ಅವರ ಗಮನಕ್ಕೆ ಬಂದಿದೆ.
ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗರ್ ಹುಕುಂ ಮಂಜೂರಾತಿ ನಕಲಿ ದಾಖಲೆ ಸೃಷ್ಠಿಗೆ ಮುಂದಾದ ತಂಡವನ್ನು ಹಿಡಿಯಲು ಗುಬ್ಬಿ ಪೊಲೀಸ್ ಠಾಣೆಗೆ ತಹಶೀಲ್ದಾರ್ ಗ್ರೇಡ್ 2 ಶಶಿಕಲಾ ಅವರ ಮೂಲಕ ದೂರು ನೀಡಿ ರೆಕಾರ್ಡ್ ರೂಂ ನ ನೌಕರ ಸತೀಶ್ ಅವರನ್ನ ತೀವ್ರ ತನಿಖೆಗೆ ಒಳಪಡಿಸಿದ ಬಳಿಕ ಬಹಳ ಜನರ ಹೆಸರು ಹೊರ ಬಂದಿದೆ. ನಂತರ ಮಧ್ಯವರ್ತಿಗಳಾಗಿ ದಂಧೆಗೆ ಮುಂದಾದ ಕರಿಯಣ್ಣ, ರಾಜಣ್ಣ, ರಾಜೇಶ್ ಇತರರನ್ನು ತನಿಖೆಗೆ ಒಳಪಡಿಸಲಾಗಿದೆ.
ಸುಮಾರು 20 ಮಂದಿಯನ್ನು ವಿಚಾರಣೆ ನಡೆಸಿ ಉಪ ತಹಶೀಲ್ದಾರ್ ಚೇತನ್ ಸೇರಿದಂತೆ ಒಟ್ಟು ಏಳು ಮಂದಿಯನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.